ಬಂಟ್ವಾಳ: ತಾಲ್ಲೂಕಿನಾದ್ಯಂತ ಸೋಮವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ವಿವಿಧೆಡೆ ಬೃಹತ್ ಗಾತ್ರದ ಹಳೆ ಮರಗಳು ಉರುಳಿ ಬಿದ್ದ ಪರಿಣಾಮ ಸುಮಾರು 60ಕ್ಕೂ ಮಿಕ್ಕಿ ವಿದ್ಯುತ್ ಕಂಬಗಳು ಮುರಿದು ಬಿದ್ದು ಒಟ್ಟು ರೂ 20ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ.
ತಾಲ್ಲೂಕಿನ ಬಂಟ್ವಾಳ, ಬಿ.ಸಿ.ರೋಡ್, ಪಾಣೆಮಂಗಳೂರು, ಮೆಲ್ಕಾರ್, ವಗ್ಗ, ಸಿದ್ಧಕಟ್ಟೆ, ವಿಟ್ಲ, ಮಾಣಿ, ಉಕ್ಕುಡ, ಸಾಲೆತ್ತೂರು ಮೆಸ್ಕಾಂ ಶಾಖೆಗಳ ಪೈಕಿ ಸಿದ್ಧಕಟ್ಟೆ, ಮಾಣಿ, ವಗ್ಗ, ಬಿ.ಸಿ.ರೋಡ್ ಶಾಖೆ ವ್ಯಾಪ್ತಿಯಲ್ಲಿ ಗರಿಷ್ಟ ಪ್ರಮಾಣದ ನಷ್ಟ ಸಂಭವಿಸಿರುವುದು ಕಂಡು ಬಂದಿದೆ.
ತಾಲ್ಲೂಕಿನ ಮಾಣಿ ಪರಿಸರದಲ್ಲಿ ಬೃಹತ್ ಗಾತ್ರದ ಮರಗಳು ಮುರಿದು ಬಿದ್ದ ಪರಿಣಾಮ ಒಟ್ಟು ಮೂರು ವಿದ್ಯುತ್ ಪರಿವರ್ತಕ ಸಂಪೂರ್ಣ ಹಾನಿಗೀಡಾಗಿದ್ದು, ಒಟ್ಟು ರೂ 6ಲಕ್ಷ ಮೊತ್ತದ ನಷ್ಟ ಉಂಟಾಗಿದೆ.
ವಿದ್ಯುತ್ ಕಂಬ ಮುರಿದು ಬಿದ್ದ ಕಡೆಗಳಲ್ಲಿ ಹೊಸ ವಿದ್ಯುತ್ ಕಂಬ ಅಳವಡಿಸಿ ತಂತಿ ಜೋಡಣೆ ಕಾರ್ಯ ಭರದಿಂದ ನಡೆಯುತ್ತಿದ್ದು, ಸೋಮವಾರ ರಾತ್ರಿಯಿಡೀ ಕತ್ತಲೆಯಲ್ಲೇ ಕಳೆದ ಜನತೆಗೆ ಮಂಗಳವಾರ ಮಧ್ಯಾಹ್ನ ವೇಳೆಗೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿದೆ. ವಿದ್ಯುತ್ ಪರಿವರ್ತಕ ಹಾನಿಗೀಡಾದ ಮಾಣಿ ಪರಿಸರದಲ್ಲಿ ಮಾತ್ರ ಹೊಸ ವಿದ್ಯುತ್ ಪರಿವರ್ತಕ ಅಳವಡಿಸುವ ಕಾರ್ಯ ಪೂರ್ಣಗೊಳ್ಳದ ಪರಿಣಾಮ ಮತ್ತೆ ಕತ್ತಲಿನಲ್ಲೇ ಇರುವಂತಾಗಿದೆ. ಮಳೆಗಾಲ ಆರಂಭಕ್ಕೆ ಮೊದಲೇ ವಿದ್ಯುತ್ ತಂತಿ ಹಾದು ಹೋಗಿರುವ ಸ್ಥಳಗಳನ್ನು ಗುರುತಿಸಿ ಅಲ್ಲಿನ ಮರದ ಗೆಲ್ಲು ಕಡಿಯುವ ಕೆಲಸ ಸಮರ್ಪಕವಾಗಿ ನಡೆದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಒಟ್ಟಿನಲ್ಲಿ ಈ ಬಾರಿ ಆರಂಭದಲ್ಲೇ ಗಾಳಿ ಮಳೆಯು ಮೆಸ್ಕಾಂಗೆ ಭಾರೀ ಹೊಡೆತ ನೀಡಿದ್ದು, ಲೇನ್ಮೆನ್ ಮತ್ತಿತರ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ತ್ವರಿತವಾಗಿ ಕೈಗೊಳ್ಳಲು ಅಡ್ಡಿಯಾಗಿರುವುದು ಕಂಡು ಬಂದಿದೆ. ತಾಲ್ಲೂಕಿನಲ್ಲಿ ಶೇ.30ರಷ್ಟಿರುವ ಲೇನ್ಮೆನ್ ಮತ್ತಿತರ ಸಿಬ್ಬಂದಿಗಳನ್ನು ಬಳಸಿಕೊಂಡು ಬಹುತೇಕ ಎಲ್ಲಾ ಕಡೆಗಳಲ್ಲಿ ದುರಸ್ತಿ ಕಾರ್ಯ ತ್ವರಿತವಾಗಿ ಕೈಗೊಳ್ಳಲಾಗಿದೆ ಎಂದು ಮೆಸ್ಕಾಂನ ಕಾರ್ಯನಿವರ್ಾಹಕ ಎಂಜಿನಿಯರ್ ಕೆ.ವಿ.ಉಮೇಶ್ಚಂದ್ರ ತಿಳಿಸಿದ್ದಾರೆ.
—

