ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ಬಿ.ಸಿ.ರೋಡ್ ಟ್ರಾಫಿಕ್ ಜಾಮ್ ಸಮಸ್ಯೆಯಿಂದಾಗಿ ಈಗ ಬಿಝೀ ರೋಡಾಗಿ ಪರಿವರ್ತನೆಯಾದಂತಿದೆ. ಇಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಯಾವುದೇ ಕ್ರಮ ಕೈಗೊಂಡರೂ ಸದ್ಯಕ್ಕೆ ಪರಿಹಾರ ಕಾಣವು ಲಕ್ಷಣಗಳಿಲ್ಲ. ಮಂಗಳವಾರವೂ ಬೆಳಿಗ್ಗೆಯಿಂದಲೇ ರಾತ್ರಿರೆಗೂ ಬಿ.ಸಿ.ರೋಡಿನ ಹೆದ್ದಾರಿ ಉದ್ದಕ್ಕೂ ವಾಹನಗಳು ಸರತಿ ಸಾಲಿನಲ್ಲಿ ನಿಂತು ನಿದಾನವಾಗಿ ಮುಂದಕ್ಕೆ ಚಲಿಸುತ್ತಿದ್ದುದರಿಂದ ಜನಸಾಮಾನ್ಯರು ಪರದಾಡುವಂತಾಯಿತು. ರಸ್ತೆ ದಾಟಲು ಸಾರ್ವಜನಿಕರು ಹರಸಾಹಸ ಪಡುವಂತಾಯಿತು.
ಈ ಸಮಸ್ಯೆ ಪರಿಹಾರಕ್ಕೆ ಟ್ರಾಫಿಕ್ ಠಾಣೆಯನ್ನು ತೆರೆದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇಲ್ಲಿ ಎರಡು ಪ್ರಮುಖ ಹೆದ್ದಾರೆಗಳಾದ ಮಂಗಳೂರು – ಮೂಡಿಗೆರೆ, ಮಂಗಳೂರು – ಬೆಂಗಳೂರು ಸಂಧಿಸುವ ಮತ್ತು ಹಾದು ಹೋಗುವ ಪ್ರಮುಖ ಸ್ಥಳ ಬಿ.ಸಿ.ರೋಡಾಗಿದೆ. ಇಲ್ಲಿ ಅವೈಜ್ಞಾನಿಕವಾಗಿ ಮೇಲ್ಸೇತುವೆ ನಿರ್ಮಿಸಿದ ಬಳಿಕ ಟ್ರಾಫಿಕ್ ಜಾಮ್ ಸಮಸ್ಯೆ ಬಿಗಡಾಯಿಸಿದೆ. ಬಿ.ಸಿ.ರೋಡಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಮೂಲ ಸ್ಥಳ ಇಲ್ಲಿನ ಮುಖ್ಯ ವೃತ್ತ . ಮಂಗಳೂರು – ಮೂಡಿಗೆರೆ, ಮಂಗಳೂರು – ಬೆಂಗಳೂರು ರಾ.ಹೆದ್ದಾರಿಯನ್ನು ಸಂಗಮಿಸುವ ಈ ಸ್ಥಳ 7 ಕಡೆಗಳಿಗೆ ಚಲಿಸಲು ಅವಕಾಶ ಕಲ್ಪಿಸುವ ಪ್ರಮುಖ ಕೇಂದ್ರ ಸ್ಥಳವಾಗಿದೆ. ಈ 7 ಕಡೆಯಿಂದ ಏಕ ಕಾಲದಲ್ಲಿ ವಾಹನಗಳು ನುಗ್ಗಿ ಬರುವುದರಿಂದ ಇವುಗಳನ್ನು ನಿಯಂತ್ರಿಸಲು ಬೇಕಾಗುವಷ್ಟು ಸ್ಥಳಾವಕಾಶ ಇಲ್ಲ. ಅಗಲ ರಸ್ತೆ ಹಾಗೂ ಸೂಕ್ತ ವ್ಯವಸ್ಥೆ ಇಲ್ಲಿಲ್ಲದ ಕಾರಣ ಪ್ರತಿನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಟ್ರಾಫಿಕ್ ಪೊಲೀಸರು ಸ್ಥಳದಲ್ಲಿದ್ದು ನಿಯಂತ್ರಣಕ್ಕೆ ಹರಸಾಹಸ ಪಟ್ಟರೂ ಸಾದ್ಯವಾಗುತ್ತಿಲ್ಲ. ಇದೀಗ ರೈಲ್ವೆ ಮೇಲ್ಸೇತುವೆ ನಿರ್ಮಾಣದ ನೆಪದಲ್ಲಿ ಮೊದಲೆ ಇಕ್ಕಟ್ಟಾದ ಚತುಸ್ಪಥ ಮೇಲ್ಸೇತುವೆ ಹೆದ್ದಾರಿಗೆ ಸಂಧಿಸುವ ಸ್ಥಳದಲ್ಲಿ ದಿಬ್ಬದಂತೆ ರಸ್ತೆಯನ್ನು ಎತ್ತರಿಸಿರುವುದರಿಂದ ವಾಹನಗಳ ಸರಾಗ ಸಂಚಾರಕ್ಕೆ ತೊಡಕಾಗಿದೆ. ಈಗ ಸೇತುವೆ ನಿರ್ಮಾಣ ಕಾಮಗಾರಿ ವೇಗವನ್ನು ಪಡೆದಿದ್ದು ಮಂಗಳವಾರ ಡಾಮರಿಕರಣ ನಡೆದಿದ್ದುದರಿಂದಾಗಿ ಟ್ರಾಫಿಕ್ ಸಮಸ್ಯೆ ಎದುರಾಯಿತು. ಡಿವೈಡರ್ ತೆರವು ಯಾವಾಗ ? ಬಿ.ಸಿ.ರೋಡಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಮೂಲ ಸ್ಥಳ ಇಲ್ಲಿನ ಮುಖ್ಯ ಜಂಕ್ಷನ್ನಲ್ಲಿರುವ ಡಿವೈಡರನ್ನು ತೆರವುಗೊಳಿಸಿ ಇಲ್ಲಿ ವೃತ್ತ(ಸರ್ಕಲ್) ನಿರ್ಮಿಸಿದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದೆಂಬ ಹಿನ್ನಲೆಯಲ್ಲಿ ಕಳೆದವಾರ ಇಲ್ಲನ ಬಿಜೆಪಿ ಮುಖಂಡರಾದ ಗೋವಿಂದ ಪ್ರಭು ಹಾಗೂ ತುಂಗಪ್ಪ ಬಂಗೇರ ಅವರು ಹೆದ್ದಾರಿ ಪ್ರಾಧಿಕಾರ ಇಲಾಖೆಯ ಇಂಜಿನಿಯರನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಯನ್ನು ವಿವರಿಸಿದ್ದರು.ಇದೇ ವೇಳೆ ವೃತ್ತ ನಿರೀಕ್ಷಕ ಬೆಳಿಯಪ್ಪ ಅವರು ಕೂಡಾ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಹೆದ್ದಾರಿ ಪ್ರಾಧಿಕಾರ ಇಲಾಖೆಯ ಇಂಜಿನಿಯರವರಲ್ಲಿ ಮನವಿ ಮಾಡಿದ್ದರು. ಮೂರು ದಿನಗಳೊಳಗಾಗಿ ಡಿವೈಡರ್ ತೆರವುಗೊಳಿಸಿ ವೃತ್ತ ನಿರ್ಮಿಸದಿದ್ದಲ್ಲಿ ತಾವೇ ಇದಕ್ಕೆ ಮುಂದಾಗುವ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಡಿವೈಡರ್ ತೆರವೂ ಆಗಿಲ್ಲ. ವೃತ್ತವೂ ನಿರ್ಮಾಣವಾಗಿಲ್ಲ. ಟ್ರಾಫಿಕ್ ಜಾಮ್ ಸಮಸ್ಯೆಯೂ ಬಗೆ ಹರಿದಿಲ್ಲ.








