ಬಂಟ್ವಾಳ: ಅಲ್ಲಿಪಾದೆ ಬಳಿಯ ಕೇದಿಗೆ ಎಂಬಲ್ಲಿ ಕಳೆದ ಕೆಲ ದಿನಗಳ ಹಿಂದೆ ಪತ್ತೆಯಾಗಿದ್ದ ಮಣ್ಣಿನ ರಚನೆಗಳು ಸಾವಿರ ವರ್ಷಗಳು ಹಳೆಯದಾದ ಶಿಲಾಫಲಕ ಎಂದು ಇತಿಹಾಸ ತಜ್ಞ ಪ್ರೊ. ಟಿ. ಮುರುಗೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಬುಧವಾರ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ತಂಡ ಅವಶೇಷಗಳು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸುಟ್ಟ ಆವೆ ಮಣ್ಣಿನಿಂದ ರಚಿಸಿದ ಎರಡು ಆಕೃತಿಗಳು ದೊರೆತಿದ್ದು ಮೃತ ಗರ್ಭಿಣಿ ಮಹಿಳೆಯ ಆಕೃತಿ ಇರುವ ಶಿಲಾಫಲಕ ಹಾಗೂ ದೀಪಗಳ ರಚನೆ ಇರುವ ಮಡಿಕೆ ಎಂದು ಅವರು ಗುರುತಿಸಿದ್ದಾರೆ.


ಇದು ಹೆಣ್ಣಿನ ವಿಗ್ರಹವಾಗಿದ್ದು, ಹುಬ್ಬಿದ ಹೊಟ್ಟೆ ಇದೆ. ಮೊಣಕಾಳಿನ ಮೇಲ್ಭಾಗಕ್ಕೆ ಮಾತ್ರ ವಸ್ತ್ರ ಇರುವ ಬಗ್ಗೆ ರಚನೆಯಿದೆ. ಕಾಲಿನ ಬೆರಳು ಹಾಗೂ ಪಾದದ ರಚನೆಗಳು ಒತ್ತಿದಂತಿದೆ. ಉದ್ದ ಚಾಚಿದಂತಿರುವ ಕೈ, ಮೇಲೆ ಎತ್ತಿದಂತಿರುವ ತಲೆ ವಿಗ್ರಹದಲ್ಲಿ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಮೃತ ಗರ್ಭಿಣಿ ಸ್ತ್ರೀಯನ್ನು ಸಂಕೇತಿಸುವ ರಚನೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿರುವ ಪ್ರೊ. ಮುರುಗೇಶ್ ಸಮಾಧಿ ಸ್ಥಳ ಇರಬಹುದು ಎಂದು ತಿಳಿಸಿದರು. ಸಮಾಧಿಯ ಕುರುಹಾಗಿ ಮೃತ ಗರ್ಭಿಣಿ ಮಹಿಳೆಯ ಆಕಾರವನ್ನು ರಚಿಸಿ ಇಡಲಾಗಿದೆ. ಅಲ್ಲದೆ ಅದೇ ಸ್ಥಳದಲ್ಲಿ ಮಡಿಕೆಯಲ್ಲಿ ಧಾನ್ಯಗಳನ್ನುತುಂಬಿ ದೀಪ ಉರಿಸುವ ಸಂಸ್ಕ್ರತಿಯೂ ಆ ಕಾಲದಲ್ಲಿ ಇದ್ದು ಅದರ ರಚನೆಯೇ ಈಗ ದೊರೆತಿರುವ ವಸ್ತು ಎಂಬುದಾಗಿ ಅವರು ತಿಳಿಸಿದರು. ಪ್ರಾಚ್ಯ ಸಂಶೋಧನ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಪ್ರೊ. ಎಸ್.ಎ.ಕೃಷ್ಣಯ್ಯ, ಸಂಶೋಧನ ವಿದ್ಯಾರ್ಥಿ ಸುಭಾಶ್ ತಂಡದಲ್ಲಿದ್ದರು. ಸ್ಥಳೀಯರಾದ ಚಂದ್ರಹಾಸ ನೂರ್ತಾಡಿ, ನಾರಾಯಣ ಕುಲಾಲ್ ಈ ಸಂದರ್ಭ ಹಾಜರಿದ್ದರು.
