ಬಂಟ್ವಾಳ: ಜನಪ್ರತಿನಿಧಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ತಾಲೂಕು ಉಪನೋಂದಣಿ ಕಚೇರಿಯ ಸಿಬ್ಬಂದಿಯೋರ್ವರ ವಿರುದ್ಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ತುಂಗಪ್ಪ ಬಂಗೇರ ಅವರು ಜಿಲ್ಲಾ ನೊಂದಣಿ ಅಧಿಕಾರಿಯವರಿಗೆ ದೂರು ನೀಡಿದ ಘಟನೆ ಬುಧವಾರ ನಡೆಯಿತು.
ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ನಿವಾಸಿಯೋರ್ವರ ಋಣಭಾರ ಪತ್ರವನ್ನು ನೀಡಲು ವಿಳಂಬ ಮಾಡಲಾದ ಬಗ್ಗೆ ಉಪನೋಂದಣಿ ಕಚೇರಿಗೆ ತೆರಳಿದ ತುಂಗಪ್ಪ ಬಂಗೇರ, ಅರ್ಜಿಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಕೋರಿದ್ದರು. ಈ ಸಂದರ್ಭ ಸಮರ್ಪಕ ಮಾಹಿತಿ ನೀಡದ ಸಿಬ್ಬಂದಿ ಸುಧೀರ್ ಎಂಬವರು ಅನುಚಿತವಾಗಿ ವರ್ತಿಸಿರುವುದಾಗಿ ತುಂಗಪ್ಪ ಬಂಗೇರ ಆರೋಪಿಸಿದ್ದಾರೆ.

ಬಂಟ್ವಾಳ ಉಪನೋಂದಣಿ ಕಚೇರಿಯ ಕೆಲಸ-ಕಾರ್ಯಗಳು ವಿನಾಕಾರಣ ವಿಳಂಬವಾಗುತ್ತಿದ್ದು, ಸಾರ್ವಜನಿಕರು ಅನಾವಶ್ಯಕ ಪರದಾಟ ನಡೆಸುತ್ತಿದ್ದಾರೆ. ಕಚೇರಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳನ್ನು ಬೇರೆ ತಾಲೂಕು, ಜಿಲ್ಲೆಗೆ ವರ್ಗಯಿಸಬೇಕೆಂದು. ಕಚೇರಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಆಗ್ರಹಿಸಿದ ಅವರು, ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಜಿಲ್ಲಾ ನೋಂದಣಿ ಅಧಿಕಾರಿಯವರಿಗೆ ದೂರು ನೀಡಿದ್ದಾರೆ.
ಇಲಾಖೆ ವಿರುದ್ಧ ಧರಣಿ: ಉಪ ನೋಂದಣಿ ಕಚೇರಿಯ ಅಸ್ತವ್ಯಸ್ತ ಹಾಗೂ ಭ್ರಷ್ಟಾಚಾರವನ್ನು ವಿರೋಧಿಸಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ತುಂಗಪ್ಪ ಬಂಗೇರ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ತಾಲೂಕು ಕಾರ್ಯನಿರ್ವಹಕ ದಂಡಾಧಿಕಾರಿ ಪುರಂದರ ಹೆಗ್ಡೆ ಅವರು, ಸರಕಾರಿ ಕಚೇರಿಗೆ ಭೇಟಿ ಕೊಡುವ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಸಜ್ಜನದಿಂದ ವರ್ತಿಸಲು ಸಿಬ್ಬಂದಿ ಸುಧೀರ್ ಗೆ ಸೂಚಿಸಲಾಗಿದೆ ಎಂದಿದ್ದಾರೆ.
