ಹೀಗೂ ಸಹಾಯ ಮಾಡಬಹುದು ಎಂಬುದಕ್ಕೆ ಈ ತಂಡವೇ ಉದಾಹರಣೆ
ಈ ತಂಡದ ಹೆಸರು ಹಿಂದು ವಾರಿಯರ್ಸ್ ಗ್ರೂಫ್. ಇದು ವಾಟ್ಸಫ್ನಲ್ಲೇ ಬೆಳೆದ ಸಂಘಟನೆ. ಹಾಗೆಂದು ಸಾಮಾಜಿಕ ಜಾಲತಾಣವನ್ನು ಈ ತಂಡ ಯಾವುದೇ ಕೆಟ್ಟ ಕಾರ್ಯಕ್ಕೆ ಬಳಸಿಕೊಳ್ಳದೆ ಬಡವರಿಗೆ ನೆರವಾಗುವ ಅಪೂರ್ವ ಕಾಯಕಕ್ಕೆ ಉಪಯೋಗಿಸಿಕೊಂಡದ್ದು ಈ ಗ್ರೂಫ್ನ ವಿಶೇಷ ಸಾಧನೆ. ಯುವ ಸಮುದಾಯವೇ ಹೆಚ್ಚಿರುವ ಈ ಗ್ರೂಫ್ ತಿಂಗಳ ಹಿಂದೆಯಷ್ಟೇ ರಚನೆಗೊಂಡಿದ್ದರೂ ಮೂರು ಬಡ ಕುಟುಂಬದ ಕಣ್ಣೀರು ಒರೆಸುವ ಮೂಲಕ ಜನಮನ್ನಣೆಗೆ ಪಾತ್ರವಾಗಿದೆ.
ಈ ತಂಡವನ್ನು ಆರಂಭದಲ್ಲಿ ರಚಿಸಿ ನೇತೃತ್ವ ವಹಿಸಿದವರು ಶಿವು ಪುತ್ತೂರು. ಮಂಗಳೂರಿನಲ್ಲಿ ಎಲೆಕ್ಟ್ರೀಕಲ್ ಉದ್ಯೋಗಿಯಾಗಿದ್ದೆಕೊಂಡು ಇವರ ಸ್ನೇಹತರಾದ ಕಿರಣ್ ರೈ,ಪ್ರದೀಪ್, ಸನತ್,ಪ್ರಕಾಶ್,,ಉಮೇಶ್ ಪೂಜಾರಿ,ಯೋಗಿಶ್, ನವಿನ್ , ಮನೋಹರ್,ಪ್ರಸಾದ್,ಸಚಿನ್ ದೀಕ್ಷಿತ್, ಅಕ್ಷಯ್ ಶೆಟ್ಟಿ,ಭವಿತ್, ಸತೀಶ್, ಅಕ್ಷಯ್ ಪೂಜಾರಿ ,ಚೇತನ್,ಪುಷ್ಪರಾಜ್, ಅಜಯ್ ಇವರು ವಾಟ್ಸಫ್ ಮೂಲಕ ಸ್ನೇಹ ಬೆಳೆಸಿ ಬಡವರಿಗೆ ನೆರವಾಗುವ ದಿಟ್ಟ ಹೆಜ್ಜೆಯನ್ನು ಇಟ್ಟವರು. ಆರಂಭದ ಸೇವೆಯ ಸಂದರ್ಭ 31 ಮಂದಿ, ನಂತರ 55 ಮಂದಿ ಸದಸ್ಯರನ್ನು ಕಟ್ಟಿಕೊಂಡ ಈ ತಂಡದಲ್ಲಿ ಈಗ ಸದಸ್ಯರ ಸಂಖ್ಯೆ 67.
ಆರಂಭದಲ್ಲೇ ಮಾಣಿ ಕಡೇಶಿವಾಲಯದ ಬಡಕುಟುಂಬದ ವಿದ್ಯಾರ್ಥಿನಿ ಪ್ರಜ್ನಾ ಅವರ ಪಿಯುಸಿ ವಿದ್ಯಾಬ್ಯಾಸಕ್ಕೆ ಆರ್ಥಿಕ ನೆರವು ನೀಡಿ ಶಿಕ್ಷಣದ ಮಹತ್ವವನ್ನು ಸಾರಿದ ತಂಡ ನಂತರ ಮಂಗಳೂರು ಬೊಂದೇಲ್ ಪಚ್ಚನಾಡಿಯ ಬಡಕುಟುಂಬದ ಪೃಥ್ವಿ ಎಂಬ ವಿದ್ಯಾರ್ಥಿನಿಯ ವಿದ್ಯಾಬ್ಯಾಸಕ್ಕೆ ಧನ ಸಹಾಯ ನೀಡಿದಲ್ಲದ್ದೆ ಅಲ್ಲಿನ ಕುಟುಂಬದ ಕರುಣಾಜನಕ ಕತೆಯನ್ನು ಕಂಡು ಬದುಕು ನಿರ್ವಹಣೆಗೂ ಆರ್ಥಿಕ ನೆರವನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆಯಿತು. ಇತರರೂ ತಂಡದ ಸದಸ್ಯರಾಗಲು, ಇನ್ನಷ್ಟು ಸಂಘಟನೆಗಳು ಇಂತಹ ಮಾನವೀಯ ಸೇವೆಯನ್ನು ನಡೆಸಲು ಸ್ಪೂರ್ತಿಯಾಯಿತು. ಕಷ್ಟದಲ್ಲಿದ್ದವರ ಮನೆ ಬಾಗಿಲಿಗೆ ಹೋಗಿ ಪರಿಸ್ಥಿತಿಯನ್ನು ಅರ್ಥೈಯಿಸಿಕೊಂಡು ಮನ ಕರಗಿಸಿಕೊಳ್ಳುವ ಯುವಕರು ಪರಸ್ಪರ ತಂಡದ ಸದಸ್ಯರಿಂದಲೇ ದುಡ್ಡು ಸಂಗ್ರಹಿಸಿ ನೆರವು ನೀಡುವ ಈ ಯುವಕರ ಸಾಧನೆಯನ್ನು ನಿಜಕ್ಕೂ ಮೆಚ್ಚುವಂತದ್ದೇ. ಶಹಬ್ಬಾಸ್ ಎನ್ನುವಂತದ್ದೇ.


ಇದೀಗ ತಂಡದ ಮುಂದಿರುವುದು ಬಡಕುಟುಂಬವೊಂದಕ್ಕೆ ಮನೆ ಕಟ್ಟಲು ಆರ್ಥಿಕ ನೆರವನ್ನು ನೀಡುವ ಬಲು ದೊಡ್ಡ ಸವಾಲು. ತಂಡದ ಮೂರನೇ ಸೇವಾ ಯೋಜನೆಯಾಗಿ ಈ ಕಾರ್ಯವನ್ನು ತಂಡ ಕೈಗೆತ್ತಿಕೊಂಡಿದ್ದು ಈಗಾಗಲೇ ಮನೆಕಟ್ಟಲು 45 ಸಾವಿರ ರೂಪಾಯಿಯ ನೆರವನ್ನು ನೀಡಿದೆ. ಇನ್ನಷ್ಟು ಆರ್ಥಿಕ ಸಹಾಯಧನ ನೀಡುವ ಮೂಲಕ ಕಷ್ಟದಲ್ಲಿರುವ ಬಡಕುಟುಂಬಕ್ಕೆ ಸೂಕ್ತ ಸೂರು ಒದಗಿಸಲು ನಿರ್ಧರಿಸಿದೆ.
ಕುಟುಂಬದ ಕಣ್ಣೀರ ಕತೆ ಇದು:
ಕಾರ್ಕಳ ತಾಲೂಕಿನ ಬಜಗೋಳಿ ಯಾ ಕಡಾರಿ ಸಮೀಪದ ಇಳಿ ವಯಸ್ಸಿನ ದಂಪತಿ ಸಹಿತ ಎರಡು ಮಕ್ಕಳ ಕುಟುಂಬವಿದು. ಇವರಿಗೆ ಕೂರಲು ಸೂರಿಲ್ಲ. ಅನೇಕ ವರ್ಷದಿಂದ ಈ ಕುಟುಂಬ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ, ಅಲ್ಲಲ್ಲಿ ಜೋತು ಬಿದ್ದಿರುವ ಜೋಪಡಿಯಲ್ಲಿ ಬದುಕು ಸಾಗಿಸಿದೆ. ಮನೆಯ ಯಜಮಾನ ಸಾಧು ಪೂಜಾರಿಗೆ ಕೂಲಿಯೇ ಆಧಾರ. ಅದರಲ್ಲಿ ಮನೆಯ ಖರ್ಚು, ಮಕ್ಕಳ ವಿದ್ಯಾಬ್ಯಾಸದ ಖರ್ಚು ಹಾಗೂ ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುವ ಹೆಂಡತಿ ಜಾನಕಿ ಪೂಜಾರ್ತಿಯ ಮದ್ದಿನ ಖರ್ಚು. ಇವೆಲ್ಲವನ್ನು ಸರಿದೂಗಿಸುವುದೇ ಅಸಾಧ್ಯವಾಗಿರುವಾಗ ಇನ್ನು ಮನೆ ಕಟ್ಟುವ ಮಾತೆಲ್ಲಿ? ಅದು ಅವರ ಪಾಲಿಗೆ ಕನಸು, ಪ್ರಜಾಪ್ರಭುತ್ವದ ನಾಡಿನಲ್ಲಿದ್ದ
ಸೂರಿಗಾಗಿ ದಾರಿ ಕಾಣದ ಬಡವನ ಸ್ವಾಭಿಮಾನದ ಮನಸ್ಸು.
ಇವರಿಗೆ ಮನೆ ಕಟ್ಟಿಕೊಡಲು ಬಜಗೋಳಿ ವಲಯದ ಭಜರಂಗದಳದ ಸದಸ್ಯರು ಮತ್ತು ಬೀಯಿಂಗ್ ತುಳುವ ಹೆಲ್ಫ್ ಫೌಂಡೇಶನ್ ಮುಂದೆ ಬಂದಿದೆ. ಈಗಾಗಲೇ ಪಂಚಾಗದ ಕೆಲಸವೂ ಪೂರ್ಣಗೊಂಡಿದೆ. ಆದರೆ ಯೋಜನೆ ಪೂರ್ಣಗೊಳ್ಳಲು ಆರ್ಥಿಕ ನೆರವಿನ ಅಗತ್ಯವಿದೆ. ಹಿಂದು ವಾರಿಯರ್ಸ್ ಗ್ರೂಫ್ಗೆ ಬಂದ ಮನವಿಯಂತೆ ತಂಡ ಅಲ್ಲಿಗೆ ಧಾವಿಸಿದೆ. ಅಲ್ಲಿನ ಪರಿಸ್ಥಿತಿಯನ್ನು ಕಂಡು ಬೆರಗಾಗಿದೆ. ಈಗಾಗಲೇ ಸಹಾಯಧನ ನೀಡಿದ್ದು ಅವಶ್ಯಕತೆ ಕಂಡು ಬಂದಲ್ಲಿ ಮತ್ತಷ್ಟು ಆರ್ಥಿಕ ಸಂಪನ್ಮೂಲವನ್ನು ಕ್ರೋಡಿಕರಿಸಿ ನೀಡಲಾಗುವುದು ಎನ್ನುತ್ತಾರೆ ತಂಡದ ಮುಖ್ಯಸ್ಥ ಶಿವು ಪುತ್ತೂರು. ಇವರೊಡನೆ ಕೈಜೋಡಿಸಬೇಕಾಗಿದೆ ಸಹೃದಯರು.
ಗೋಪಾಲ ಅಂಚನ್



