ಬಂಟ್ವಾಳ: ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ನಿವಾಸಿ ಉಮ್ಮರಬ್ಬ ಎಂಬವರ ಪುತ್ರಿ ದುಲೈಕಾ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದಾನೆ ಎಂದು ಆರೋಪಿಸಿ ಬೆಳ್ತಂಗಡಿ ತಾಲ್ಲೂಕಿನ ನೆರಿಯಾ ಗ್ರಾಮದ ಪಾವೂರು ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಅಹ್ಮದ್ ಕುಂಞ ಯಾನೆ ಅಬ್ದುಲ್ ರಜಾಕ್ ವಿರುದ್ಧ ಆತನ ಮೊದಲ ಪತ್ನಿ ಪೊಲೀಸರಿಗೆ ದೂರು ಸಲ್ಲಿಸಿದ ಘಟನೆ ಭಾನುವಾರ ನಡೆದಿದೆ.
ಈತನು ಕಳೆದ 2002ನೇ ಏ.4ರಂದು ಬೆಳ್ತಂಗಡಿ ತಾಲ್ಲೂಕಿನ ಬಾರ್ಯ ಗ್ರಾಮದ ಸರಳಕಟ್ಟೆ ನಿವಾಸಿ ಆಯಿಷಾ ಎಂಬಾಕೆಯನ್ನು ವಿವಾಹವಾಗಿ, ಇವರಿಗೆ ಒಟ್ಟು ಮೂವರು ಕೂಡಾ ಇದ್ದಾರೆ. ಈಕೆಯ ವಿವಾಹ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಮೊತ್ತವನ್ನು ವರದಕ್ಷಿಣೆಯಾಗಿ ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಬಿ.ಸಿ.ರೋಡ್ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಈತನು ಮತ್ತಷ್ಟು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದು, ಇದೀಗ ಮತ್ತೆ ಎರಡನೇ ವಿವಾಹವಾಗಿದ್ದಾನೆ ಎಂದು ಆರೋಪಿಸಿ ಆಯಿಷಾ ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
