ಬಂಟ್ವಾಳ:ಬಂಟ್ವಾಳ ತಾಲ್ಲೂಕಿನಲ್ಲಿ ನೇತ್ರಾವತಿ ನದಿ ನೀರು ಸರಾಗವಾಗಿ ವರ್ಷವಿಡೀ ಹರಿದು ಹೋಗುತ್ತಿದ್ದರೂ ಪ್ರತೀ ವರ್ಷ ಮಾರ್ಚ್ನಿಂದ ಆರಂಭಗೊಂಡು ಮೂರು ತಿಂಗಳು ನೀರಿನ ಸಮಸ್ಯೆ ಎಲ್ಲೆಡೆ ಕಾಡುತ್ತಿದೆ.
ಇಲ್ಲಿನ ನರಿಕೊಂಬು ಗ್ರಾಮದ ನಾಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಳಿ ಗುರುವಾರ ರಾತ್ರಿ ಕೊರೆದ ಹೊಸ ಕೊಳವೆ ಬಾವಿಯಿಂದ ಶುಕ್ರವಾರ ಮುಂಜಾನೆ ಭಾರೀ ಒತ್ತಡದಿಂದ ನೀರು ಚಿಮ್ಮುತ್ತಿರುವ ದೃಶ್ಯ ಸ್ಥಳೀಯರನ್ನು ಆಕರ್ಷಿಸುತ್ತಿದೆ.

ಕಳೆದ ಹಲವು ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಎಷ್ಟು ಕೊಳವೆ ಬಾವಿ ಕೊರೆದರೂ ನೀರು ಮಾತ್ರ ಸಾಕಷ್ಟು ಬರುತ್ತಿರಲಿಲ್ಲ. ಈ ಬಾರಿ ನೀರಿನ ಸಮಸ್ಯೆ ಅತಿಯಾಗಿ ಕಾಡತೊಡಗಿದಾಗ ಸ್ಥಳೀಯ ಗ್ರಾ.ಪಂ.ಸದಸ್ಯ ಕೃಷ್ಣಪ್ಪ ಪೂಜಾರಿ ಇವರು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು ಅವರಿಗೆ ದೂರಿಕೊಂಡಿದ್ದರು. ಇದರಿಂದಾಗಿ ಸ್ಥಳೀಯ ಜಿ.ಪಂ.ಸದಸ್ಯೆ ಮಮತಾ ಎಸ್.ಗಟ್ಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ವಲಯ ಕಾಂಗ್ರೆಸ್ ಅಧ್ಯಕ್ಷರು ಲಿಖಿತ ಮನವಿ ಸಲ್ಲಿಸಿ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು. ತಕ್ಷಣವೇ ಸ್ಪಂದಿಸಿದ ಸಚಿವರು ಟಾಸ್ಕ್ ಫೆÇೀರ್ಸ್ನಿಂದ ಕೊಳವೆ ಬಾವಿ ಕೊರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಕೊರೆದ ಕೊಳವೆ ಬಾವಿಯಿಂದ ನಿರೀಕ್ಷೆಗೂ ಮೀರಿ ನೀರು ಉಕ್ಕಿ ಬಂದಿದೆ.
ಈ ನೀರಿನ ಒತ್ತಡ ತಡೆಯಲು ಕೊಳವೆ ಮೇಲ್ಭಾಗದಲ್ಲಿ ಮುಚ್ಚಳ ಅಳವಡಿಸಲು ಪ್ರಯತ್ನಿಸಿದರೂ ಅಸಾಧ್ಯವಾಗಿದೆ. ಇದಕ್ಕಾಗಿ ಮೇಲ್ಭಾಗದಲ್ಲಿ ಸಣ್ಣ ಸಣ್ಣ ರಂಧ್ರ ಕೊರೆದು ಮುಚ್ಚಳ ಅಳವಡಿಸಲಾಗಿದ್ದು, ಅಲ್ಲಿಂದಲೂ ನೀರು ಹೊರ ಚಿಮ್ಮುತ್ತಿರುವುದು ಕಂಡು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
