ಮೂಲ್ಕಿ: ಪಾದೂರು ಪೈಪ್‍ಲೈನ್ ವಿರೋಧಿಸಿ ಅದರ ಸಂತ್ರಸ್ತರು ನಡೆಸುತ್ತಿರುವ ಹೋರಾಟಕ್ಕೆ ಪೊಲೀಸ್ ಇಲಾಖೆಯ ಮೂಲಕ ಪ್ರಕರಣವನ್ನು ದಾಖಲಿಸಿಕೊಂಡು ಹೋರಾಟಗಾರರನ್ನು ಹತ್ತಿಕ್ಕಲು ಗುತ್ತಿಗೆದಾರರು ಪ್ರಯತ್ನಿಸುತ್ತಿರುವುದು ಖಂಡನೀಯ, ದಾಖಲಿಸಿದ ಪ್ರಕರಣವನ್ನು ಹಿಂಪಡೆದುಕೊಳ್ಳದಿದ್ದಲ್ಲಿ ಪೊಲೀಸ್ ಠಾಣೆಯ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಾಗುವುದು ಎಂದು ಸಂತ್ರಸ್ತರ ಮುಂದಾಳು ದೇವಿಪ್ರಸಾದ್ ಶೆಟ್ಟಿ ಎಚ್ಚರಿಸಿದರು.
8mlk2.jpg
ಅವರು ಬುಧವಾರ ಮೂಲ್ಕಿ ಸ್ವಾಗತ್ ಸಭಾಂಗಣದಲ್ಲಿ ಪಾದೂರು ಪೈಪ್‍ಲೈನ್ ಸಂತ್ರಸ್ತರ ಸಭೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮೂರು ಮಂದಿ ಹೋರಾಟಗಾರ ಮೇಲೆ ಪೊಲೀಸ್ ಠಾಣೆಯಲ್ಲಿ ಭೂಗತ ಜಗತ್ತಿನ ನಂಟಿನ ಪ್ರಾಣಬೆದರಿಕೆ ಒಡ್ಡಿರುವ ಪ್ರಕರಣ ದಾಖಲಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದರು.
ಪೈಪ್‍ಲೈನ್ ಕಾಮಗಾರಿಗಾಗಿ ಕೇವಲ 5 ಕಿ.ಮೀ. ವ್ಯಾಪ್ತಿಯ ಕೆಲಸ ನಿರ್ವಹಿಸಲು ಆದೇಶ ಇದ್ದು ಅದನ್ನು ಉಲ್ಲಂಘಿಸಿ ಗ್ರಾಮವನ್ನೇ ಗುತ್ತಿಗೆ ಪಡೆದವರ ಹಾಗೆ ವರ್ತಿಸುತ್ತಿರುವ ಯೋಜನೆಯ ಗುತ್ತಿಗೆದಾರರು ಮೊದಲು ದಾಖಲೆಗಳನ್ನು ನೀಡಲಿ, ಇದೇ ಗುತ್ತಿಗೆದಾರರು ಹಿಂದೆ ನಾಗಾರ್ಜುನ ಕಂಪೆನಿ ಹಾಗೂ ಮೂಲ್ಕಿಯಲ್ಲಿ ಲಯನ್ಸ್ ಕ್ಲಬ್‍ನ ಹಣದಿಂದ ನಿರ್ಮಿಸಿದ ಶೀಥಲೀಕರಣದ ಶವಾಗಾರದಲ್ಲಿ ಅಕ್ರಮ ಎಸೆಗಿದ್ದಾರೆ ಎಂದು ಸಮಿತಿಯ ಧನಂಜಯ ಕೋಟ್ಯಾನ್ ಗಂಭೀರವಾಗಿ ಆರೋಪಿಸಿದರು.
ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಮಾತನಾಡಿ ಗುತ್ತಿಗೆದಾರರು ಹೋರಾಟಗಾರರಿಗೆ ಹಣದ ಆಮೀಷ ಒಡ್ಡಿದ್ದರು ಇದು ಫಲಿಸದೇ ಇರುವುದರಿಂದ ಈಗ ಜೀವಬೆದರಿಕೆ ಇದೆ ಎಂದು ಹೇಳುವುದಾದರೆ ಅವರು ಯಾವುದೇ ಧಾರ್ಮಿಕ ಕ್ಷೇತ್ರಕ್ಕೆ ಬಂದು ಪ್ರಮಾಣೀಕರಿಸಲಿ ಇಲ್ಲದಿದ್ದಲ್ಲಿ ಬಹಿರಂಗವಾಗಿ ಕ್ಷಮೆಯನ್ನು ಯಾಚಿಸಬೇಕು ಎಂದು ಸವಾಲು ಹಾಕಿ, ಗುತ್ತಿಗೆದಾರರಲ್ಲಿ ಇರುವ ಲೈಸೆನ್ಸ್ ರಹಿತ ಪಿಸ್ತೂಲ್‍ನ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು. ನಮ್ಮ ಹೋರಾಟವನ್ನು ಕಾನೂನು ರೀತಿಯಲ್ಲಿಯೇ ನಡೆಸುತ್ತೇವೆ ಎಂದರು.
ಚಂದ್ರಹಾಸ ಸನಿಲ್, ಸುಬ್ರಹ್ಮಣ್ಯ ಶೆಣೈ, ಜೊಸ್ಸಿ ಪಿಂಟೋ, ವಸಂತ್ ಬೆರ್ನಾರ್ಡ್, ದಿವಾಕರ್, ಸುರೇಶ್ಚಂದ್ರ ಕೋಟ್ಯಾನ್ ಇದ್ದರು.

By suddi9

Leave a Reply

Your email address will not be published. Required fields are marked *