ಬಂಟ್ವಾಳ: ಕಂದಾಯ ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಪಾಣೆಮಂಗಳೂರು ನಾಡ ಕಚೇರಿಯ ಉಪ ತಹಶೀಲ್ದಾರ ರೋಹಿನಾಥ್ ಅವರಿಗೆ ಕಂದಾಯ ಇಲಾಖಾ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಬಿ.ಸಿ.ರೋಡಿನ ಎಸ್.ಜೆ.ಎಸ್.ವೈ.ಸಭಾಂಗಣದಲ್ಲಿ ನಡೆಯಿತು.


ತಾಲೂಕು ತಹಶೀಲ್ದಾರ ಪುರಂದರ ಹೆಗ್ಡೆ ಅಧ್ಯಕ್ಷತೆ ವಹಿಸಿ ನಿವೃತ್ತರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು ಕಂದಾಯ ಇಲಾಖೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವುದೆಂದರೆ ದೊಡ್ಡ ಸವಾಲಿನ ಕೆಲಸ. ಈ ಕ್ಷೇತ್ರದಲ್ಲಿ ಹಲವಾರು ಸಮಸ್ಯೆ-ಸವಾಲುಗಳು ಎದುರಾಗುವುದು ಸಹಜ. ಸಾಕಷ್ಟು ಒತ್ತಡವನ್ನು ನಿರ್ವಹಿಸಬೇಕಾದುದು ಅನಿವಾರ್ಯ. ಆದರೆ ವೃತ್ತಿ ಬದುಕಿನಲ್ಲಿ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯ ದಕ್ಷತೆಯಿಂದ ಕಾರ್ಯನಿರ್ವಹಿಸಿದಾಗ ಯಶಸ್ವಿಯಾಗಲು ಸಾಧ್ಯ. ಈ ರೀತಿಯಲ್ಲಿ ಕಾನೂನಿನ ಚೌಕಟ್ಟು, ಶಿಸ್ತು ಬದ್ಧ ಜೀವನ, ಬಡವರ ಮೇಲಿನ ವಿಶೇಷ ಕಾಳಜಿ ಹಾಗೂ ಮಾನವೀಯತೆಯ ಸೇವೆಯೊಂದಿಗೆ ತನ್ನ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ರೋಹಿನಾಥ್ ಅವರು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ನಿವೃತ್ತ ಅಧಿಕಾರಿ ರೋಹಿನಾಥ್ ಮಾತನಾಡಿ ಬಡ ಜನತೆಗೆ ಸೇವೆ ನೀಡಲು ನನಗೆ ಕಂದಾಯ ಇಲಾಖಾ ವೃತ್ತಿ ಸಹಕಾರಿಯಾಗಿದೆ. ಹಿರಿಯ ಅಧಿಕಾರಿಗಳ ಸಮರ್ಥ ಮಾರ್ಗದರ್ಶನ, ಕಿರಿಯ ಅಧಿಕಾರಿಗಳ ಬೆಂಬಲ ಹಾಗೂ ಜನರ ಸಹಕಾರವಿದ್ದರೆ ಯಾವುದೇ ಸರಕಾರಿ ಸೇವೆಯಲ್ಲೂ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಬಹುದು. ನನ್ನ ವೃತ್ತಿ ಜೀವನದಲ್ಲಿ ನನಗೆ ಎಲ್ಲರ ಸಹಕಾರ, ಪ್ರೋತ್ಸಾಹ ದೊರೆತಿದೆ. ಇದರಿಂದಾಗಿ ಸಮಸ್ಯೆ, ಒತ್ತಡಗಳ ಮದ್ಯೆಯೂ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದರು.
ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ರಮೇಶ ನಾಯಕ್ ರಾಯಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಗ್ರಾಮ ಪಂಚಾಯತು ಪ್ರತಿನಿದಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು, ರೋಹಿನಾಥ್ ಅವರ ಪತ್ನಿ ವಿನೋದ, ಕಂದಾಯ ಇಲಾಖಾ ಅಧಿಕಾರಿಗಳಾದ ವಾಮನ್, ಪರಮೇಶ್ವರ ಮೊಯಿಲಿ, ಜೆ.ಪಿ.ರೊಡ್ರಿಗಸ್, ಅಶೋಕ್, ಸಾಧು, ಎ.ಪಿ.ಭಟ್ ಮೊದಲಾದವರಿದ್ದರು.
