ಮುಂಬಯಿ : ಬಜ್ಪೆ ಸುಂಕದಕಟ್ಟೆಯ ಶ್ರೀ ಶ್ರೀ ನಿರಂಜನ ಸ್ವಾಮೀಜಿಯವರು ಕಳೆದ 35 ವರ್ಷಗಳಿಂದ ನನಗೆ ಆತ್ಮೀಯರಾಗಿದ್ದವರು. ಅತ್ಯಂತ ಸರಳ ಮುಗ್ಧ ಜೀವಿಯಾಗಿದ್ದು ಅವರ ದೈವೀಕ ಆರಾಧನೆ ಸಾಧನೆ ಮತ್ತು ಆಚgಣೆಗಳಿಂದ ಶ್ರೀ ಸಾಮಾನ್ಯನಿಂದ ಮಧ್ಯಮವರ್ಗ ಮತ್ತು ಪ್ರಸಿದ್ಧರೂ, ಶ್ರೀಮಂತರೂ ಪ್ರಭಾವಿ ವ್ಯಕ್ತಿಗಳ ಜೊತೆಗೆ ಪ್ರಭಾವ ಬೀರಿದವರು.

ಬಜ್ಪೆಯಲ್ಲಿ ಕ್ಷೇತ್ರವೊಂದನ್ನು ನಿರ್ಮಾಣ ಮಾಡಿ ವಿದ್ಯಾಸಂಸ್ಥೆ ಕಟ್ಟಿ ಧಾರ್ಮಿಕದ ಜೊತೆಗೆ ಸಾಮಾಜಿಕ, ಶೈಕ್ಷಣಿಕ ವಿಶೇಷತೆ ವಾರಕರೀ ಭಿಕ್ಷೆ ಅಂದರೆ ತಾನು ಜನರಿಂದಲೇ ಭಿಕ್ಷೆ ಎತ್ತಿ ಅದನ್ನು ದೇವಿಗೆ ಮಾತ್ರವಲ್ಲದೆ ಜನತೆಗೆ ಸಮರ್ಪಿಸಬೇಕೆಂಬ ಭಾವ ಅವರದಾಗಿತ್ತು. ಎಂದೂ ತಮ್ಮನ್ನು ತಾವು ಪ್ರಶಂಸೆ ಮಾಡಿಕೊಂಡವರಲ್ಲ, ಎಂದೂ ಯಾರನ್ನೂ ಟೀಕಿಸಿದವರಲ್ಲ ಅವರ ಈ ಸ್ವಭಾವವೇ ನನಗೆ ಅವರಲ್ಲಿ ಪ್ರೀತಿ ಮತ್ತು ಗೌರವ ಬರುವಂತೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಇದ್ದರೂ ತಮ್ಮ ದೈನಂದಿನ ಚಟುವಟಿಕೆಗಳಲ್ಲಾಗಲಿ ವ್ಯವಹಾರ ಆಚರಣೆಯಲ್ಲಾಗಲಿ ಕುಸಿದವರಲ್ಲ. ಯಕ್ಷಗಾನ ರಂಗ, ತುಳುಭಾಷೆ ನಾಡಿಗೂ ನಿಷ್ಟರಾಗಿ ಸೇವೆ ಸಲ್ಲಿಸಿದವರು. ಅವರ ಆತ್ಮಕ್ಕೆ ಚಿರಶಾಂತಿ ಕೋರುವಂತೆ ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.
