ಬೆಂಗಳೂರು: ಹೋಳಿ ಹಬ್ಬ ಆಚರಿಸಿದ ಕಾರಣಕ್ಕೆ ಅದ್ಯಾಪಕರು ತರಾಟೆಗೆ ತೆಗೆದುಕೊಂಡಿದ್ದರಿಂದಾಗಿ ವಿದ್ಯಾರ್ಥಿನಿಯರಿಬ್ಬರು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇದೀಗ ಕಾವೇರಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಸಾರ್ವಜನಿಕರೆಲ್ಲರೂ ವಿಲ್ಸನ್ ಗಾರ್ಡನ್’ನ ಲಕ್ಕಸಂದ್ರದ ಮೇರಿ ಇಮ್ಯಾಕ್ಯುಲೇಟ್ ಹೈಸ್ಕೂಲ್ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೆ, ಅದ್ಯಾಪಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳವಂತೆ ಒತ್ತಾಯಿಸಿದ್ದಾರೆ.ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಸಚಿವ ರಾಮಲಿಂಗರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ಘಟನೆ ವಿವರ: ಸೋಮವಾರ ಮತ್ತು ಮಂಗಳವಾರ ಎಲ್ಲೆಡೆ ಹೋಳಿ ಹಬ್ಬ ಆಚರಿಸುತ್ತಿದ್ದ ಭಾಗವಾಗಿ ಬೆಂಗಳೂರಿನ ವಿಲ್ಸನ್ ಗಾರ್ಡನ್’ನ ಲಕ್ಕಸಂದ್ರದ ಮೇರಿ ಇಮ್ಯಾಕ್ಯುಲೇಟ್ ಹೈಸ್ಕೂಲಿನ ಕೆಲವು ವಿದ್ಯಾರ್ಥಿಗಳು ಕೂಡ ಬಣ್ಣ ಎರಚಿ ಹೋಳಿ ಆಚರಿಸಿದ್ದರನ್ನಲಾಗಿದೆ.ಹೋಳಿ ಆಚರಿಸಿದ ಮಕ್ಕಳಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಪ್ರಿಯಾಂಕ (14) ಮತ್ತು ಸೊನಾಲಿ (14) ಕೂಡ ಗುರುತಿಸಿಕೊಂಡಿದ್ದರೆನ್ನಲಾಗಿದೆ.
ವಿದ್ಯಾರ್ಥಿಗಳ ಹೋಳಿ ಆಚರಣೆ ಸಂಭ್ರಮ ಸದರಿ ಶಾಲೆಯ ಶಿಸ್ತು ನಿಯಮಕ್ಕೆ ವಿರುದ್ಧವಾದುದು ಎಂಬ ಕಾರಣಕ್ಕೆ ಮಕ್ಕಳನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು.
ಜತೆಗೆ, ಮಕ್ಕಳ ಅಶಿಸ್ತು ವರ್ತನೆಯ ಕುರಿತು ಪೋಷಕರಿಗೆ ವಿಷಯ ಮುಟ್ಟಿಸುವ ಸಲುವಾಗಿ ಮರುದಿನ ಶಾಲೆಗೆ ಬರುವಾಗ ಪೋಷಕರೊಂದಿಗೆ ಬರಬೇಕೆಂದು ಟೀಚರ್ ಸೂಚಿಸಿದ್ದರು.
ಇದರಿಂದ ಬೇಸತ್ತ ಪ್ರಿಯಾಂಕ (14) ಮತ್ತು ಸೊನಾಲಿ (14) ಮಂಗಳವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಇಬ್ಬರು ವಿದ್ಯಾರ್ಥಿನಿಯರು ಪರಸ್ಪರ ಕೈಗಳನ್ನು ಕಟ್ಟಿಕೊಂಡು ಸ್ಯಾಂಕಿ ಕೆರೆಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆ ಮಾಡಿಕೊಂಡ ಮಕ್ಕಳು ಡೆತ್ ನೋಟ್ ಕೂಡ ಬರೆದಿಟ್ಟಿರುವುದಾಗಿ ತಿಳಿದುಬಂದಿದ್ದು ಅದರಲ್ಲಿ ಅದ್ಯಾಪಕಿ ಬೈದಿದ್ದರಿಂದಾಗಿಯೇ ತಾವು ಬೇಸತ್ತು ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಉಲ್ಲೇಖಿಸಲಾಗಿದೆ.
ಈ ನಡುವೆ ಮೇರಿ ಇಮ್ಯಾಕ್ಯುಲೇಟ್ ಹೈಸ್ಕೂಲ್ ಆಡಳಿತ ಮಂಡಳಿಯ ವಿರುದ್ಧ ಧಾರ್ಮಿಕ ಅಸಮಾನತೆ ಧೋರಣೆಯ ಆರೋಪವೂ ಕೇಳಿಬಂದಿದ್ದು, ಈ ಶಾಲೆಯಲ್ಲಿ ಹಿಂದೂ ಧರ್ಮೀಯರನ್ನು ತುಚ್ಛವಾಗಿ ಕಾಣುವ ರೀತಿಯಲ್ಲಿ ಮಕ್ಕಳ ಮೇಲೆ ಶಿಸ್ತು ಹೇರಲಾಗುತ್ತಿರುವುದಾಗಿ ಪೋಷಕರು ಆರೋಪಿಸಿದ್ದಾರೆ.
ಮತ್ತೊಂದು ಮೂಲಗಳ ಪ್ರಕಾರ ಆ ರೀತಿ ಯಾವುದೇ ಧರ್ಮವನ್ನು ಟಾರ್ಗೆಟ್ ಮಾಡಿ ಇಲ್ಲಿ ಶಿಸ್ತು ಹೇರಲಾಗುತ್ತಿಲ್ಲ, ಬದಲಾಗಿ ಎಲ್ಲಾ ಆಂಗ್ಲ ಮಾದ್ಯಮ ಶಾಲೆಗಳಲ್ಲಿ ಜಾರಿಯಲ್ಲಿರುವ ಶಿಸ್ತು ನಿಯಮಗಳೇ ಇಲ್ಲಿವೆಯಷ್ಟೇ ಹೊರತು ಬೇರೆನಿಲ್ಲ ಎಂಬ ವಾದ ಕೂಡ ಕೇಳಿಬಂದಿದೆ.
ಇದೀಗ ಬಂದ ವರದಿಯಂತೆ; ಪೋಷಕರ ಪ್ರತಿಭಟನೆ, ಮಾದ್ಯಮ ವರದಿಯ ಪ್ರಭಾವ ಸೇರಿದಂತೆ ಹಲವಾರು ರಾಜಕೀಯ ನಾಯಕರ ಒತ್ತಡದ ನಡುವೆ ಇದೀಗ ಅದ್ಯಾಪಕಿಯರಾದ ಮೇರಿ, ಫಿಲೋಮಿನ ಎಂಬವರನ್ನು ಸದಾಶಿವನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ಮುಂದುವರೆಸಿದ್ದಾರೆ. ಈ ಇಬ್ಬರು ಅಧ್ಯಾಪಕಿಯರು ತಮ್ಮನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ವಿದ್ಯಾರ್ಥಿಗಳು ಡೆತ್ ನೋಟ್’ನಲ್ಲಿ ಬರೆದಿಟ್ಟಿದ್ದಾರೆ.
ವಿದ್ಯಾರ್ಥಿಯ ಅನುಮಾನಾಸ್ಪದ ಸಾವು: ಶಾಲಾ ಬಾಲಕನೊಬ್ಬ ಎರಡನೇ ಮಹಡಿಯಿಂದ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಶ್ರೀನಗರದ ಖಾಸಗಿ ಶಾಲೆಯೊಂದರಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಶ್ರೀನಗರದ ಕಾಳಿದಾಸ ಲೇಔಟ್ನಲ್ಲಿರುವ ಎವರ್ಶೈನ್ ಇಂಗ್ಲೀಷ್ ಸ್ಕೂಲ್ನಲ್ಲಿ 8ನೇ ತರಗತಿ ಓದುತ್ತಿದ್ದ ವಿಜಯ್ ಎಂಬ ಬಾಲಕನೇ ಮೃತಪಟ್ಟವನಾಗಿದ್ದಾನೆ.
ನಿನ್ನೆ ರಾತ್ರಿ 8 ಗಂಟೆಗೆ ಟ್ಯೂಷನ್ ಮುಗಿಸಿ ಗೆಳೆಯನ ಬಳಿಯಿಂದ ನೋಟ್ಸ್ ಪಡೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದ ವಿಜಯ್, ಬಳಿಕ ಎಷ್ಟು ಹೊತ್ತಾದ್ರೂ ಮನೆಗೆ ಬಂದಿರಲಿಲ್ಲ.
ಈ ಕುರಿತು ಆತಂಕಗೊಂಡ ಪೋಷಕರು ಸುತ್ತಮುತ್ತ ಹುಡುಕಾಡಿದ ಸಂದರ್ಭ ವಿಜಯ್ ಶಾಲೆಯಲ್ಲೇ ಶವವಾಗಿ ಪತ್ತೆಯಾಗಿದ್ದಾನೆ.
ವಿಜಯ್ ಸೊಂಟಕ್ಕೆ ಹಗ್ಗವೊಂದನ್ನು ಕಟ್ಟಲಾಗಿರೋದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹನುಮಂತನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

