ಮುದ್ದು ಮೂಡುಬೆಳ್ಳೆ ಹೆಸರು ಕೇಳದವರು ತೀರಾ ವಿರಳ. ಬಹುತೇಕ ಮಂದಿ ಆಕಾಶವಾಣಿ ಮೂಲಕ ಅವರ ಮಧುರ ಸ್ವರದ ಸ್ವಾಧವನ್ನು ಅನುಭವಿಸಿದವರೇ. ಅವರ ಸ್ವರವೇ ಅಂತದ್ದು, ವ್ಯಕ್ತಿತ್ವವೂ ಹಾಗೆ. ಸರಳ ಸಜ್ಜನಿಕೆಗೆ ಮತ್ತೊಂದು ಹೆಸರು. ಬಹುಮುಖಿ ಸಾಧಕರು, ಸೃಜನಾಶೀಲ ಬರಹಗಾರರಾಗಿ-ಜಾನಪದ ಸಂಶೋಧಕರಾಗಿ ಸಾಹಿತ್ಯ-ಸಾಂಸ್ಕ್ರತಿಕ ವಲಯದಲ್ಲೂ ದೊಡ್ಡ ಹೆಸರು. ಮೂಲತಃ ಉಡುಪಿ ತಾಲೂಕಿನ ಕಟ್ಟಿಂಗೇರಿ ಗ್ರಾಮಾಂತರ ಪ್ರದೇಶದವರಾದ ಮುದ್ದು ಮೂಡುಬೆಳ್ಳೆಯವರು ಕರ್ನಾಟಕ ಸರಕಾರದ ನ್ಯಾಯಾಂಗ ಇಲಾಖೆಯಲ್ಲಿ 9ವರ್ಷ ಸೇವೆ ಸಲ್ಲಿಸಿ, 1985ರಲ್ಲಿ ಕೇಂದ್ರ ಪ್ರಸಾರ ಇಲಾಖೆಯ ಆಕಾಶವಾಣಿಗೆ ಆಯ್ಕೆಗೊಂಡು, ವಿವಿದೆಡೆ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಮಂಗಳೂರು ಆಕಾಶವಾಣಿಯಲ್ಲಿ ಹಿರಿಯ ಶ್ರೇಣಿ ಪ್ರಸಾರಕರಾಗಿ ಕಳೆದ ವರ್ಷ ನಿವೃತ್ತರಾದವರು. ಪ್ರಸ್ತುತ `ಮಂಗಳೂರು ದರ್ಶನ’ ಸಂಪುಟದ ಉಪಸಂಪಾದಕರಾಗಿ ಸೇವಾ ನಿರತರು.

ಮುದ್ದು ಮೂಡುಬೆಳ್ಳೆಯವರು ಕಥೆಗಾರರಾಗಿ, ಕವಿಯಾಗಿ, ಜಾನಪದ ಅಧ್ಯಯನಕಾರರಾಗಿ, ಗಾಯಕರಾಗಿ, ನಾಟಕಕಾರರಾಗಿ, ಪ್ರಸಾರಕರಾಗಿ ಪರಿಚಿತರು, ಆಯಾಯ ಕ್ಷೇತ್ರದಲ್ಲಿ ಗಮನಾರ್ಹ ಕೃಷಿ ಮಾಡಿದವರು. ಈ ನೆಲೆಯಲ್ಲಿ ಜನಸಮುದಾಯಕ್ಕೆ ಹತ್ತಿರವಾಗುತ್ತಾ ಈ ಕ್ಷೇತ್ರದ ಪ್ರತಿಭಾವಂತರ ಬೆಳವಣಿಗೆಗೂ ಪ್ರೋತ್ಸಾಹದಾತರಾದವರು.
ಇವರ ಸಾಹಿತ್ಯ ಸೇವೆಯೂ ದೊಡ್ಡದು. ಕನ್ನಡ ಮತ್ತು ತುಳುವಿನಲ್ಲಿ 6 ಕತಾ ಸಂಕಲನಗಳು, 2 ಕಾದಂಬರಿಗಳು, ತುಳು ರಂಗಭೂಮಿ ಸಮಗ್ರ ಅಧ್ಯಯನ, ಕಾಂತಾಬಾರೆ ಬೂದಬಾರೆ ಸಂಶೋಧನಾ ಕೃತಿ ಸೇರಿದಂತೆ ಕಾವ್ಯ, ಜಾನಪದ, ಸಂಶೋಧನೆಗಳಿಗೆ ಸಂಬಂಧಿಸಿದಂತೆ ಒಟ್ಟು 30 ಕೃತಿಗಳನ್ನು ಪ್ರಕಟಿಸಿದ್ದು ಈ ಪೈಕಿ ತುಳು ಮತ್ತು ತುಳು ಸಂಬಂಧಿ 20 ಕೃತಿಗಳನ್ನು ಪ್ರಕಟಿಸಿರುವುದು ತುಳು ಸಾಹಿತ್ಯ ಲೋಕಕ್ಕೆ ನೀಡಿದ ಮಹಾನ್ ಕಾಣಿಕೆ. ತುಳು-ಕನ್ನಡ ಭಾಷೆ, ಸಾಹಿತ್ಯ ಸಂಸ್ಕøತಿ, ಅಧ್ಯಯನ, ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಬರಹಗಳು ನಾಡಿನ ವಿವಿಧ ಪ್ರಮುಖ ಪತ್ರಿಕೆಗಳಲ್ಲಿ, ಸಂಚಿಕೆಗಳಲ್ಲಿ ಪ್ರಕಟಗೊಂಡಿದೆ. 25ವರ್ಷಗಳಿ ಆಕಾಶವಾಣಿ ತುಳು ವಿಶಿಷ್ಠ ಸೇವೆಗಾಗಿ ತುಳು ಆಯನೋ ಪ್ರಶಸ್ತಿ ದೊರೆತಿರುವುದು ಇವರ ತುಳು ಸೇವೆಗೆ ಸಂದ ಗೌರವವೇ ಸರಿ.
ಕತೆ, ಕಾವ್ಯ, ಜಾನಪದ, ಸಂಶೋಧನೆಗಳಿಗೆ ಸಂಬಂಧಿಸಿದಂತೆ ಸಾಹಿತ್ಯ ಸೇವೆ ಗೈದಿರುವುದರೊಂದಿಗೆ ಕನ್ನಡ, ಇಂಗ್ಲಿಷ್, ತುಳು, ಕೊಂಕಣಿ ಭಾಷೆಗಳಲ್ಲಿ ಕಥಾರಚನೆಗೈದು ಚತುರ್ಭಾಷಾ ಲೇಖಕನೆಂದು ಬಹಳ ಹಿಂದೆಯೇ ಹೆಸರು ಪಡೆದಿರುವ ಮುದ್ದು ಮೂಡುಬೆಳ್ಳೆಯವರ ಮೂರು ಕೃತಿಗಳು ಗುಲಬರ್ಗ ಮತ್ತು ಮಂಗಳೂರು ವಿವಿಗಳಲ್ಲಿ ಪಠ್ಯವಾಗಿ ಸೇರ್ಪಡೆಗೊಂಡಿದೆ.
ಹಲವು ಕೃತಿಗಳು ಮತ್ತು ಸಂಚಿಕೆಗಳ ಸಹಲೇಖಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ ಇವರು ರಾಜ್ಯ, ಹೊರನಾಡಿನ ಹಲವು ಸಮಾರಂಭಗಳು, ಕವಿಗೋಷ್ಠಿ, ವಿಚಾರಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆಗಾರರಾಗಿ, ಅಧ್ಯಕ್ಷರಾಗಿ, ಅತಿಥಿಯಾಗಿ, ಸಂಘಟಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ. ಉತ್ತಮ ವಾಗ್ಮಿಯಾಗಿ ತನ್ನ ವಿದ್ವತ್ಪೂರ್ಣ ಮಾತುಗಳಿಂದ ವೀಕ್ಷಕರ ಮನಗೆದ್ದಿದ್ದಾರೆ. ಹಲವಾರು ಸಂಘಟನೆಗಳಲ್ಲಿಯೂ ಸೈ ಎನಿಸಿಕೊಂಡ ಇವರು ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾಗಿ, ಪ್ರಸ್ತುತ ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕ್ರತಿಕ ಅಧ್ಯಯನ ಪ್ರತಿಷ್ಠಾನದ ವಿಶ್ವಸ್ಥರಾಗಿ, ಬೆಳ್ಳೆ ಉಡುಪಿಯ ಸಾಹಿತ್ಯ ಸಂಸ್ಕøತಿ ವೇದಿಕೆಯ ಅಧ್ಯಕ್ಷರಾಗಿ, ಆಕಾಶವಾಣಿ-ದೂರದರ್ಶನ ಉದ್ಯೋಗಿಗಳ ಸಹಕಾರ ಸಂಘದ ಉಪಾಧ್ಯಕ್ಷ ಸಹಿತ ಹಲವಾರು ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕ್ರತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸರಕಾರ ಸಹಿತ ನಾಡಿನ ಹಲವು ಸಂಘಟನೆಗಳು ಮುದ್ದು ಅವರ ಸಾಧನೆಯನ್ನು ಗೌರವಿಸಿದೆ. ಅಪೂರ್ವ ಸಾಹಿತ್ಯ ಸೇವೆಗಾಗಿ ಮಾಸ್ತಿ ಕಥಾ ಪ್ರಶಸ್ತಿ, ಗೊರೂರು ಪ್ರಶಸ್ತಿ, 3 ಬಾರಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಬಹುಮಾನ, ಪಣಿಯಾಡಿ ಕಾದಂಬರಿ ಪ್ರಶಸ್ತಿ, ಆಕಾಶವಾಣಿಯ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿ,ವಿಶು ಕುಮಾರ್ ಪ್ರಶಸ್ತಿ, ತುಳುನಾಡ ತುಳುಶ್ರೀ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪ್ರಾಪ್ತವಾಗಿದೆ.
ವ್ಯಕ್ತಿತ್ವದಲ್ಲಿ ಶ್ರೇಷ್ಠತೆ, ಸೇವೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ದಕ್ಷತೆ, ಬದುಕಿನಲ್ಲಿ ಸನ್ನಡತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಮುದ್ದು ಅವರ ಮುಂದಿನ ಬದುಕು ಬಂಗಾರವಾಗಲಿ, ಸುಖ-ಶಾಂತಿ ನೆಲೆಯಾಗಲಿ, ಇನ್ನಷ್ಟು ಸೇವೆ ಮಾಡಲು ದೈವ-ದೇವರ ಅನುಗ್ರಹ ಅವರ ಪಾಲಿಗಿರಲಿ ಎಂಬುದೇ ನಮ್ಮೆಲ್ಲರ ಹರಕೆ-ಹಾರೈಕೆ.
ಎ.ಗೋಪಾಲ ಅಂಚನ್
