ಬಂಟ್ವಾಳ; ಸಾಮಾಜಿಕ ನ್ಯಾಯದ ಜೊತೆಯಲ್ಲಿ ಸುಂದರ ಸಮಾಜ ನಿರ್ಮಾಣ ಕಾಂಗ್ರೇಸ್ ಕಾರ್ಯಕರ್ತರ ಜವಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮಪಂಚಾಯತ್ ಗಳಲ್ಲಿ ಕಾಂಗ್ರೇಸ್ ಪಕ್ಷದ ಆಡಳಿತವನ್ನು ಅಧಿಕಾರಕ್ಕೆ ತರುವ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಕೈ ಯನ್ನು ಬಲಪಡಿಸುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕರೆ ನೀಡಿದ್ದಾರೆ.


ಗ್ರಾಮಪಂಚಾಯತ್ ಚುನಾವಣೆಯ ಪೂರ್ವ ಸಿದ್ದತೆಯ ಹಿನ್ನೆಲೆಯಲ್ಲಿ ಮಂಗಳವಾರ ಬಿ.ಸಿ.ರೋಡು ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಯ ಣ ಗುರು ಮಂದಿರದಲ್ಲಿ ನಡೆದ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೇಸ್ ಪಕ್ಷ ಸಾಮಾಜಿಕವಾಗಿ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ನಿರಂತರವಾಗಿ ನಡೆಸುತ್ತಿದೆ, ಸ್ವಾಭಿಮಾನ ಹಾಗೂ ಸ್ವಾವಲಂಬಿ ಜೀವನಕ್ಕೆ ಪ್ರೇರೇಪಿಸುವ ನಿಟ್ಟಿನಲ್ಲಿ ಪಕ್ಷ ಹಮ್ಮಿಕೊಂಡಿರುವ ಕಾರ್ಯಕ್ರಮ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನತೆಗೆ ಮನದಟ್ಟು ಮಾಡಿಸುವ ಮೂಲಕ ಕಾರ್ಯಕರ್ತರು ಪಂಚಾಯತ್ ಮಟ್ಟದಲ್ಲಿ ಅವಿರತವಾಗಿ ಶ್ರಮಿಸುವಂತೆ ಮನವಿ ಮಾಡಿದರು. ತಾನೆಂದೂ ಪಕ್ಷ ವಿರೋಧಿಯಂತೆ ವರ್ತಿಸಿಲ್ಲ, ವಿರೊಧಿಗಳನ್ನೂ ಕಾಂಗ್ರೇಸ್ ಸಹಿಸೋದಿಲ್ಲ ಎಂದು ತನ್ನ ಮಾತಿನಲ್ಲಿ ಉಲ್ಲೇಖಿಸಿದ ಸಚಿವರು, ಪುತ್ತೂರು ನಗರಸಭಾ ಸದಸ್ಯತ್ವದಿಂದ ಉಚ್ಚಾಟಿತರಾದ ಜಗದೀಶ್ ಶೆಟ್ಟಿ ಮತ್ತವರ ಬೆಂಬಲಿಗರ ಬಗ್ಗೆ ಉಲ್ಲೇಖಿಸಿದರು. ತಾನು ಜಾತಿ, ಮತ, ಭಾಷೆ ಮೀರಿ ಸರ್ವರ ಕಲ್ಯಾಣಕ್ಕೆ ಪಕ್ಷದ ಸಿದ್ದಾಂತದಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕಾಂಗ್ರೇಸ್ನ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ, ಪಂಚಾಯತ್ ರಾಜ್ಯ-ರಾಷ್ಟ್ರ ರಾಜಕಾರಣದ ಪಂಚಾಗ. ಈ ಪಂಚಾಂಗ ಗಟ್ಟಿಯಾಗಬೇಕಿದ್ದರೆ ಗ್ರಾಮಪಂಚಾಯತ್ ಗಳಲ್ಲಿ ಕಾಂಗ್ರೇಸ್ ಆಡಳಿತವಿರಬೇಕು, ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ ಶೆಟ್ಟಿ, ಮಮತಾಗಟ್ಟಿ, ಮಂಗಳೂರ ಮನಪಾ ಮೇಯರ್ ಜೆಸಿಂತಾ, ಸದಸ್ಯರಾದ ಶಶಿಧರ್ ಹೆಗ್ಡೆ, ಅಪ್ಪಿ, ಬುಡಾ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಪ್ರಮುಖರಾದ ಬಿ.ಹೆಚ್ ಖಾದರ್, ಎ.ಸಿ.ಭಂಡಾರಿ, ಪುರಸಭಾ ಅಧ್ಯಕ್ಷೆ ವಸಂತಿಚಂದಪ್ಪ, ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಪ್ಪ ಗೌಡ, ಜಿನರಾಜ ಆರಿಗ, ಜಿಲ್ಲಾ ಯುವ ಕಾಂಗ್ರೇಸ್ ಅದ್ಯಕ್ಷ ಮಿಥುನ್ ರೈ, ಪದ್ಮಶೇಖರ ಜೈನ್, ರಾಜಶೇಖರ್ ನಾಯ್ಕ್, ಸಂಜೀವ ಪೂಜಾರಿ, ಹೈಡಾ ಸುರೇಶ್, ಸಂಪತ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಲುಕ್ ಮಾನ್ , ಸುದರ್ಶನ್ ಜೈನ್, ಪದ್ಮನಾಭ ರೈ, ಫ್ಲೋಸಿ ಡಿ”ಸೋಜ, ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ಬಾಸ್ ಆಲಿ ಸ್ವಾಗತಿಸಿದರು. ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು

