ಬಂಟರು(ವೀರರು) ಆಳಿದರೆನ್ನಲಾದ ಬಂಟ್ವಾಳ ಜಿಲ್ಲೆಯ ಜೀವನದಿ ನೇತ್ರಾವತಿಯ ವರಪ್ರಸಾದವೇ ಸರಿ. ಫಲವತ್ತಾದ ಬಯಲು, ಎತ್ತರವಾದ ಬೆಟ್ಟಗಳು, ದಟ್ಟವಾದ ಕಾಡು, ಹತ್ತಾರು ಆರಾಧನಾಲಯಗಳು ಹೀಗೆ ವಿಭಿನ್ನ ಭೂ ಸೌಂದರ್ಯದಿಂದ ಕೂಡಿದ ಬಂಟ್ವಾಳ ವಿವಿಧ ಅರಸು ಮನೆತನದ ಬಲ್ಲಾಳರು ಆಳಿ ಮೆರೆದ ಬೀಡು. ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಬೆರೆತು ಬಾಳಿದ ಸಾಮರಸ್ಯದ ನಾಡು. ತುಳು, ಕನ್ನಡ, ಕೊಂಕಣಿ, ಬ್ಯಾರಿ ಭಾಷೆಗಳು ಪರಸ್ಪರ ಬಾಂಧವ್ಯವನ್ನು ಉಳಿಸಿಕೊಂಡಿರುವ ಬಂಟ್ವಾಳ ಸ್ವಾತಂತ್ರ್ಯ ಹೋರಾಟ ಸಹಿತ ನಾಡಿನ ಸಹಕಾರಿ, ಧಾರ್ಮಿಕ, ಸಾಮಾಜಿಕ, ಸಾಹಿತ್ಯ ಹಾಗೂ ಸಾಂಸ್ಕ್ರತಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರ.
ಬಂಟ್ವಾಳ ತಾಲೂಕಿನ ಇತಿಹಾಸ ಅತ್ಯಂತ ರೋಚಕವಾದದ್ದು. ಇತಿಹಾಸದ ವಿವಿಧ ಕಾಲಘಟ್ಟದಲ್ಲಿ ಆಳುಪರು, ವಿಜಯನಗರ ಹಾಗೂ ಕೆಳದಿಯ ಅರಸರು ಮತ್ತು ಹೈದರಾಲಿ, ಟಿಪ್ಪು ಸುಲ್ತಾನರ ಆಳ್ವಿಕೆಯೊಂದಿಗೆ ಕೆಲ ಪ್ರದೇಶದಲ್ಲಿ ಕೆಲ್ಲ, ಚೌಟ, ಡೊಂಬ ಹೆಗ್ಗಡೆ ಹಾಗೂ ಬಂಗ ಅರಸರೂ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದರು. ಕ್ರಿ.ಶ. 1799ರಲ್ಲಿ ಟಿಪ್ಪು ಸುಲ್ತಾನನ ಪತನದೊಂದಿಗೆ ಬಂಟ್ವಾಳ ತಾಲೂಕು ಬ್ರಿಟಿಷರ ಅಧಿಪತ್ಯಕ್ಕೊಳಗಾಯಿತು. ಅದರೊಂದಿಗೆ ಈ ಪ್ರದೇಶದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದ ಒಂದು ಹೊಸಯುಗ ಆರಂಭವಾಯಿತು. ಶಿಲಾಯುಗದಿಂದಾರಂಭಿಸಿ ಇತ್ತೀಚಿನವರೆಗಿನ ಈ ಪ್ರದೇಶದ ವೈವಿಧ್ಯಮಯ ಇತಿಹಾಸದ ಪುಟಗಳನ್ನು ಹತ್ತಾರು ಶಿಲಾಶಾಸನಗಳು, ನೂರಾರು ದೇವಾಲಯಗಳು ಹಾಗೂ ಇನ್ನಿತರ ಇತಿಹಾಸದ ಕುರುಹುಗಳು ತೆರೆದಿಡುತ್ತದೆ. ಬಂಟ್ವಾಳ ತಾಲೂಕಿನಲ್ಲಿ ಈತನಕ ಸುಮಾರು 40ಕ್ಕೂ ಮಿಕ್ಕಿ ಶಾಸನಗಳು ಬೆಳಕಿಗೆ ಬಂದಿದ್ದು ಇಲ್ಲಿನ ಪ್ರಾಚೀನ ಇತಿಹಾಸದ ಚಿತ್ರಣವನ್ನು ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳ ಪೈಕಿ ಭೌಗೋಳಿಕವಾಗಿ ಅತ್ಯಂತ ಕಿರಿದಾದ ತಾಲೂಕು ಬಂಟ್ವಾಳ. 735ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಇದು ಭೌಗೋಳಿಕವಾಗಿ ಅತ್ಯಂತ ಕಿರಿದಾಗಿದ್ದರೂ ತುಳುನಾಡಿನ ಒಟ್ಟು ಇತಿಹಾಸ ಮತ್ತು ಸಂಸ್ಕ್ರತಿಯ ಬೆಳವಣಿಗೆಯಲ್ಲಿ ಈ ತಾಲೂಕು ವಹಿಸಿದ ಪಾತ್ರ ಅತ್ಯಂತ ಮಹತ್ತರವಾದುದು. ತುಳುನಾಡಿನ ಇತಿಹಾಸ ರಚನೆಯ ಮೊದಲ ಹೆಜ್ಜೆಗಳನ್ನು ಗುರುತಿಸುವುದೇ ಬಂಟ್ವಾಳ ತಾಲೂಕಿನಲ್ಲಿ. ತುಳುನಾಡಿನ ಪ್ರಥಮ ಇತಿಹಾಸಕಾರರೆನಿಸಿದ ಶೀನಪ್ಪ ಹೆಗ್ಡೆ, ಗಣಪತಿರಾವ್ ಐಗಳ್ ಹಾಗೂ ಬಿ.ಎ. ಸಾಲೆತ್ತೂರ್ ಮೊದಲಾದವರು ಬಂಟ್ವಾಳ ತಾಲೂಕಿಗೆ ಸೇರಿದವರು ಎಂಬುವುದು ಗಮನಾರ್ಹ.
ಬಂಟ್ವಾಳ ಸ್ಥಳನಾಮ : ಬಂಟ್ವಾಳ ಎಂಬ ಹೆಸರಿನ ಸ್ಥಳನಾಮದ ಹಿನ್ನೆಲೆಯಲ್ಲಿ ಅನೇಕ ಕಥೆಗಳು ಹುಟ್ಟಿಕೊಂಡಿವೆ. `ಬಂಟ’ ಎಂಬ ಜನಾಂಗದವರು ಆಳಿದ್ದರಿಂದ ಬಂಟ್ವಾಳ ಎಂಬ ಹೆಸರು ಬಂತೆನ್ನುವುದು ಸಾಮಾನ್ಯ ಅಭಿಪ್ರಾಯ. ವಟವೃಕ್ಷಗಳಿಂದ ಕೂಡಿದ ಸ್ಥಳವಾದ್ದರಿಂದ ವಟವಾಳ ಮುಂದೆ ಬಂಟವಾಳ ಆಗಿ ರೂಪಾಂತರಗೊಂಡಿತು ಎಂಬ ಮಾತು ಪ್ರಚಲಿತವಿದೆ. ಇದನ್ನೇ ಸಂಸ್ಕ್ರತೀಕರಣಗೊಳಿಸಿ `ವಟಪುರ’ ಎಂಬುದಾಗಿ ಈ ಊರನ್ನು ಗುರುತಿಸುವ ಸಂಪ್ರದಾಯವೂ ಇದೆ.
ಬಂಟ್ವಾಳದಲ್ಲಿ ನೇತ್ರಾವತಿ ನದಿಯು ಹರಿಯುತ್ತಿದ್ದು ಇಲ್ಲಿ ನದೀಪಾತ್ರವು ಬಂಡೆಕಲ್ಲುಗಳಿಂದ ತುಂಬಿ ಕೊಂಡಿದ್ದು, ಈ ಹಿನ್ನೆಲೆಯಲ್ಲಿ ಬಂಡೆಕಲ್ಲುಗಳಿಂದ ತುಂಬಿದ ನದಿಯಿಂದಾಗಿ ಬಂಡೆ +ಆಲ್, ಮುಂದೆ ಬಂಡಾಲ್/ಬಂಟಾಲ್/ಬಂಟ್ವಾಳ್ ಆಗಿ ಪರಿವರ್ತನೆಗೊಂಡಿದೆ ಎಂಬ ವಾದವೂ ಇದೆ.

ಜೀವನದಿ ನೇತ್ರಾವತಿ:
1959ರಲ್ಲಿ ನೂತನವಾಗಿ ರಚನೆಗೊಂಡ ಬಂಟ್ವಾಳ ತಾಲೂಕು ಬಂಟ್ವಾಳ, ಪಾಣೆಮಂಗಳೂರು, ವಿಟ್ಲ ಎಂಬ ಮೂರು ಹೋಬಳಿವಾರು 81ಗ್ರಾಮಗಳನ್ನು ಒಳಗೊಂಡಿದೆ. ತಾಲೂಕಿನ ಮಧ್ಯದಿಂದ ಹರಿಯುವ ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ನದಿಗಳಲ್ಲೊಂದಾದ ನೇತ್ರಾವತಿ ಇಕ್ಕಡೆಗಳಲ್ಲಿರುವ ಬಯಲುಗಳಿಗೆ ನೀರುಣಿಸುತ್ತಿದ್ದು, ಪರಿಸರವನ್ನು ಸದಾ ಹಚ್ಚಹಸಿರಾಗಿಸಿದೆ. ಬಂಟ್ವಾಳದ ಇನ್ನೊಂದು ಪಕ್ಕದಲ್ಲಿ ಫಲ್ಗುಣಿ ನದಿ ಹರಿಯುತ್ತದೆ. ಹಿಂದೆ ಜನರು ದೋಣಿಗಳ ಮೂಲಕ ಈ ನದಿಯಿಂದಲೇ ಮಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದರು.
ಒಂದು ಕಾಲದಲ್ಲಿ ಮಂಗಳೂರಿಗಿಂತಲೂ ಮಿಗಿಲಾದ ವ್ಯಾಪಾರ ಕೇಂದ್ರ ಬಂಟ್ವಾಳವಾಗಿತ್ತು. ನೇತ್ರಾವತಿಯ ಒಂದು ದಂಡೆಯಲ್ಲಿ ಬಂಟ್ವಾಳವೆಂದರೆ ಅದಕ್ಕೆ ಸರಿಸಮಾನವಾಗಿರುವ ಪೇಟೆ ಇನ್ನೊಂದು ದಂಡೆಯಲ್ಲಿ ಪಾಣೆಮಂಗಳೂರು. ಜಿಲ್ಲೆಯ ಎಲ್ಲಾ ಕಡೆಗಳಿಂದಲೂ ಜನರು ಮದುವೆ ಜವಳಿ ತೆಗೆಯಲು ಈ ಎರಡು ಪಟ್ಟಣಗಳಿಗೆ ಬರುತ್ತಿದ್ದರು. ವ್ಯಾಪಾರ ವೃತ್ತಿಯ ಗೌಡ ಸಾರಸ್ವತ ಬ್ರಾಹ್ಮಣರು ಗೋವಾದಿಂದ ಬಂದು ಈ ಎರಡು ಪಟ್ಟಣಗಳಲ್ಲಿ ಮೊದಲು ನೆಲೆಯಾದುದೇ ಇದಕ್ಕೆ ಕಾರಣ. ಪಾಣೆಮಂಗಳೂರು ಎಂಬುದು ಈಗಿನ ಹೆಸರಾದರೆ, ಪಣೆಮುಗೇರ್ ಎಂಬುದು ಇಲ್ಲಿಗೆ ಪ್ರಾಚೀನ ಹೆಸರು. ಮುಗೆರ್ ಎಂದರೆ ನದಿಯ ದಂಡೆ. ಪಣೆ ಎಂದರೆ ಏತ, ನದಿಯಿಂದ ನೀರೆತ್ತುವ ಸಾಧನ. ನದಿಯ ದಂಡೆಯಲ್ಲಿ ಅಲ್ಲಲ್ಲಿ ಏತ ನೀರಾವರಿ ಇದ್ದ ಕಾರಣ ಊರಿಗೆ ಪಣೆಮುಗೆರ್ ಎಂಬ ಹೆಸರು ಬಂತು. ಕ್ರಮೇಣ ಅದುವೇ ಪಾಣೇರ್ ಆಯಿತು. ಮುಂದೆ ಪಾಣೆಮಂಗಳೂರು ಆಯಿತು. ನಂದಾವರದ ಪಕ್ಕದಲ್ಲಿರುವ ಈ ಊರು ನಂದಾವರದ ಅರಸು ಮನೆತನ ಆಳಿದ ಬಳಿಕ ಹೆಚ್ಚು ಬೆಳವಣಿಗೆಯನ್ನು ಕಂಡಿತು.
ಐತಿಹಾಸಿಕ ಪಾಣೆಮಂಗಳೂರು ಸೇತುವೆ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡು ಸನಿಹದ ಪಾಣೆಮಂಗಳೂರು ಎಂಬಲ್ಲಿ ನಿರ್ಮಾಣಗೊಂಡಿರುವ ಸೇತುವೆಗೆ ಐತಿಹಾಸಿಕ ಹಿನ್ನೆಲೆಯೇ ಇದೆ. ಪಾಣೆಮಂಗಳೂರು ಸೇತುವೆ ನಿರ್ಮಾಣದ ಮೊದಲು ನೇತ್ರಾವತಿಯಲ್ಲಿ ಮಂಗಳೂರಿನಿಂದ ಬಂಟ್ವಾಳ ಹಾಗೂ ಉಪ್ಪಿನಂಗಡಿಯವರೆಗೂ ಸರಕು ಸಾಗಾಟ ಹಾಗೂ ಪ್ರಯಾಣಿಕರ ಸಾಗಾಟ ದೋಣಿ ಮೂಲಕವೇ ನಡೆಯುತ್ತಿತ್ತು ಎನ್ನಲಾಗಿದೆ. 1799ರಲ್ಲಿ ಟಿಪ್ಪುವಿನಿಂದ ಕೆನರಾವನ್ನು ಗೆದ್ದುಕೊಂಡ ಕಂಪೆನಿ ಸರಕಾರ ಪಾಣೆಮಂಗಳೂರು ಬಳಿ ನೇತ್ರಾವತಿಗೆ ಸೇತುವೆಯೊಂದರ ಅಗತ್ಯವನ್ನು ಕಂಡುಕೊಂಡು. ಬಂಟ್ವಾಳ ನಗರದ ಕೊನೆಯಲ್ಲಿ ಪಾಣೆಮಂಗಳೂರನ್ನು ನೇರವಾಗಿ ತಲುಪಲು ರಚಿತವಾದ ಬೃಹತ್ ಪಾಣೆಮಂಗಳೂರು ಸೇತುವೆ 1914ರಲ್ಲಿ ನಿರ್ಮಾಣಗೊಂಡಿತು. ಇದು ಜಿಲ್ಲೆಯ ಮೊತ್ತಮೊದಲ ಆಧುನಿಕ ಸೇತುವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕಂಪೆನಿ ಸರಕಾರದ ಕಾರ್ಯದಕ್ಷತೆಯ ಕೈಗನ್ನಡಿಯಂತಿರುವ ಈ ಸೇತುವೆ ಮೇ 22, 2002ರಂದು ಗ್ರಾನೈಟ್ ಹೊತ್ತ ಲಾರಿಯೊಂದು ಸಾಗುತ್ತಿದ್ದಂತೆ, ಭಾರೀ ಶಬ್ದದೊಂದಿಗೆ 3 ಇಂಚಿನಷ್ಟು ಕುಸಿಯಿತು. ಪರಿಣಾಮವಾಗಿ ಮಂಗಳೂರು-ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಸಾರಿಗೆ ವ್ಯವಸ್ಥೆ ಅಸ್ಥವ್ಯಸ್ಥಗೊಂಡು ಬಳಸು ದಾರಿಯ ನಿತ್ಯ ಸಂಚಾರ ಬಹುದೊಡ್ಡ ಸಮಸ್ಯೆಯಾಗಿತ್ತು.
ನಂತರ ಇದರ ಪಕ್ಕದಲ್ಲೇ ನೂತನ ಸೇತುವೆ ನಿರ್ಮಾಣಗೊಂಡಿದ್ದು ಈ ಸೇತುವೆ 386ಮೀ. ಉದ್ದ, 12ಕಿ.ಮೀ. ಅಗಲವನ್ನು ಹೊಂದಿದೆ. ಇದೀಗ ಬಂಟ್ವಾಳ ನಗರ ವ್ಯಾಪ್ತಿಯಲ್ಲಿ ಬರುವ ನೂತನ ಸೇತುವೆ ಮಂಗಳೂರು-ಬೆಂಗಳೂರು ಸಂಪರ್ಕದ ಪ್ರಮುಖ ಕೊಂಡಿಯಾಗಿ ಗುರುತಿಸಿಕೊಂಡಿದೆ. ಬ್ರಿಟಿಷರ ಕಾಲದ ಹಳೆಯ ಸೇತುವೆ ಪಾಣೆಮಂಗಳೂರು, ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುವ ಬಸ್ಸು ಮತ್ತು ಇತರ ಲಘು ವಾಹನಗಳ ಸಂಚಾರಕ್ಕೆ ಸೀಮಿತವಾಗಿದೆ.
ತಾಲೂಕಿನ ಒಂದು ಭಾಗದಲ್ಲಿ ಕಳೆಂಜಿಮಲೆ, ಕೊಡ್ಯಮಲೆ, ಸುಳ್ಳಮಲೆಗಳೆಂಬ ಮೂರು ಮಲೆಗಳು, ಐತಿಹಾಸಿಕ ಹಿನ್ನೆಲೆಯ ಕಾರಿಂಜ ಬೆಟ್ಟ, ನರಹರಿ ಪರ್ವತ, ಶ್ರೀಕ್ಷೇತ್ರ ಪೊಳಲಿ, ಅಜಿಲಮೊಗರು ಜುಮ್ಮಾ ಮಸೀದಿ, ಶ್ರೀಕ್ಷೇತ್ರ ಕಡೇಶ್ವಾಲ್ಯ ಮೊದಲಾದ ಪುಣ್ಯಕ್ಷೇತ್ರಗಳು ಬಂಟ್ವಾಳವನ್ನು ನಾಡಿನ ಧಾರ್ಮಿಕ ವಲಯದಲ್ಲಿ ವಿಶೇಷವಾಗಿ ಗುರುತಿಸುವಂತೆ ಮಾಡಿದೆ.
ಗೋಪಾಲ ಅಂಚನ್
