ಬಂಟ್ವಾಳ, ಜೂ. 29: ಮಂಚಿ ಗ್ರಾಮದ ನೆತ್ತರಕೋಡಿ ನಿವಾಸಿ, ಗಾರೆ ಕೆಲಸದ ಪ್ರಭಾಕರ ಮೂಲ್ಯರ ಮನೆಗೆ ಜೂ. 29ರಂದು ಮಧ್ಯಾಹ್ನ ನುಗ್ಗಿದ ಕಳ್ಳರು ಸುಮಾರು ಹತ್ತು ಪವನ್ ಚಿನ್ನಾಭರಣ, 2500 ನಗದು ಅಪಹರಿಸಿದ್ದಾರೆ. ಮನೆಯ ಹಿಂಬದಿ ಬಾಗಿಲನ್ನು ಒಡೆದ ಕಳ್ಳರು, ಮನೆಯ ಒಳಗೆ ಕಪಾಟಿನ ಲಾಕನ್ನು ಯಾವುದೋ ಸಾಧನದಿಂಧ ಮುರಿದು ಬಾಗಿಲು ತೆರೆದಿದ್ದರು.
ಕಳವಿನಲ್ಲಿ ಎರಡು ಚೈನ್, ಒಂದು ನೆಕ್ಲೆಸ್, ಎರಡು ಸೆಟ್ ಬೆಂಡೋಲೆ ಸೇರಿದೆ. ಇದರ ಒಟ್ಟು ಮೌಲ್ಯ ಅಂದಾಜು ಮೌಲ್ಯ 85 ಸಾವಿರ ಎಂದು ಪೊಲೀಸರು ತಿಳಿಸಿದ್ದಾರೆ. ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರ ಪತ್ನಿ ಸುಮತಿ ಕರ್ತವ್ಯದಲ್ಲಿದ್ದು ನಂತರ ಮನೆಗೆ ಬಂದು ನೋಡಿದಾಗ ಹಿಂಬದಿ ಬಾಗಿಲು ಮುರಿದು ಹೋಗಿದ್ದು ಗಮನಕ್ಕೆ ಬಂದಿತ್ತು. ತಕ್ಷಣ ಅವರು ಮಾಹಿತಿ ನೀಡಿದ್ದು ಬಳಿಕ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿತ್ತು.
ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ತನಿಖೆ ನಡೆಸಿದ್ದರು. ಸ್ಥಳಕ್ಕೆ ಬಂದಿದ್ದ ಶ್ವಾನವು ಮನೆಯ ಹಿಂಬದಿ ಗುಡ್ಡಕ್ಕೆ ಓಡಿದ್ದು ಅಲ್ಲಿ ಬಂಗಾರವನ್ನು ಇಟ್ಟಿದ್ದ ಒಂದು ಖಾಲಿ ಬಾಕ್ಸ್ನ್ನು ಕಳ್ಳರು ಎಸೆದು ಹೋಗಿದ್ದು ಅದನ್ನು ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ.
ಮನೆಯ ಮಕ್ಕಳು ಶಾಲೆಗೆ ಹೋಗಿದ್ದರು. ಮಹಿಳೆ ಅಂಗನವಾಡಿ ಕರ್ತವ್ಯಕ್ಕೆ ಹೋಗಿದ್ದರು. ಯಜಮಾನ ಕೆಲಸಕ್ಕೆ ಹೋಗಿದ್ದನ್ನು ನೋಡಿಕೊಂಡು ಬೆಳಿಗ್ಗೆ 9ರಿಂದ ಮಂದ್ಯಾಹ್ನ 12ಗಂಟೆ ಒಳಗೆ ಕೃತ್ಯ ನಡೆಸಲಾಗಿತ್ತು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಘಟನೆಯಲ್ಲಿ ಹಲವು ಶಂಕೆಗಳು ವ್ಯಕ್ತವಾಗಿದ್ದು ಯಾರೋ ಪೂರ್ವ ಮಾಹಿತಿ ಇದ್ದವರು ಮನೆಮಂದಿ ಹೊರಗೆ ಹೋಗಿರುವುದನ್ನು ಖಚಿತ ಪಡಿಸಿಕೊಂಡು ಕಳವು ನಡೆಸಿದ್ದಾಗಿ  ತರ್ಕಿಸಲಾಗಿದೆ. ಹತ್ತಿರದಲ್ಲಿ ಬೇರೆ ಮನೆಗಳು ಇಲ್ಲದ ಕಾರಣ ಕಳ್ಳರಿಗೆ ಕೃತ್ಯ ನಡೆಸಲು ಸುಲಭವಾಗಿತ್ತು ಎನ್ನಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಎಸ್ಐ ರಕ್ಷಿತ್ ಮತ್ತು ಅಪರಾಧ ಪತ್ತೆ ವಿಭಾಗ ಪೊಲೀಸರು ತನಿಖೆ ಸ್ಥಳಕ್ಕೆ ಹೋಗಿದ್ದು ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *