ಈಗ ಮನೆಯಲ್ಲಿ ಮಕ್ಕಳಾಟ. ಪೋಷಕರ ಪಾಲಿಗೆ ಬಲು ಕಾಟ. ಮನೆಯಲ್ಲಿ ಮಕ್ಕಳದ್ದೇ ದರ್ಬಾರು. ಪೋಷಕರದ್ದು ಮಾತ್ರ ಬರೀ ಜೋರು ಜೋರು. ರಜಾ ಕಾಲದಲ್ಲಿ ಮನೆಯಲ್ಲಿ ಮಕ್ಕಳ ತುಂಟಾಟ, ಕಿರುಚಾಟ, ಕಿತ್ತಾಟ, ಆಟ, ಓಟ…ಇವೆಲ್ಲವೂ ಇದ್ದದ್ದೇ. ಮನೆಯಲ್ಲಿ ಮಕ್ಕಳು ನಡೆಸುವ ಇಂತಹ ತುಂಟಾಟಗಳು ಈಗಿನ ಕೆಲವು ಪೋಷಕರಿಗೆ ನುಂಗಲಾರದ ತುತ್ತಾಗಿದೆ. ಯಾವಾಗೊಮ್ಮೆ ಶಾಲೆ ಆರಂಭವಾಗಿಲ್ಲ ಎನ್ನುವುದೇ ಅವರ ಚಿಂತೆಯಾಗಿದೆ. ಯಾಕೆಂದರೆ ರಜೆಯಲ್ಲಿರುವ ಮಕ್ಕಳ ಆಟ ತುಂಟಾಟಗಳೆಲ್ಲವೂ ಅವರಿಗೆ ಕಿರಿಕಿರಿ, ಮಾತು ಕತೆಗಳೆಲ್ಲವೂ ಪಿರಿಪಿರಿಯಾಗುತ್ತಿದೆ. ಈ ಮಕ್ಕಳನ್ನು ಮನೆಯಲ್ಲಿ ಹೇಗೆ ಸಂಭಾಳಿಸುವುದು? ರಜೆಯಲ್ಲಿ ಮಕ್ಕಳು ಏನು ಮಾಡಬೇಕು? ಎಲ್ಲಿಗೆ ಕಳುಹಿಸುವುದು ಎನ್ನುವ ಪ್ರಶ್ನೆ ಪೋಷಕರನ್ನು ಕಾಡುತ್ತಿದೆ.
ದೊಡ್ಡದೇನೂ ಮಾಡಬೇಕಾಗಿಲ್ಲ. ಮಕ್ಕಳಿಗೆ ರಜೆ ಇರುವುದೇ ಆಡಲಿಕ್ಕೆ, ಸಂಭ್ರಮಿಸಲಿಕ್ಕೆ ಎನ್ನುವ ವಾಸ್ತವ ಸತ್ಯವನ್ನು ಮೊದಲು ಪೋಷಕರು ಅರ್ಥ ಮಾಡಿಕೊಳ್ಳಬೇಕು, ರಜೆಯಲ್ಲಾದರೂ ಮಕ್ಕಳೊಡನೆ ಬದುಕುವ ಮಕ್ಕಳ ಮನಸ್ಸನ್ನು ಬೆಳೆಸಿಕೊಳ್ಳಬೇಕು, ಅರ್ಥಾತ್ ಮಕ್ಕಳಾಗಬೇಕು, ಮಕ್ಕಳ ರಜೆಯನ್ನು ದೊಡ್ಡವರು ಸಂಭ್ರಮಿಸಬೇಕು ಅಷ್ಟೇ.
ಯಾವ ಮಗುವೂ ಶಾಲೆ ಬೇಗನೇ ಆರಂಭಗೊಳ್ಳಲಿ ಎಂದು ಬಯಸುವುದಿಲ್ಲ. ಇನ್ನಷ್ಟು ದಿನ ರಜೆಯೇ ಇರಲಿ ಎಂದು ಬಯಸುತ್ತಾರೆ ಬಹುತೇಕ ಮಕ್ಕಳು. ಹಾಗೆಂದ ಮಾತ್ರಕ್ಕೆ ವರ್ಷವಿಡೀ ರಜೆಯೇ ಬೇಕು ಶಾಲೆ ಎನ್ನುವುದು ಮುಚ್ಚಿರಲೇ ಬೇಕು, ಮನೆಯೇ ಒಳ್ಳೆಯದ್ದು ಶಾಲೆ ಎಂದರೇನೇ ಕೆಟ್ಟದ್ದು ಎಂಬ ಅರ್ಥವಲ್ಲ. ಯಾಕೆಂದರೆ ಬಹುತೇಕ ಮನೆಗಳೂ ಇಂದು ಮಕ್ಕಳ ಸ್ನೇಹಿಯಾಗಿಲ್ಲ, ಮಕ್ಕಳು ರಜೆಯನ್ನಾದರೂ ಸಂತಸದಿಂದ ಅನಿಭವಿಸುವ ಸಂಭ್ರಮದ ತಾಣವಾಗಿಲ್ಲ. ಕೆಲವು ಶಿಕ್ಷಣಾಲಯಗಳು ಶಿಕ್ಷಾಲಯಗಳಾಗಿರುವಂತೆ ಮಗುವಿನ ಪಾಲಿನ ಪ್ರೀತಿಯ ಆಸರೆಯಾದ ಮನೆಗಳೂ ಮತ್ತೊಂದು ಶಾಲೆಯೇ ಆಗುತ್ತಿರುವುದು ಮಕ್ಕಳ ಪಾಲಿನ ದುರಂತವೆಂದರೆ ತಪ್ಪಲ್ಲ. ಆದರೂ ರಜಾ ಕಾಲದಲ್ಲಾದರೂ ಈ ಮನೆಗಳು ಮಗುಸ್ನೇಹಿಯಾಗಿರಬೇಕು, ಮಕ್ಕಳಾಟದ ಮಂದಿರವಾಗಬೇಕು, ಅದರಲ್ಲಿ ಪೋಷಕರ ಪಾಲೂ ಇರಬೇಕು ಎಂದು ಪ್ರತಿ ಮಗುವೂ ಬಯಸುವುದು ತಪ್ಪಲ್ಲವಲ್ಲ?
ಮಕ್ಕಳಿಗೆ ರಜೆ ಎಂದರೆ ಅದು ಬಾಲ್ಯ ಸಹಜ ಚಟುವಟಿಕೆಗಳನ್ನು ವ್ಯಕ್ತಪಡಿಸಲು ಇರುವ ಪವಿತ್ರವಾದ ಪರ್ವಕಾಲ. ರಜೆ ಎಂದರೆ ಮಕ್ಕಳು ಶೈಕ್ಷಣಿಕ ಅವಧಿಯಲ್ಲಿ ತನ್ನ ಬಹುತೇಕ ನಿರೀಕ್ಷೆಗಳನ್ನು ಆಸೆಗಳನ್ನು ಪ್ರಶ್ನೆಗಳನ್ನು ಬಿಂಬಿಸಲಾಗದೇ ತನ್ನೊಳಗೇ ಕಟ್ಟಿಕೊಂಡು ಕೊರಗುತ್ತಿತ್ತೋ ಅದೆಲ್ಲವನ್ನೂ ಏಕಕಾಲದಲ್ಲಿ ತನ್ನವರೊಂದಿಗೆ ವ್ಯಕ್ತಪಡಿಸಲು ಇರುವ ಸುವರ್ಣಯುಗ. ನಿಜಕ್ಕೂ ರಜೆ ಎಂದರೆ ಮಕ್ಕಳ ಪಾಲಿಗೆ ತಾನು ಅಂದುಕೊಂಡಂತೆ ಇರಲು, ಮುಖ್ಯವಾಗಿ ತನ್ನವರೊಂದಿಗೆ ಇರಲು ಹಾಗೂ ತಾನೇ ಆಗಲು ಇರುವ ಬಂಗಾರದ ಬದುಕು.

ಈ ಬಂಗಾರದ ಬದುಕು ಮಕ್ಕಳಿಗೆ ಮನೆಯಲ್ಲೇ, ತಮ್ಮವರೊಡನೆಯೇ ಸಿಗಬೇಕೇ ವಿನಃ ಎಲ್ಲಿಯೋ ಯಾರಾಲ್ಲಿಯೋ ಸಿಗುವುದಿಲ್ಲ. ಶಾಲೆಗಳನ್ನು ಇಂತಹ ಬದುಕನ್ನು ದೊರಕಿಸಿಕೊಡಲು ಸಾಕಷ್ಟು ಶಿಕ್ಷಕರಿಗೆ ಆಸಕ್ತಿ ಇದ್ದರೂ ಶಾಲೆಯ ನೀತಿ ನಿಯಾಮಾವಳಿಗಳು, ಪಠ್ಯಕ್ರಮಗಳು, ಸ್ಪರ್ಧೆ ಪಲಿತಾಂಶದ ಒತ್ತಡದಲ್ಲಿ ಇದು ಸಾಧ್ಯವಾಗುತ್ತಿಲ್ಲ. ರಜೆಯಲ್ಲಿ ಮಕ್ಕಳು ಮನೆಯಲ್ಲಿ ಉಪದ್ರವಾಗುತ್ತಾರೆ, ಹಾಳಾಗುತ್ತಾರೆ, ದಡ್ಡರಾಗುತ್ತಾರೆ ಎಂಬ ಕಾರಣಕ್ಕಾಗಿ ಶಿಬಿರಕ್ಕೋ, ತರಗತಿಗೋ, ಇನ್ನೆಲ್ಲಿಗೋ ಕಳುಹಿಸಿ ಕೈತೊಳೆದುಕೊಳ್ಳುವುದು ಸರಿಯಲ್ಲ. ಮನೆಗಿಂತ ಹೊರಗೆ ಎಂಬ ಕಾರಣಕ್ಕೆ ಮಕ್ಕಳು ಎಲ್ಲೆಲ್ಲೂ ಒಳ್ಳೆಯದನ್ನೇ ಕಲಿಯುತ್ತಾರೆ ಎಂಬುವುದು ಭ್ರಮೆಯಲ್ಲದೇ ಮತ್ತೇನೂ ಅಲ್ಲ. ಅಲ್ಲದೇ ರಜೆಯಲ್ಲೂ ಮಗು ಹೆತ್ತರವರೊಡನೆ ಇರದೇ ಕಲಿಕೆಯ ನೆಪದಲ್ಲಿ ಇನ್ನೇಲ್ಲೋ ಬಂಧಿಯಾಗುವುದು ಮಗುವಿಗೆ ಹೆತ್ತವರು ನೀಡುವ ಘೋರ ಶಿಕ್ಷೆಯಲ್ಲದೆ ಬೇರೇನೂ ಅಲ್ಲ.
ಮಕ್ಕಳು ವರ್ಷದಲ್ಲಿ ಒಂದೆರೆಡು ತಿಂಗಳಾದರೂ ಈ ಬಂಗಾರದ ಬದುಕು ಅನುಭವಿಸಲು ದೊಡ್ಡವರು ಬಿಡಬೇಕು. ಶಾಲೆಯಲ್ಲಿ ಸಿಗದ ಮಗು ನಿರೀಕ್ಷೆಯ ವಾತಾವರಣ ಮನೆಯಲ್ಲಿ ಒದಗಿಸಿಕೊಡಬೇಕು. ರಜೆಯಲ್ಲಿಯೂ ಮಕ್ಕಳನ್ನು ಎಲ್ಲೋ ಕಳುಹಿಸಿ ದೂರವಿರುವ ಬದಲು ಹೆತ್ತವರು ಮಕ್ಕಳೊಡನೇ ಇರಬೇಕು. ನಮ್ಮ ಮಗು ಏನೋ ಆಗಬೇಕು ಎಂಬ ವ್ಯಾಮೋಹದಲ್ಲಿ ಮಗುವಿಗೆ ವಿಧಿಸಲಾಗಿರುವ ಕೆಲವು ಕೆಟ್ಟ ಕಟ್ಟುಪಾಡುಗಳನ್ನು ರಜಾ ಕಾಲದಲ್ಲಾದರೂ ಸ್ವಲ್ಪ ಮಟ್ಟಿಗೆ ಸಡಿಲಿಸಿ ಮಗುವನ್ನು ಮಗುವಾಗಿ ಬದುಕಲು ಬಿಡಬೇಕು.
ವರ್ಷವಿಡೀ ಬಹುತೇಕ ಸಮಯ ಶಾಲೆಯಲ್ಲಿ ಕಳೆದ ಮಗು ರಜೆ ನೆಪದಲ್ಲಾದರೂ ಒಂದೆರೆಡು ತಿಂಗಳು ನಮ್ಮೊಡನೆ ಇದೆಯಲ್ಲಾ, ವರ್ಷವಿಡೀ ಬದುಕಿನ ಜಂಜಾಟದಲ್ಲೇ ಕಾಲ ಕಳೆಯವ ನಾವು ಈ ಒಂದರೆಡು ತಿಂಗಳಾದರೂ ಮಕ್ಕಳೊಡನೆ ಇದ್ದು ಖುಷಿ ಅನುಭವಿಸುವ ಭಾಗ್ಯವಿದೆಯಲ್ಲಾ ಎಂದು ಸಂತಸ ಅನುಭವಿಸುವ ಪೋಷಕರಿದ್ದರೆ ಅದು ನಿಜಕ್ಕೂ ಮಕ್ಕಳ ಪಾಲಿನ ಬಲದೊಡ್ಡ ಭಾಗ್ಯ. ರಜೆಯಲ್ಲೂ ಮತ್ತೆ ಮತ್ತೆ ಶಾಲೆಯನ್ನೇ ನೆನಪಿಸಿ, ಅದು ಬರೆ ಇದು ಓದು, ಸುಮ್ಮನೆ ಕುಳಿತುಕೊಳ್ಳು, ಅದು ಬೇಡ ಇದು ಬೇಡ ಎಂದು ಮಕ್ಕಳ ರಜಾ ಮಜಾವನ್ನು ಅನುಭವಿಸಲು ಬಿಡದೇ ಮಕ್ಕಳನ್ನು ಮತ್ತಷ್ಟು ಮಂಕುಗೊಳಿಸುವ ತಂದೆ ತಾಯಿಗಳು ಮಕ್ಕಳ ಪಾಲಿಗೆ ರಾಕ್ಷಸರಂತೆ ಕಂಡರೆ ಅದು ಮಕ್ಕಳ ತಪ್ಪಲ್ಲ. ಶಿಸ್ತು, ಶಿಕ್ಷೆ, ಪರೀಕ್ಷೆಯ ನೆಪದಲ್ಲಿ ಮಕ್ಕಳನ್ನು ರಜೆಯಲ್ಲೂ ಮಕ್ಕಳಾಗಲು ಬಿಡದ, ಬಾಲ್ಯವನ್ನು ಅನುಭವಿಸಲು ಬಿಡದ ದೊಡ್ಡವರ ತಪ್ಪು.
ಮಕ್ಕಳು ಹೇಗಿರಬೇಕು?:
ಹಾಗಾದರೆ ಮಕ್ಕಳು ಹೇಗಿರಬೇಕು? ರಜೆಯಲ್ಲಿ ಅವರು ಏನು ಮಾಡಬೇಕು? ಹೇಗೆಯೇ ಇರಲಿ, ಏನೇ ಮಾಡಲಿ, ಏನಾದರೂ ಆಗಲಿ ಎಂದು ಬಿಟ್ಟು ಬಿಡುವುದೇ? ಅದೂ ಸರಿಯಾದ ಕ್ರಮವಲ್ಲ. ಮಕ್ಕಳು ಹೇಗಿರಬೇಕು? ಏನು ಮಾಡಬೇಕು ಎಂದು ಪೋಷಕರು ಸೂಕ್ಷ್ಮವಾಗಿ, ವಿವೇಚನಾಯುಕ್ತವಾಗಿ ಯೋಚಿಸುವುದೇ ಒಳಿತು. ತಮ್ಮ ಮಕ್ಕಳ ರಜೆಯನ್ನು ಮಜಾವನ್ನಾಗಿಸುವ ಬಗ್ಗೆ ಪ್ರತಿಯೊಬ್ಬ ಪೋಷಕರು ತಮ್ಮ ಬಾಲ್ಯದ ದಿನಗಳನ್ಮೊಮ್ಮೆ ನೆನಪಿಸಿಕೊಳ್ಳಬೇಕು. ಆಗಿನ ಕಾಲದಲ್ಲಿ ಮಕ್ಕಳು ಎಲ್ಲೆಂದರಲ್ಲಿ ಓಡಾಡುವ, ಮರ ಹತ್ತುವ, ಮಣ್ಣಿನಲ್ಲಾಡುವ, ಜೋಕಾಲಿ ಆಡುವ, ಮನೆ ಕಟ್ಟುವ, ಲಗೋರಿ ಆಡುವ, ನಲಿಯುವ, ಹಾಡುವ, ಕುಣಿಯುವ ಚಟುವಟಿಕೆಗಳಲ್ಲಿ ಪಡುತ್ತಿದ್ದ ಸಂಭ್ರಮ ಈಗಿನ ಎಲ್ಲಾ ಮಕ್ಕಳಿಗೆ ಸಿಗುತ್ತಿದೆಯೇ ಎಂದು ಗಂಭೀರವಾಗಿ ಯೋಚಿಸಬೇಕು.
ಎಲ್ಲಾ ಕಡೆಗಳಲ್ಲೂ ಇಂತಹ ಆಟಗಳಿಗೆ ಪೂರಕವಾದ ಪರಿಸರ ಇಂದು ಇಲ್ಲದಿದ್ದರೂ ಇದ್ದ ಕಡೆಗಳಲ್ಲಾದರೂ ಅವಕಾಶವಿರುವ ಆಟಗಳನ್ನಾದರೂ ಆಡಲು ಎಷ್ಟು ಮಕ್ಕಳಿಗೆ ಅನುಮತಿ ಇದೆ? ತಾವು ಆಧುನಿಕ ಕಾಲದವರು, ಮರ್ಯಾದಸ್ಥರು, ಗೌರವಾನ್ವಿತ ವ್ಯಕ್ತಿಗಳು ಎಂಬ ಮನೋಭೂಮಿಕೆಯನ್ನು ಕಟ್ಟಿಕೊಂಡವರಿಗೆ ಮಕ್ಕಳ ಇಂತಹ ಆಟಗಳು ಆಲರ್ಜಿಯಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಮಕ್ಕಳು ರಜೆಯಲ್ಲೂ ನೆರೆಕರೆಯ ಮನೆಗಳಿಗೆ ಹೋಗಬಾರದು-ಅಲ್ಲಿನ ಮಕ್ಕಳೊಡನೆ ಆಟವಾಡಬಾರದು ಎಂಬ ಹಠವಾದರೂ ಯಾಕೆ? ಎಂಬ ಪ್ರಶ್ನೆಗಳಿಗೆ ಪೋಷಕರು ತಾವೇ ಉತ್ತರ ಕಂಡುಕೊಳ್ಳಬೇಕು. ಗೌರವ, ಜಾತಿ, ಧರ್ಮ, ಮೈಲಿಗೆ, ಶಿಸ್ತು, ಸಂಪ್ರಧಾಯ ಎಂಬ ನೆಪದಲ್ಲಿ ರಜೆಯಲ್ಲೂ ಮಕ್ಕಳು ಮನೆಯಲ್ಲೇ ಬಂಧಿಯಾದರೆ ಮಕ್ಕಳು ನೆಲ, ಜಲ, ಪರಿಸರ, ಮರ, ಕೆರೆ, ಗಿಡ ಬಳ್ಳಿಗಳು, ನೆರೆಕರೆಯ ಸಂಬಂಧ ಬೆಳೆಸಿಕೊಳ್ಳುವುದಾದರೂ ಹೇಗೆ? ಎಂಬುದು ಯೋಚಿಸಲ್ಪಡಬೇಕು.
ಎಲ್ಲಾ ಕಡೆಗಳಲ್ಲೂ ಮಕ್ಕಳು ರಜೆ ಅನುಭವಿಸಲು ಪೂರಕವಾದ ಪೃಕೃತಿ ಸಹಜ ಪರಿಸರವಿಲ್ಲದಿದ್ದರೆ ಕನಿಷ್ಠ ಮನೆ, ಮನೆಯಂಗಳದಲ್ಲಾದರೂ ಮಗುವಿನ ಸೃಜನಶೀಲತೆ ಅರಳಲು, ವ್ಯಕ್ತಿತ್ವ ವಿಕಸನವಾಗಲು, ಹೊಸತೇನನ್ನೋ ಕಲಿಯಲು ಪೂರಕವಾದ ಆರೋಗ್ಯವಂತ ವಾತಾವರಣವನ್ನು ಪೋಷಕರು ಸೃಷ್ಠಿ ಮಾಡಬೇಕು.
ಮಗು ರಜೆಯಲ್ಲಿ ಮಾಡುವ ಚಟುವಟಿಕೆಗಳೆಲ್ಲವೂ ಮಗುವಿನ ಪಾಲಿಗೆ ಆಟ, ಸಂಭ್ರಮವೇ ಆದರೂ ಅದರ ಮೂಲಕವೂ ಮಗು ಏನನ್ನೋ ಪಡೆಯುತ್ತದೆ-ಕಲಿಯುತ್ತದೆ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ ಮಗುವಿನ ಸೃಜನಶೀಲತೆಯ ವೃದ್ಧಿಗೆ ಅನುಕೂಲಕರವಾದ ಆಟ, ಚಟುವಟಿಕೆಗಳಿಗೆ ಸೂಕ್ತವಾದ ವೇದಿಕೆ ರಜೆಯಲ್ಲಾದರೂ ಮನೆಯಲ್ಲಿ ರೂಪುಗೊಳ್ಳಬೇಕು. ಇದು ಸಾಧ್ಯವಾಗಬೇಕಾದರೆ ಮೊದಲು ಮಕ್ಕಳಿಗೆ ಎಲ್ಲದಕ್ಕೂ ಮಾಡಬಾರದು, ಮಾಡಬಾರದು ಎನ್ನುವ ಕಟ್ಟುಪಾಡುಗಳನ್ನು ಪೋಷಕರು ಸ್ವಲ್ಪವಾದರೂ ಬದಿಗಿಟ್ಟು ಮಾಡಬೇಕು, ಮಾಡಬೇಕು ಎಂದು ಬದಲಾಯಿಸಿಕೊಳ್ಳಬೇಕು. ಎಲ್ಲದಕ್ಕೂ ಬೇಡ ಎನ್ನುವ ಬದಲು ಕೆಲವನ್ನಾದರೂ ಬೇಕು ಎಂದು ಹೇಳುವ ಮೂಲಕ ಪೋಷಕರು ಮಗುವಿನೊಡನೆ ಒಂದು ಮುಕ್ತವಾದ, ಆತ್ಮೀಯವಾದ, ಪ್ರೀತಿಯ ವಾತಾವರಣವನ್ನು ನಿರ್ಮಿಸಿಕೊಂಡರೆ ಮಕ್ಕಳ ರಜೆಯು ಮಕ್ಕಳ ಪಾಲಿಗೆ ನಿಜಕ್ಕೂ ಮಜಾವಾಗುತ್ತದೆ, ಪೋಷಕರಿಗೂ ಹಿತವಾದ-ಮಧುರವಾದ ಸಂತಸವನ್ನು ನೀಡುತ್ತದೆ.
ರಜೆಯಲ್ಲೂ ಕೆಲವು ಮನೆಗಳಲ್ಲಿ ಮಕ್ಕಳು ಮನೆಯ ಮೂಲೆಯಲ್ಲಿ ಕುಳಿತು ಅದೇನೋ ಓದುತ್ತಿರುವುದು, ಬರೆಯುತ್ತಿರುವುದು, ಗೋಡೆಯ ಬದಿಯಲ್ಲಿ ದೊಡ್ಡವರು ಬೆತ್ತ ಹಿಡಿದುಕೊಂಡು ಮಕ್ಕಳನ್ನು ಗಮನಿಸುತ್ತಿರುವುದನ್ನು ಕಂಡಾಗ ಅಯ್ಯೋ ಎನಿಸುತ್ತದೆ. ಮಗು ಟಿವಿ ನೋಡಲು ಬಯಸಿದಾಗ, ಆಟವಾಡಲು ಶುರುವಿಟ್ಟಾಗ, ಮಕ್ಕಳೊಡನೆ ಮಾತುಕತೆ ನಡೆಸುತ್ತಿದ್ದಾಗ ಬೇಡ ಎಂದು ತಡೆಯುವ ಅದೇ ಪೋಷಕರು ಅದೇ ಮಕ್ಕಳ ಎದುರು ಆರಾಮವಾಗಿ ಕುಳಿತು ತಮ್ಮಿಷ್ಠದ ಧಾರವಾಹಿ ವೀಕ್ಷಿಸುವಾಗ, ಪುರುಷೊತ್ತು ಇದ್ದಾಗಲೆಲ್ಲಾ ಯಾವುದೇ ಪ್ರಯೋಜನಕ್ಕೆ ಬಾರದ ಕಾಡು ಹರಟೆಯಲ್ಲಿ ಕಾಲ ಕಳೆಯುವುದನ್ನು ನೋಡಿದಾಗ ದು:ಖವಾಗುತ್ತದೆ. ಮಕ್ಕಳಿಗೆ ರಜೆಯಲ್ಲೂ ಓದು ಬರೆ ಎಂದು ಗದರಿಸುವ, ಬೆದರಿಸುವ-ಮುಂದಿನ ವರ್ಷದ ಪರೀಕ್ಷೆಯನ್ನು ಈಗಲೇ ನೆನಪಿಸಿ ಮಕ್ಕಳನ್ನು ಭಯಭೀತರನ್ನಾಗಿಸುವ ಅದೇ ಪೋಷಕರು ಕನಿಷ್ಠ ವಾರಕ್ಕೊಮ್ಮೆ ಪತ್ರಿಕೆಯನ್ನೂ ತಿರುಚಿ ನೋಡುವುದಿಲ್ಲ, ಕನಿಷ್ಠ ಸಂಬಂಧಿಕರಿಗೆ ವರ್ಷಕ್ಕೊಮ್ಮೆ ಪತ್ರವನ್ನೂ ಬರೆಯುವುದಿಲ್ಲ, ಬದುಕಿನಲ್ಲಿ ಎದುರಾಗುವ ಯಾವುದೇ ಚಿಕ್ಕ ಪರೀಕ್ಷೆಯನ್ನೂ ಸಮರ್ಥವಾಗಿ ಎದುರಿಸಿ ಪಾಸಾಗುವುದಿಲ್ಲ. ಆದರೂ ತಮ್ಮ ಮಕ್ಕಳು ವರ್ಷವಿಡೀ ಓದಬೇಕು, ಬರೆಯಬೇಕು, ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆಯಬೇಕು, ಗರಿಷ್ಠ ಸಂಬಳದ ಉದ್ಯೋಗ ಪಡೆಯಬೇಕು ಎಂದು ಬಯಸುವುದು ದೊಡ್ಡವರ ಮೂರ್ಖತನವಲ್ಲದೆ ಮತ್ತೇನು?
ರಜೆಯಲ್ಲಿ ಮಕ್ಕಳು ಓದಲಿ, ಬರೆಯಲಿ. ಆದರೂ ಅದು ಹೊಸತಾಗಿರಲಿ. ಶಾಲೆಯ ಓದು ಬರಹಗಳಿಗಿಂತ ಹೊರತಾಗಿರಲಿ. ಪರೀಕ್ಷೆಯ ಬರೆಯುವಿಕೆ-ಓದುವಿಕೆಗಿಂತ ಭಿನ್ನವಾಗಿರಲಿ. ರಜೆಯಲ್ಲಿ ಮಕ್ಕಳು ಇತರ ಅವಧಿಗಿಂತ ಹೆಚ್ಚು ಆಡಲಿ, ಹಾಡಲಿ, ಕುಣಿಯಲಿ, ನಲಿಯಲಿ. ಆದರೆ ಇದೆಲ್ಲವೂ ಶಾಲೆಯ ಸ್ಪರ್ಧೆಯ ಆಟಗಳಿಗಿಂತ ವಿಶಿಷ್ಠವಾಗಿರಲಿ, ಭಯಮುಕ್ತವಾಗಿರಲಿ. ಪೋಷಕರೊಡನೆ ರಜೆಯಲ್ಲಿ ಮಕ್ಕಳು ಕೆಲವು ದಿನವಾದರೂ ಹೊರಗಡೆ ಸುತ್ತಾಡಲಿ, ತಿರುಗಲಿ, ಹೊಸ ಪರಿಸರವನ್ನು ವೀಕ್ಷಿಸಲಿ, ಎಲ್ಲರೊಡನೆ ಬೆರೆಯಲಿ. ಆದರೆ ಇವೆಲ್ಲವೂ ಶಾಲೆಯ ಪ್ರವಾಸದ ಕಟ್ಟುಪಾಡುಗಳನ್ನು ಮೀರಿರಲಿ, ಒತ್ತಡ ಮುಕ್ತವಾಗಿರಲಿ. ರಜೆಯಲ್ಲಿ ಮಕ್ಕಳು ತಮಗಿಷ್ಠವಾದ ಟಿವಿ ಪ್ರೋಗಾಂ ಹೆಚ್ಚು ವೀಕ್ಷಿಸಲಿ, ಆದರೆ ಮಗುವಿನ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮ ಯಾವುದು ಎಂಬುದನ್ನು ಪೋಷಕರು ಯೋಚಿಸಿ ತೀರ್ಮಾನಿಸಲಿ. ರಜೆಯಲ್ಲಿ ಮಕ್ಕಳು ಮನೆ ಕೆಲಸದಲ್ಲಿ ಹಿರಿಯರಿಗೆ ನೆರವಾಗಲಿ, ಆದರೆ ಅದು ಹೊರೆಯಾಗದಿರಲಿ, ಬದಲಾಗಿ ಅದೂ ಮಕ್ಕಳ ಬದುಕಿನ ಕಲಿಕೆಯ ಒಂದು ಭಾಗವಾಗಿರಲಿ, ಸ್ವಇಚ್ಚೆಯಿಂದಲೇ ಮಾಡುವಂತಿರಲಿ.
ಒಟ್ಟಿನಲ್ಲಿ ಶಾಲೆಯಲ್ಲಿ ಸಿಗದ ಎಲ್ಲವೂ ಮಗುವಿಗೆ ಮನೆಯಲ್ಲಿ ಸಿಗಬೇಕು. ಪೋಷಕರು ಇದಕ್ಕೆ ಅವಕಾಶ ನೀಡಬೇಕು. ಅದಕ್ಕೆ ರಜಾ ಸಮಯ ಹೆಚ್ಚು ಪೂರಕವಾಗಬೇಕು. ಪೋಷಕರು ಮಕ್ಕಳಿಗಾಗಿ ಕೊಡುವ ಎಲ್ಲಾ ಆಸ್ತಿ-ಪಾಸ್ತಿಗಿಂತಲೂ ಬೆಲೆ ಕಟ್ಟಲಾಗದ್ದು ಪ್ರೀತಿ ಮತ್ತು ಸಮಯ. ಪ್ರತೀ ಮಗುವು ಹೆತ್ತವರಿಂದ ಬಯಸುವುದು ಇದನ್ನೇ. ಇದನ್ನು ಹೆಚ್ಚೆಚ್ಚು ಕೊಡಲು ಸೂಕ್ತವಾದ ಕಾಲವೆಂದರೆ ಮಕ್ಕಳ ರಜಾ ಸಮಯ. ರಜಾ ಕಾಲದಲ್ಲಿ ಏನೇನೋ ಮಾಡುವುದಕ್ಕಿಂತ ಪೋಷಕರು ಅದೆರೆಡನ್ನು ಕೊಟ್ಟರೆ ಅಷ್ಟೇ ಸಾಕು. ಅಲ್ಲವೇ?
……………………………………..
ಗೋಪಾಲ ಅಂಚನ್




