ಬಂಟ್ವಾಳ : ಮಳೆಗಾಲ ಪ್ರಾರಂಭದ ಮುನ್ಸೂಚನೆ ದೊರೆಯುತ್ತಿದ್ದಂತೆ ಬಿ ಸಿ ರೋಡಿನಲ್ಲಿ ಪ್ರಯಾಣಿಕರು ಸೂಕ್ತ ಬಸ್ಸು ತಂಗುದಾಣವಿಲ್ಲದೆ ಪರದಾಟ ನಡೆಸಲು ಆರಂಭಿಸಿದ ಲಕ್ಷಣಗಳೂ ಕಂಡು ಬರತೊಡಗಿದೆ.
ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭವಾದಾಗಿನಿಂದ ಕಳೆದ ಐದಾರು ವರ್ಷಗಳಿಂದ ಬಿ ಸಿ ರೋಡು ಪಟ್ಟಣದಲ್ಲಿ ಸಮರ್ಪಕ ಬಸ್ಸು ನಿಲ್ದಾಣವಿಲ್ಲದೆ ಪ್ರಯಾಣಿಕರು ನಿರಂತರ ಸಮಸ್ಯೆಯನ್ನೇ ಎದುರಿಸುತ್ತಿದ್ದಾರೆ. ಇದು ಈ ವರ್ಷವೂ ಮುಂದುವರಿದಿದೆ. ಈಗಾಗಲೇ ಇಲ್ಲಿಗೆ ಐಶಾರಾಮಿ ಬಸ್ಸು ನಿಲ್ದಾಣ ನಿರ್ಮಾಣಕ್ಕೆ ಸಚಿವರಾದಿಯಾಗಿ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರವೇರಿದ್ದರೂ ಅದರ ನಿರ್ಮಾಣದವರೆಗೂ ಜನ ನಿಲ್ಲಲು ಬಸ್ಸು ಕಾಯಲು ಸೂಕ್ತ ವ್ಯವಸ್ಥೆಯಿಲ್ಲದೆ ಅಕ್ಷರಶಃ ಪರದಾಟವನ್ನೇ ನಡೆಸುವಂತಹ ಪರಿಸ್ಥಿತಿ ಒದಗಿ ಬಂದಿದೆ.
07 May B.C.Road
ಬುಧವಾರ ಹಾಗೂ ಗುರುವಾರ ಸಂಜೆ ಸುರಿದ ಮಳೆಗೆ ಪ್ರಯಾಣಿಕರಿಗೆ ನಿಲ್ಲಲು ಸೂಕ್ತ ಜಾಗವಿಲ್ಲದೆ ಎಲ್ಲೆಂದರಲ್ಲಿ ವಾಣಿಜ್ಯ ಸಂಕೀರ್ಣ, ಅಂಗಡಿ-ಮುಂಗಟ್ಟುಗಳ ವರಾಂಡಗಳಲ್ಲಿ ನಿಂತು ಪರದಾಡುತ್ತಿರುವುದು ಕಂಡು ಬಂದಿದೆ. ಹೆದ್ದಾರಿ ಬದಿಯಲ್ಲಿ ವಾಸುದೇವ ಪ್ಲಾಝಾ ಸಂಕೀರ್ಣದ ಮುಂಭಾಗ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ನಿಂತು ತಮ್ಮ ಬಸ್ಸಿಗಾಗಿ ಏದುಸಿರುವ ಬಿಡುತ್ತಾ ನಿಂತ ಸನ್ನಿವೇಶ ಕಂಡುಬಂದರೆ, ಈ ಕಡೆ ಸರ್ವಿಸ್ ರಸ್ತೆಯಲ್ಲೂ ಸೂಕ್ತ ಶೆಲ್ಟರ್ ಇಲ್ಲದೆ ರಸ್ತೆ ಬದಿಯ ಕೆಸರಿನಲ್ಲೇ ನಿಂತುಕೊಂಡಿದ್ದ ದೃಶ್ಯ ಕಂಡು ಬಂದಿದೆ.
ಮುಂಬರುವ ಮಳೆಗಾಲ ಪೂರ್ತಿ ಇದೇ ಪರಿಸ್ಥಿತಿ ಮುಂದುವರಿಯುತ್ತಾ ಅಥವಾ ಸಂಬಂಧಪಟ್ಟ ಸ್ಥಳೀಯ ಪುರಸಭಾಡಳಿತವಾದರೂ ಎಚ್ಚೆತ್ತುಕೊಂಡು ಈ ಬಗ್ಗೆ ಪ್ರಯಾಣಿಕರಿಗೆ ಬಿ ಸಿ ರೋಡಿನಲ್ಲೊಂದು ಸೂರು ನಿರ್ಮಿಸಿಕೊಡುವರೇ ಎಂಬ ಜಿಜ್ಞಾಸೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

By Suddi9

Leave a Reply

Your email address will not be published. Required fields are marked *