ಧರ್ಮಶ್ರದ್ಧೆ ಸಂಸ್ಕಾರಕ್ಕೆ ಪರಮ ವಿದ್ಯೆ: ಪೆರ್ಣಂಕಿಲ ಹರಿದಾಸ್ ಭಟ್
ಮುಂಬಯಿ : ಹುಟ್ಟೂರನ್ನು ತೊರೆದು ಹೊಟ್ಟೆಪಾಡನ್ನು ಅರಸಿ ರಾಷ್ಟ್ರದ ಆರ್ಥಿಕ ರಾಜಧಾನಿಗೆ ವಲಸೆ ಬಂದ ನಮ್ಮ ಪೂರ್ವಜರು ಬರುವಾಗ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೊತ್ತು ಬಂದು ಸಂಸ್ಕಾರದ ಬಾಳಿಗೆ
ಮಹತ್ವವನ್ನಿತ್ತಿದ್ದರು. ಧರ್ಮನಿಷ್ಠೆಯುಳ್ಳ ಅವರು ತಮ್ಮ ಜೊತೆಗೆ ತವರೂರು, ತಮ್ಮ ನಂಬಿಕಸ್ಥ ಕುಲದೈವ, ದೇವರುಗಳ ಪ್ರಸಾದವನ್ನು ಹೊತ್ತುಕೊಂಡು ಬಂದು ಬಾಳೊಂದನ್ನು ಬೆಳಗಿಸಿದರು.
ಅದೇ ಧರ್ಮನಿಷ್ಠೆ ಇಂದು ಮರವಾಗಿ ಬೆಳೆದು ನಮಗೆಲ್ಲಾ ಧರ್ಮ ಸಂಸ್ಕೃತಿಯ ನೆರಳನ್ನು ನೀಡುತ್ತಿರುವ ಫಲವೇ ನಮ್ಮ ದೇವರುಗಳ ಪುನರ್ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ ಮಹೋತ್ಸವಕ್ಕೆ ಸಾಕ್ಷಿಯಾಗಿದೆ. ಮತ್ತು ಈ ಪರಿಸರವನ್ನು ಪಾವಿತ್ಯ್ರತೆಗೊಳಿಸಿದೆ. ಧರ್ಮಶ್ರದ್ಧೆ ಸಂಸ್ಕಾರಕ್ಕೆ ಪರಮ ವಿದ್ಯೆ ಆಗಿದ್ದು ಅದನ್ನು ಸದ ನಮ್ಮ ಪೀಳಿಗೆಯಲ್ಲಿ ರೂಪಿಸಿ ಧಾರ್ಮಿಕತೆ ಮೂಲಕ ಸಂಸ್ಕಾರಯುತ ಬಾಳಿಗೆ ಬದ್ಧರಾಗೋಣ ಎಂದು ಗಾಂವ್‍ದೇವಿ ಅಂಬಿಕಾ ಆದಿನೇಶ್ವರ ಮಹಾ ಗಣಪತಿ ದೇವಸ್ಥಾನ ವಿದ್ಯಾವಿಹಾರ ಇದರ ಪ್ರಧಾನ ಅರ್ಚಕ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ಕರೆಯಿತ್ತರು. ಇಂದಿಲ್ಲಿ ಅಂಧೇರಿ ಪೂರ್ವದ ಬಾಪ್ಟಿಸ್ಟವಾಡಿ ಶ್ರೀ ದತ್ತ ಜಗದಂಬಾ ದೇವಸ್ಥಾನದ ಶ್ರೀ ಮಹಾಗಣಪತಿ ಹಾಗೂ ದತ್ತ ಜಗದಂಬಾ ದೇವರುಗಳ ಪುನರ್ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ ಮಹೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿ ಹರಿದಾಸ್ ಭಟ್ ಸದ್ಭಕರ್ತನ್ನು ಹರಸಿದರು. ಕೇಂದ್ರ ಸರ್ಕಾರದ ಮಾಜಿ ಸಚಿವ ಗುರುದಾಸ್ ಕಾಮತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಕ್ಷೇತ್ರದ ಉನ್ನತಿಯಿಂದ ಮನುಜಕುಲ ಪಾವನವಾಗಲಿ ಎಂದರು. ಉದ್ಯಮಿಗಳಾದ ದಿವಾಕರ್ ಶೆಟ್ಟಿ ಮುದ್ರಾಡಿ, ರವೀಂದ್ರನಾಥ ಭಂಡಾರಿ, ಗೋಪಾಲ್ ಎಸ್.ಪುತ್ರನ್, ಹರೀಶ್ ಆರ್.ಕೋಟ್ಯಾನ್, ಡಾ| ಶಿವರಾಮ್ ಕೆ.ಭಂಡಾರಿ ಅತ್ತೂರು, ಯಶವಂತ್ ಶೆಟ್ಟಿಮತ್ತಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು. ದೇವಸ್ಥಾನ ಸಮಿತಿ ಉಪಾಧ್ಯಕ್ಷ ಶೇಖರ್ ಎಂ.ಅಂಚನ್, ಕಾರ್ಯದರ್ಶಿ ಯಶವಂತ್ ಅಮೀನ್ ಮತ್ತು ಕೋಶಾಧಿಕಾರಿ ಚಂದ್ರಕಾಂತ್ ಶ್ರೀಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಂದ ಕರ್ಕೇರಾ, ಮಹೇಶ್ ಶಾಂತಿ ಹೆಜ್ಮಾಡಿ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಅಸೀನರಾಗಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ದಯಾನಂದ ಅಂಚನ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಅಮೀತಾ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸುರೇಂದ್ರಕುಮಾರ್ ಹೆಗ್ಡೆ ಪ್ರಸ್ತಾವಿಕ ನುಡಿಗಳನ್ನಾಡಿ ಅಭಾರ ಮನ್ನಿಸಿದರು. ಶ್ರೀ ಮಹೇಶ್ ಶಾಂತಿ ಹೆಜ್ಮಾಡಿ ಅವರು ತಮ್ಮ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಸಂಜೆ ಬಾಲ ಕಲಾವಿದರು `ಭರತ ನಾಟ್ಯ’ ಹಾಗೂ `ಕೋರ್ದಬ್ಬು ತನ್ನಿಮಾನಿಗ’ ತುಳು ಯಕ್ಷಗಾನ ಬಯಲಾಟ ಪ್ರದರ್ಶಿಸಿದರು.




