ಬಂಟ್ವಾಳ: ನೇತ್ರಾವತಿ ನದಿ ತುಂಬೆ ನೂತನ ಡ್ಯಾಂ ನಿರ್ಮಾಣದ ಮಣ್ಣಿನ ರಸ್ತೆ ಮಳೆಯ ನೀರಿನಿಂದ ಶುಕ್ರವಾರ ರಾತ್ರಿ ಕೊಚ್ಚಿ ಹೋಗಿದ್ದು ಗುತ್ತಿಗೆ ಕಂಪೆನಿಯ ಪ್ರಧಾನ ಸಲಹೆಗಾರ ಶ್ಯಾಮಸುಂದರ ರಾವ್ ಜೂ. 13ರಂದು ಬೆಳಿಗ್ಗೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.
ಸರಕಾರವು ಕಾಮಗಾರಿಯನ್ನು ಶೀಘ್ರ ಕೆಲಸ ಮಾಡಿ ಮುಗಿಸಲು ಸೂಚಿಸಿದ್ದು, ಮಳೆಯ ಕಾರಣವಾಗಿ ಕಾಮಗಾರಿ ನಿಲ್ಲಿಸಲು ಅಪೇಕ್ಷಿಸಿದರೂ ಅನುಮತಿ ನೀಡಿಲ್ಲ ಎಂದು ಪತ್ರಕರ್ತರಲ್ಲಿ ಹೇಳಿಕೊಂಡರು.

ಕಳೆದ ಒಂದು ವಾರದಿಂದ ನೂತನ ಡ್ಯಾಂ 5 ಮತ್ತು 6ನೇ ಪಿಲ್ಲರ್ ಬ್ಲಾಕ್ನಲ್ಲಿ ಕೆಲಸ ನಡೆಯುತ್ತಿದ್ದು ಮಳೆಯಿಂದಾಗಿ ಹರಿದು ಬಂದು ನೀರಿನಿಂದ ಹಾನಿ ಆಗಿದ್ದಾಗಿ ವಿವರಿಸಿದ್ದಾರೆ.
ಸರಕಾರದ ಸೂಚನೆಯಂತೆ ಮುಂದಿನ ಹತ್ತು ದಿನಗಳ ಕಾಲ ಕಾಮಗಾರಿ ನಿರ್ವಹಿಸಬೇಕಾಗಿತ್ತು. ಮಳೆಯ ಕಾರಣವಾಗಿ ಕಾಮಗಾರಿಯನ್ನು ಅನಿವಾರ್ಯ ಸ್ಥಗಿತ ಮಾಡುತ್ತಿರುವುದಾಗಿ ಅಭಿಪ್ರಾಯಪಟ್ಟರು.
ನದಿ ಮೇಲ್ಗಡೆ ಎಎಂಆರ್ ಡ್ಯಾಂನಿಂದ ವಿದ್ಯುತ್ ಉತ್ಪಾದಿಸಲು 150 ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರನ್ನು ಹರಿಯ ಬಿಡಬೇಕಿತ್ತು. ಆದರೆ ಅವರು 400 ಕ್ಯೂಮೆಕ್ಸ್ ಪ್ರಮಾಣದಲ್ಲಿ ನೀರನ್ನು ಹರಿಯ ಬಿಟ್ಟಿರುವುದು ವಿಪರೀತ ನೀರು ಹರಿಯುವಿಕೆಗೆ ಕಾರಣವಾಗಿದ್ದು ಕಾಮಗಾರಿ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದ್ದಾಗಿ ಹೇಳಿದ್ದಾರೆ.
ತುಂಬೆ ಡ್ಯಾಂನಲ್ಲಿ ಹೈದ್ರಾಬಾದಿನ ಋತ್ವಿಕ್ ಮತ್ತು ಸ್ವಪ್ನ ಗುತ್ತಿಗೆ ಕಂಪೆನಿ ಜಂಟಿಯಾಗಿ ಕಾಮಗಾರಿ ನಿರ್ವಹಿಸುತ್ತಿದೆ. ಎಎಂಆರ್ ಡ್ಯಾಂ ನಿರ್ಮಾ ಣವನ್ನು ಇದೇ ಕಂಪೆನಿ ನಿರ್ಮಿಸಿತ್ತು. ಪ್ರಸ್ತುತ ಅಕಾರಿಗಳ ಮಟ್ಟದಲ್ಲಿ ಹೊಂದಾಣಿಕೆ ಇಲ್ಲದೆ ಸಮಸ್ಯೆ ಎದುರಾಗಿದೆ ಎಂದು ವಿವರಿಸಿದ್ದಾರೆ.
ಮೇ 15ರಂದು ಮಾಹಿತಿ ನೀಡದೆ ನೀರು ಹೊರ ಹರಿಯಲು ಬಿಟ್ಟಿದ್ದರಿಂದ ಗುತ್ತಿಗೆ ಕಂಪೆನಿಗೆ ಸುಮಾರು 1 ಕೋಟಿಗೂ ಮಿಕ್ಕಿದ ನಷ್ಟ ಉಂಟಾಗಿತ್ತು. ಅದನ್ನು ಪಾವತಿಸಲು ಸರಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಇಲ್ಲವಾಗಿದೆ.
ಜೂ. 12ರಂದು ರಾತ್ರಿಯೂ ರಸ್ತೆಗೆ ಹಾನಿಯಾಗಿದೆ. ಕಾಮಗಾರಿ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದ್ದು ಅದರಿಂದ ಉಂಟಾಗಿರುವ ನಷ್ಟದಿಂದ ಕಾಮಗಾರಿ ನಿರ್ವಹಿಸಲು ಸಾಧ್ಯವಾಗದ ಮಟ್ಟಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ.



