ಬಿ.ಸಿ.ರೋಡು ಸರ್ಕಲ್, ಬಡ್ಡಕಟ್ಟೆ, ಕೊಟ್ರಮಣಗುಂಡಿ, ಕೈಕಂ¨, ಬಿ.ಸಿ.ರೋಡ್ ಬಸ್ಸ್ ನಿಲ್ದಾಣ, ಕೈಕುಂಜೆ, ಗೂಡಿನಬಳಿ, ಪಾಣೆಮಂಗಳೂರು ಪೇಟೆ, ಮಸೀದಿ ಬಳಿ, ನಂದಾವರ ದೇವಸ್ಥಾನದ ಹತ್ತಿರ, ಶಾರದಾ ಹೈಸೂಲ್ ಎದುರು, ಬೋಗೋಡಿ, ಮೆಲ್ಕಾರ್ ಪೇಟೆ……ಮೊದಲಾದೆಡೆಗೆ ನಿಮಗೆ ಸ್ವಾಗತ. ಓದುತ್ತಿರುವವರು ಕಸರಾಜ. ಮುಖ್ಯಾಂಶಗಳು. ನಾವು ಕಸಗಳು ಸಾರ್, ಕಸಗಳು. ಹಾಗೆಂದು ನೀವು ಕುರಿಗಳು ಸಾರ್ ಕುರಿಗಳು ಎಂದರೆ ನಿಮಗೆ ಬೇಸರವಾಗಬಹುದೇನೋ?. ಇನ್ನೇನು ಹೇಳಲಿ. ಮೇಲ್ಕಾಣಿಸಿದ ಎಲ್ಲಾ ಪೇಟೆಗಳಲ್ಲಿ ನನ್ನ ಕುಟುಂಬದವರು ರಾಶಿ ರಾಶಿಯಾಗಿ ಬಿದ್ದು ಕೊಳೆತು ನಾರುತ್ತಿದ್ದಾರೆ. ಮಲೇರಿಯಾ, ಡೆಂಗ್ಯು…ಇನ್ನೇನೋ ಕಾಯಿಲೆಗಳಿಗೆ ಉಚಿತವಾಗಿ ಬೆಂಬಲ ನೀಡುತ್ತಿದ್ದಾರೆ. ಆದರೆ ನೀವು ಸುಮ್ಮನಿದ್ದೀರಿ ಎಂದರೆ? ನಾನಾದರೂ ಯಾರನ್ನು ದೂರಲಿ?
ಪರಿಸರ ಸಚಿವರು ನಿರ್ಮಲ ಬಂಟ್ವಾಳ ಯೋಜನೆಗೆ ಚಾಲನೆ ನೀಡಿದ್ದಾರೆ, ಪುರಸಭೆಯವರು ತ್ಯಾಜ್ಯ ವಿಲೇವಾರಿಗೆ ಅದೇನೋ ಕಸರತ್ತು ಮಾಡುತ್ತಿದ್ದಾರೆ. ಆರೋಗ್ಯ ಸಚಿವರು ಕಸವನ್ನು ಮಂಗಳೂರಿಗೆ ಕಳುಹಿಸಲು ಸೂಚನೆ ನೀಡಿದ್ದಾರೆ. ಜನರು ಎಲ್ಲೆಂದರಲ್ಲಿ ಕಸವನ್ನು ಬಿಸಾಡುತ್ತಲೇ ಇದ್ದಾರೆ………ಹೀಗೆ ಎಲ್ಲವೂ ಯಥಾಸ್ಥಿತಿ ನಡೆಯುತ್ತಲೇ ಇದೆ. ನಮ್ಮ ರಾಶಿ ಅಲ್ಲಲ್ಲಿ ಎತ್ತರೆತ್ತರಕ್ಕೆ ವಿಶಾಲವಾಗಿ ಬೆಳೆಯುತ್ತಲೇ ಇದೆ. ಅನ್ನ ತಿನ್ನುವ ಮಾನವರಾದ ನಿಮಗೇ ಏನು ಮಾಡಲು ಸಾಧ್ಯವಿಲ್ಲವೆಂದಾದರೆ ನೀವು ತಿಂದು ಬಿಸಾಡಿದ ನಾವಾದರೂ ಏನು ಮಾಡಲು ಸಾಧ್ಯ? ನಾವು ನಮ್ಮ ಕರ್ತವ್ಯವನ್ನಂತೂ ಪ್ರಾಮಾಣಿಕವಾಗಿ ಮಾಡುತ್ತೇವೆ ಎಂಬ ಭರವಸೆ ನಮ್ಮದು. ನಮ್ಮ ಭರವಸೆ ಎಂದರೆ ಅದು ನಿಮ್ಮ ರಾಜಕೀಯದವರ ಭರವಸೆಯಂತಲ್ಲ. ನಾವು ಭರವಸೆ ಕೊಟ್ಟ ಮೇಲೆ ಅದನ್ನು ಮಾಡಿ ತೋರಿಸುತ್ತೇವೆ, ಈಗಾಗಲೇ ತೋರಿಸಿದ್ದೇವೆ. ಆದರೂ ಜನರಿಗೆ/ಜನಪ್ರನಿಧಿಗಳಿಗೆ ಬುದ್ದಿ ಬರಲಿಲ್ಲ ಎಂದರೆ ಅದು ನಮ್ಮ ತಪ್ಪಲ್ಲ.
ಎಲ್ಲೆಂದರಲ್ಲಿ ಬಿದ್ದು ನರಳಾಡುತ್ತಿರುವ ನಮಗೊಂದು ಸೂಕ್ತ ನೆಲೆ ಬೇಕೆಂಬ ಒತ್ತಾಯ ಇಂದು ನಿನ್ನೆಯದಲ್ಲ. ನಮಗೆ ಇನ್ನೂ ಸರಿಯಾದ ನೆಲೆ ಕಲ್ಪಿಸದಿರುವುದು ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ತಪ್ಪು ನಿಜ. ಹಾಗೆಂದು ನಮ್ಮನ್ನು ಎಲ್ಲೆಂದರಲ್ಲಿ ಎಸೆದು ಕೈತೊಳೆದುಕೊಳ್ಳುವುದು ಸುಸಂಸ್ಕøತ ನಾಗರಿಕರ ಲಕ್ಷಣವೂ ಅಲ್ಲ. ಪರಿಸರ ಮತ್ತು ಆರೋಗ್ಯ ಎಂಬ ಎರಡು ಸಚಿವರು ಇರುವ ನಾಡು ನಮ್ಮದು. ಹಾಗೆಂದು ಹೇಳಿಕೊಳ್ಳಲು ನಮಗೆ ನಾಚಿಗೆ, ಇನ್ನು ನಿಮಗೆ ಹೇಗಾಗಬೇಡ? ಪರಿಸರ, ಆರೋಗ್ಯ ಈ ಎರಡು ವ್ಯವಸ್ಥೆಗಳೊಂದಿಗೂ ನಮಗೆ ಅವಿನಾಭಾವ ಸಂಬಂಧವಿದೆ. ಮೊನ್ನೆ ಮೊನ್ನೆ ಇಬ್ಬರು ಸಚಿವರು ಬಿ.ಸಿ.ರೋಡಿನಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರಂತೆ. ಎರಡೂ ಸಭೆಯಲ್ಲೂ ನಮ್ಮ ಬಗ್ಗೆ ಅಷ್ಟೊಂದು ಗಂಭೀರ ಚರ್ಚೆ ನಡೆದಿಲ್ಲವಂತೆ. ಇಬ್ಬರು ಒಟ್ಟಿಗೆ ಕುಳಿತು ಮಾತಾಡಿದರೆ ನಮ್ಮ ಸಮಸ್ಯೆಯೇನೂ ದೊಡ್ಡದಲ್ಲ ಬಿಡಿ. ಯಾಕೆ ಮಾತಾಡುತ್ತಿಲ್ಲ? ಯಾಕೆ ಶಾಶ್ವತ ಪರಿಹಾರ ನೀಡುತ್ತಿಲ್ಲ? ಬಹುಷಃ ಕಸದಲ್ಲೂ ರಾಜಕೀಯ ಮಾಡುತ್ತಾರೆಯೋ?
ಯಾರೂ ಏನೇ ಮಾಡಲಿ. ನಮಗೇನು? ಹಾಗೆಂದು ನಮಗೆ ಎಲ್ಲರೂ ಒಂದೇ. ನಾವು ಎಲ್ಲರಿಂದಲೇ ಹುಟ್ಟಿದವರು, ಎಲ್ಲರಿಂದಲೇ ಬೆಳೆದವರು. ಅದ್ದರಿಂದ ನಮ್ಮಿಂದ ಕೊಡಬೇಕಾದ ಕೊಡುಗೆಗಳನ್ನು ಎಲ್ಲರಿಗೂ ಸಮಾನವಾಗಿ ಕೊಡುವುದು ನಮ್ಮ ಜವಾಬ್ದಾರಿ. ನಮ್ಮನ್ನು ಬೇಗ ಕಳುಹಿಸಬೇಕಾದ ಸ್ಥಳಕ್ಕೆ ಕಳುಹಿಸಿದಿರೋ ನಿಮ್ಮ ಪುಣ್ಯ. ಇಲ್ಲದಿದ್ದರೆ ನಿಮಗೆ ಕಾದಿದೆ ಸೂಕ್ತ ಬಹುಮಾನ. ಮತ್ತೆ ನಮ್ಮನ್ನು ದೂರಬೇಡಿ. ನಮಾಸ್ಕಾರ…ಇತೀ ನಿಮ್ಮವನೇ….ಕಸರಾಜ

By suddi9

Leave a Reply

Your email address will not be published. Required fields are marked *