`ನಮ್ಮ ನಾಯಕರು ಸರಿ ಇಲ್ಲ. ನಾಯಕನಿಂದಾಗಿಯೇ ನಮ್ಮ ಸಂಸ್ಥೆ ಹಾಳಾದದ್ದು. ನಾಯಕರ ಸರ್ವಾದಿಕಾರಿ ಧೋರಣೆಯೇ ನಮ್ಮನ್ನು ಬಲಿತೆಗೆದುಕೊಂಡದ್ದು’-ಇಂದು ವಿವಿಧ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಜನರಿಂದ ಕೇಳಿ ಬರುತ್ತಿರುವ ಇಂತಹ ನೂರಾರು ಮಾತುಗಳು ಸಮರ್ಥ ನಾಯಕತ್ವದ ಕೊರತೆಗೆ ಕೈಗನ್ನಡಿ.
`ನನ್ನಿಂದ ನಿಭಾಯಿಸಲು ಆಗುತ್ತಿಲ್ಲ. ಯಾರೂ ನನ್ನನ್ನು ಒಪ್ಪುತ್ತಿಲ್ಲ. ನನ್ನ ಕೆಳಗಿನವರು ನನಗೆ ಬೆಂಬಲ ನೀಡುತ್ತಿಲ್ಲ’-ಹೀಗೆ ಬೇರೆ ಬೇರೆ ಕ್ಷೇತ್ರದಲ್ಲಿ ನಾಯಕತ್ವ ವಹಿಸಿಕೊಂಡಿರುವ ನಾಯಕರೆನಿಸಿಕೊಂಡವರಿಂದ ಕೇಳಿ ಬರುವ ಇಂತಹ ಮಾತುಗಳು ಕೂಡಾ ನಾಯಕತ್ವದ ಅಸಮರ್ಥತೆಯ ದ್ಯೋತಕ.
ಅಳಿವಿನಂಚಿನಲ್ಲಿದ್ದ ಅದೆಷ್ಟೋ ಸಂಸ್ಥೆಗಳು, ಉದ್ದಿಮೆಗಳು, ಕುಟುಂಬಗಳು, ಮನೆಗಳು ಸಮರ್ಥ ನಾಯಕರಿಂದಲೇ ಪುನರ್ ಜನ್ಮ ಪಡೆದದ್ದು, ಯಶಸ್ವಿಯಾಗಿ ಸಾಧನೆಯ ಹಾದಿಯಲ್ಲಿ ಮುನ್ನಡೆದದ್ದು. ನೂರಾರು ಸಮಸ್ಯೆ, ಸಂಕಷ್ಟ, ಸವಾಲುಗಳು ಕಣ್ಣ ಮುಂದಿದ್ದರೂ ಅದನ್ನು ಮೆಟ್ಟಿ ನಿಂತು ಬೆಳೆಯಿಸಿದ್ದು ಸಮರ್ಥ ನಾಯಕತ್ವವೇ.
ಸಮಾಜಕ್ಕೆ ಮಾದರಿಯಾಗಬೇಕಾಗಿದ್ದ ಬಹುತೇಕ ವ್ಯವಸ್ಥೆಗಳು ಹೇಳ ಹೆಸರಿಲ್ಲದೆ ಮರೆಯಾಗಿ ಹೋಗಿದ್ದು ಅಸಮರ್ಥ ನಾಯಕತ್ವದ ಫಲ. ಸಾಕಷ್ಟು ಅವಕಾಶ, ಸೌಲಭ್ಯಗಳಿದ್ದರೂ ಅದನ್ನು ಉಪಯೋಗಿಸದೆ ಬಹುತೇಕ ವ್ಯವಸ್ಥೆಗಳನ್ನೇ ಮಣ್ಣು ಪಾಲು ಮಾಡಿದ್ದು ಅಸಮರ್ಥ ನಾಯಕತ್ವದ ಕೊಡುಗೆಯೇ.
ಇರಲಿ, ಈಗ ನಮ್ಮ ಮುಂದಿರುವ ಪ್ರಶ್ನೆ. ನಾಯಕರೆಂದರೆ ಯಾರು? ಹುಟ್ಟಿದಾಗ ಯಾರೂ ನಾಯಕರಲ್ಲ. ಹುಟ್ಟಿದ ಮೇಲೆಯೇ ನಾಯಕರಾದವರು, ಇಲ್ಲವೇ ಅದ್ಯಾವುದೋ ಅವಕಾಶದಿಂದ ನಾಯಕರಾದವರು.
ನಾಯಕರನ್ನು ಸರಳವಾಗಿ 4ವಿಭಾಗಗಳಲ್ಲಿ ವಿಂಗಡಿಸಬಹುದೇನೋ? ಅದೆಂದರೆ ಸ್ಥಾನ, ಹಣ, ಜನ, ಗುಣ…ಯಾವುದೋ ಒಂದು ಹುದ್ದೆ ದೊರೆತು ನಾಯಕರಾದವರು, ಹಣ ಇದೆ ಎಂಬ ಕಾರಣಕ್ಕೆ ನಾಯಕರಾದವರು, ಬೆನ್ನ ಹಿಂದೆ ಜನರಿದ್ದಾರೆ ಎಂಬ ಕಾರಣಕ್ಕೆ ನಾಯಕರಾದವರು. ಕೊನೆಯದಾಗಿ ನಾಯಕತ್ವದ ವಿಶೇಷ ಗುಣಗಳಿಂದಲೇ ನಾಯಕರಾದವರು.
ಮೊದಲನೇ ಮೂರು ವರ್ಗದ ನಾಯಕತ್ವವೂ ತಾತ್ಕಾಲಿಕ. ಯಾಕೆಂದರೆ ಇವು ಮೂರೂ ನಾಮ ವಿಶೇಷಗಳಿಂದ ಕೂಡಿದ ನಾಯಕತ್ವ. ಆದರೆ ಗುಣ ವಿಶೇಷಗಳಿಂದ ಕೂಡಿದ ನಾಯಕತ್ವ ಎಂದಿಗೂ ಶಾಶ್ವತ. ಗುಣ ವಿಶೇಷ ಇದ್ದರಷ್ಟೆ ಸಾಲದು. ಪ್ರಾಯೋಗಿಕ ಅನುಷ್ಠಾನ ಅಗತ್ಯ ಕೂಡಾ. ಅಧಿಕಾರ ಕಳೆದುಕೊಂಡಾಗ, ಹಣ ಇಲ್ಲದಾಗ, ಜನ ದೂರವಾದಾಗ ನಾಯಕತ್ವ ಮರೆಯಾಗಬಹುದಾದರೂ ನಿಜವಾಗಿ ನಾಯಕತ್ವದ ಗುಣ-ಲಕ್ಷಣಗಳಿರುವ ವ್ಯಕ್ತಿ ಯಾವತ್ತೂ ನಾಯಕನೇ. ಆದರೆ ಸ್ಥಾನ, ಹಣ, ಜನರಿಂದ ನಾಯಕರಾದವರೂ ನಿಜವಾದ ನಾಯಕತ್ವದ ಲಕ್ಷಣಗಳನ್ನು ಮೈಗೂಡಿಸಿಕೊಂಡಲ್ಲಿ ಅವರೂ ಎಂದಿಗೂ ಸಮರ್ಥ ನಾಯಕರೇ. ಅವರನ್ನು ಜನ ಒಪ್ಪುತ್ತಾರೆ. ಬೆಂಬಲಿಸುತ್ತಾರೆ ಕೂಡ. ಆದರೆ ಎಷ್ಟು ಮಂದಿಯಲ್ಲಿ ಇಂತಹ ಗುಣಗಳಿದೆ ಎನ್ನುವುದು ಪ್ರಶ್ನೆ. ಇಲ್ಲದೇ ಇದ್ದಾಗ ಅವರನ್ನು ಜನ ನಾಯಕರೆಂದು ಒಪ್ಪುವುದಾದರೂ ಹೇಗೆ? ಅವರು ತನ್ನ ನಾಯಕತ್ವವನ್ನು ಯಶಸ್ವಿಯಾಗಿ ಚಲಾಯಿಸುವುದಾದರೂ ಹೇಗೆ?
ನಿಜಾರ್ಥದಲ್ಲಿ ನಾಯಕರೆಂದರೆ ಯಾರು? ಯಾವತ್ತೂ ಮಹಾತ್ಕಾರ್ಯಕ್ಕೆ ಪ್ರೇರಣೆ ನೀಡುವವ, ಬದಲಾವಣೆಗೆ ತಯಾರಾಗಿರುವವ, ಜನಸಮುದಾಯವನ್ನು ಬದಲಾವಣೆಯ ಹಾದಿಯಲ್ಲಿ ಯಶಸ್ವಿಯಾಗಿ ಮುನ್ನಡೆಸುವವ. ಅರ್ಥಾತ್ ಆತ ಶಿಕ್ಷಕ, ರಕ್ಷಕ, ಗುರು, ಆದರ್ಶ, ಮಾದರಿ, ಸ್ಪೂರ್ತಿ, ಚಿಕಿತ್ಸಕ, ವಿಮರ್ಶಕ,ಪರಿಹಾರಕ…ಹೀಗೆ.
ಈತನ ಮುಂದಿರುವುದು ನಿರ್ದಿಷ್ಟ ಗುರಿ, ಗುರಿ ಸಾಧಿಸಲು ಸ್ಪಷ್ಟವಾದ ಯೋಜನೆ, ಯೋಜನೆ ಜಾರಿಯಾಗಲು ಸಮರ್ಪಕವಾದ ಕಾರ್ಯವಿಧಾನ. ಈತ ತಾನೂ ಕೆಲಸ ಮಾಡುವವ. ಇತರರನ್ನೂ ಮಾಡಿಸುವವ. ತನ್ನನ್ನು ತಾನು ನಿರಂತರ ಆತ್ಮಾವಲೋಕನ ಮಾಡುತ್ತಾ ತಿದ್ದಿಕೊಳ್ಳುವವ, ಟೀಕೆ ಬಂದರೆ ಸ್ವೀಕರಿಸಿ ಸತ್ಯಾಸತ್ಯತೆಯನ್ನು ಅರಿತು ಸರಿಪಡಿಸಿಕೊಂಡವನು.
ಸಮಸ್ಯೆ-ಸಂಕಷ್ಟ-ಸವಾಲು ಬಂದಾಗ ಬೆದರಿ ಓಡಿ ಹೋಗುವುದಿಲ್ಲ. ಅದರೊಳಗಿದ್ದು ಎದುರಿಸುತ್ತಾನೆ. ಸಮಸ್ಯೆ ಪರಿಹರಿಸಲು ಗುರಿ ತಲುಪಲು ನಿರಂತರ ಹೊಸದಾರಿಗಳನ್ನು ಹುಡುಕುತ್ತಾನೆ. ಈತನಿಗೆ ಎಲ್ಲರೂ ಸಮಾನರು, ಎಲ್ಲರಲ್ಲೂ ಪ್ರೀತಿ-ಸಹಾನುಭೂತಿ ಇವನ ಯಶಸ್ಸಿನ ಗುಟ್ಟು. ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಉತ್ತಮ ಸಂವಹನ ಕೌಶಲ್ಯ, ಸುಮಧುರ ಸಂಬಂಧ, ಭಾವನೆಗಳ ಸಮತೋಲನ, ನಿರಂತರ ಪ್ರಯತ್ನ, ದೃಢಚಿತ್ತತೆ, ಸಮಯ-ಸಾಮಥ್ರ್ಯದ ಸದ್ಭಳಕೆ, ಸಮಚಿತ್ತತೆ-ಶಾಂತತೆ, ಪ್ರಮಾಣಿಕತೆ, ದೂರದರ್ಶಿತ್ವ, ಸಂಘಟನಾ ಚತುರತೆ, ವಿಶಾಲ ಮನೋಭಾವನೆ ಮೊದಲಾದವುಗಳೇ ಈತನ ಗೆಲುವಿನ ಮೆಟ್ಟಿಲು. ಇಂತಹ ನಾಯಕನಿಗೆ ತನ್ನ ಮೇಲೆ ನಂಬಿಕೆ ಇದೆ. ಆತ್ಮ ವಿಶ್ವಾಸವಿದೆ. ಶಕ್ತಿಯ ಅರಿವಿದೆ. ಅದ್ಭುತ ಕಲ್ಪನಾ ಶಕ್ತಿ ಇದೆ. ಎಲ್ಲವನ್ನೂ ಸಕರಾತ್ಮಕವಾಗಿ ಚಿಂತಿಸುವ- ಪರಿವರ್ತಿಸುವ ಗುಣವಿದೆ.
ಎಲ್ಲವೂ ಸರಿ ಇಲ್ಲ. ಯಾರೂ ಸರಿ ಇಲ್ಲ ಎಂಬುದು ಇವನ ಮಂತ್ರವಲ್ಲ. ಎಲ್ಲವೂ ಸರಿ ಇದೆ. ಎಲ್ಲರೂ ಸರಿ ಇದ್ದಾರೆ. ಸರಿಯಾಗಬೇಕಾದವನು ನಾನೇ ಎಂಬುದೇ ಈತನ ತಂತ್ರ. ಎಲ್ಲೊ ಬದಲಾವಣೆಯಾಗಬೇಕೆಂದು ಬಯಸುವವನು-ಅದಕ್ಕಾಗಿ ಕಾಯುತ್ತಾ ಬದುಕುವವನು ಇವನಲ್ಲ. ತಾನೇ ಬದಲಾಗಬೇಕೆಂದು ಯೋಚಿಸುವವ, ಬದಲಾಗುವವ, ಇತರರನ್ನೂ ಬದಲಾಯಿಸುವವ.
ಸಮರ್ಥ ನಾಯಕತ್ವದ ಮನೋಭಾವನೆಗಳು:
ಸ್ವವಿಶ್ಲೇಷಣೆ, ತಿದ್ದಿಕೊಳ್ಳುವಿಕೆ, ಹೊಗಳಿಕೆ, ತೆಗಳಿಕೆ ಸಮಾನ, ಎಲ್ಲರಿಂದಾಗಿ ನಾನು, ಇನ್ನೂ ಕಲಿಯಲಿದೆ, ಎಲ್ಲರ ಅಭಿಪ್ರಾಯ ಪಡೆದು ನಿರ್ಣಯ, ಸಾಧಿಸಬಹುದಾದ ಗುರಿ, ಸ್ಪಷ್ಟ ಯೋಜನೆ, ತನ್ನನ್ನು ತಾನು ಪ್ರೀತಿಸುವಿಕೆ, ಟೀಕಿಸುವವರನ್ನು ಕ್ಷಮಿಸುವಿಕೆ, ಸಮಸ್ಯೆಯಲ್ಲೂ ಅವಕಾಶದ ಹುಡುಕಾಟ, ಎಲ್ಲರೂ ಬೆಳೆದರೆ ನಾನು ಬೆಳೆಯುತ್ತೇನೆ, ಇದ್ದ ವ್ಯವಸ್ಥೆಯಲ್ಲಿಯೂ ಸಾಧಿಸಬಹುದು, ಅಧಿಕಾರವಿದ್ದಾಗಲೂ ವಿಧೇಯತೆ, ಗೆಲುವಿಗೆ ಹೊಸ ಮಾರ್ಗದ ಹುಡುಗಾಟ, ಸೋಲಿಗೆ ನಾನೇ ಕಾರಣ ಗೆಲುವಿಗೆ ಎಲ್ಲರೂ ಕಾರಣ ಎಂಬ ಮನೋಭಾವನೆ.
ಅಸಮರ್ಥ ನಾಯಕತ್ವದ ಮನೋಭಾವನೆಗಳು:
ಇತರರನ್ನು ಮಾತ್ರ ತಿದ್ದಲು ಪ್ರಯತ್ನಿಸುವಿಕೆ, ಹೊಗಳಿಕೆ ಇಷ್ಟ-ತೆಗಳಿಕೆ ಕಷ್ಟ, ನಾನೇ ಎಲ್ಲ ನನ್ನನ್ನು ಬಿಟ್ಟರೆ ಯಾರಿಲ್ಲ, ಇತರರು ಕಲಿಯಬೇಕು-ಮಾಡಬೇಕು, ತಾನೇ ನಿರ್ಣಯಿಸಿ ನಂತರ ಅಭಿಪ್ರಾಯ ಸಂಗ್ರಹ, ಆಕಾಶಕ್ಕೆ ಏಣಿ ಹಾಕುವ ಕನಸು-ಯೋಜನೆ ಇಲ್ಲ, ಎಲ್ಲರೂ ತನ್ನನ್ನು ಪ್ರೀತಿಸಬೇಕೆಂದು ಬಯಸುವಿಕೆ, ಟೀಕಿಸುವವರನ್ನು ದ್ವೇಷಿಸುವಿಕೆ, ಅವಕಾಶದಲ್ಲೂ ಸಮಸ್ಯೆಯ ಹುಡುಕಾಟ, ಎಲ್ಲರೂ ಬೆಳೆದರೆ ನಾನು ಸೋಲುತ್ತೇನೆ, ಸಾಕಷ್ಟು ಸೌಲಭ್ಯವಿದ್ದರೇನೇ ಸಾಧಿಸಬಹುದು, ಅಧಿಕಾರವಿಲ್ಲದಾಗ ಮಾತ್ರ ಕಾಲು ಹಿಡಿಯುವಿಕೆ, ಸೋಲಿಗೆ ಹೊಸ ಕಾರಣದ ಹುಡುಕಾಟ, ಗೆಲುವಿಗೆ ನಾನೇ ಕಾರಣ-ಸೋಲಿಗೆ ಎಲ್ಲರೂ ಕಾರಣ ಎಂಬ ಮನೋಭಾವನೆ.
ಗೋಪಾಲ ಅಂಚನ್
