ಸಿದ್ಧಿ ಜನಾಂಗದ ಮಂದಿಯಲ್ಲೂ ಸಾಂಸ್ಕೃತಿಕ ಕಲೆಗಳ ಒಲವಿದೆ. ಇತ್ತೀಚಿನ ದಿನಗಳಲ್ಲಿ ಅವರ ಬದುಕೂ ಹೊರಜಗತ್ತಿಗೆ ತೆರೆದುಕೊಂಡಿದೆ.
ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ ಆಶ್ರಯದಲ್ಲಿ ನಡೆಯುತ್ತಿರುವ ಕೊಂಕಣಿ ಹಾಸ್ಯ ಸ್ಪರ್ಥಾ ಸರಣಿ *ಯೇ ಯಾ ಹಾಸಯಾ..* ಕಾರ್ಯಕ್ರಮ ನೀಡಲು ದೂರದ ಅಂಕೋಲ ಹಳುವಳ್ಳಿಯಿಂದ ಎಂಟು ಗಂಟೆಗಳ ಪ್ರಯಾಣ ನಡೆಸಿ ಎರಡು ತಂಡಗಳು ಪ್ರದರ್ಶನ ನೀಡಿದ ಸಂದರ್ಭ ಅವರ ಬದುಕಿನ ಬಗ್ಗೆ ನಡೆಸಿದ ಅವಲೋಕನವಿದು. ವಿದ್ಯಾಭ್ಯಾಸವೇ ಇಲ್ಲದ ಕ್ಲಿಷ್ಟ ಬುಡಕಟ್ಟು ಬದುಕು ಅವರದಾಗಿತ್ತು. ತೀರಾ ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಹಾಕಲಾಗಿದೆ.
ಉತ್ತರ ಕನ್ನಡದ ನಾನಾ ಕಡೆ ಸಿದ್ಧಿ ಜನಾಂಗದ ಸುಮಾರು 800 ಕುಟುಂಬಗಳು ವಾಸಿಸುತ್ತಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈ ಜನಾಂಗ ವಾಸವಿರುವುದು ವಿರಳ. ಮೂಲತಃ ಸಿದ್ಧಿ ಜನಾಂಗ ಬುಡಕಟ್ಟು ಜನಾಂಗವಾಗಿದ್ದು ಬೆತ್ತದ ಕುಸುರಿ ಬುಟ್ಟಿ ಹೆಣೆಯುವುದು ಇನ್ನಿತರ ಕಾಯಕಗಳಲ್ಲಿ ದಿನಗಳೆಯುತ್ತಿದ್ದಾರೆ. ಇದೀಗ ಪರಿವರ್ತನೆಗೊಂಡು ಹೆಚ್ಚಿನವರು ಹೊಲಗದ್ದೆಗಳಲ್ಲಿ ಕೂಲಿ ಮಾಡಿ ಬದುಕು ಕಾಣುತ್ತಿದ್ದಾರೆ.
ಜಾನಪದ ಸಂಸ್ಕೃತಿ
ಗೋವಾ ಹಾಗೂ ಕುಡುಬಿ ಕೊಂಕಣಿಯನ್ನೇ ಹೋಲುವ ಇವರ ಕೊಂಕಣಿ ಹಾಡುಗಳು ಕುಡುಬಿ ಜನಾಂಗದ ಹೋಳಿ ಹಾಡುಗಳಂತೆ ಕೇಳಿಸುತ್ತದೆ.
*ಡಮಾಮಿ*, ಡಪ್* ಸಂಗ್ಯಾ ಬಾಳ್ಯಾ ಹಾಗೂ ಪುಂಗುಡಿ ಇವು ಸಿದ್ಧಿ ಜನಾಂಗದ ಜನಪದ ಸಂಸ್ಕೃತಿಯ ಪ್ರಕಾರಗಳು.
ಡೋಲನ್ನೇ ಹೋಲುತ್ತದೆ *ಡಮಾಮಿ*. ಡಮಾಮಿ ಇಲ್ಲವಾದರೆ ಸಿದ್ಧಿ ಜನಗಳಿಗೆ ಅದು ಜಾತ್ರೆ-ಜಾತ್ರೆಯೇ ಅಲ್ಲ. ಮದುವೆ ಮದುವೆಯೇ ಅಲ್ಲ ಎಂಬಷ್ಟು ಪ್ರಾಮ್ಯುಖತೆ ಸಿದ್ಧಿ ಸಂಸ್ಕೃತಿಯಲ್ಲಿದೆ.
ಹಳುವಳ್ಳಿಯ *ಸಿದ್ದಿನಾಸ* ದೇವರ ಜಾತ್ರೆಗೆ ರಾತ್ರಿಯಿಡೀ ಡಮಾಮಿ, ಡಪ್ ಸಹಿತ ಹಾಡು ಕುಣಿತಗಳಲ್ಲಿ ಊರಿಗೆ ಊರೇ ಪಾಲ್ಗೊಳ್ಳುವುದು ವಾಡಿಕೆ.
*ಕುಡುಬಿ*ಗಳಲ್ಲಿ ಪ್ರಾಮುಖ್ಯವಾಗಿ ಬಳಸಲ್ಪಡುವ *ಗುಮ್ಮಟೆ* (ಗುಮ್ಟೆ) ಸಿದ್ಧಿಗಳಲ್ಲಿ *ಡಪ್* ಎನಿಸಿಕೊಂಡಿದೆ.
ಆದರೂ ಇವರ ನಡೆ-ನುಡಿ-ಕಾಯಕ-ಸಂಸ್ಕೃತಿಗಳ ಮೇಲೆ ಇತ್ತೀಚಿನ ದಿನಗಳಲ್ಲಿ ಮೋಡರ್ನ್ ಸಂಸ್ಕ್ರತಿಯ ಪ್ರಭಾವದ ಆತಂಕವಿದೆ ಅಂತಾರೆ ಹಿರಿಯರು.
ವಧುದಕ್ಷಿಣೆ:
ಇತರ ಸಮಾಜದಲ್ಲಿ ವರದಕ್ಷಿಣೆಯ ಹಾವಳಿ ವ್ಯಾಪಿಸಿದ್ದರೆ ಸಿದ್ಧಿ ಸಮಾಜದಲ್ಲಿ ವರದಕ್ಷಿಣೆಗಿಂತ *ವಧುದಕ್ಷಿಣೆ* ಪದ್ಧತಿಯೇ ಹೆಚ್ಚಾಗಿತ್ತು. ಅದೂ ಇತ್ತೀಚಿನ ದಿನಗಳಲ್ಲಿ ಕ್ರಮೇಣ ಕಡಿಮೆಯಾಗುತ್ತಿದೆ.
*ಯೇಯಾ ಹಾಸಯಾ…* ಸರಣಿಯ ಮುಂದಿನ ಚಿತ್ರೀಕರಣದ ವೇಳೆ ಬಡಗಎಡಪದವು-ಶಾಸ್ತಾವು ಶ್ರೀ ಭೂತನಾಥೇಶ್ವರ ಕ್ಷೇತ್ರದ ವೇದಿಕೆಯಲ್ಲಿ ಸಿದ್ಧಿ ಸಂಸ್ಕ್ರತಿಯ ಹಾಡು-ಕುಣಿತಗಳ ಪ್ರದರ್ಶನಕ್ಕೆ ಒಂದಷ್ಟು ಸಮಯದ ಅವಕಾಶವನ್ನು ಕಾರ್ಯಕ್ರಮದ ಪಧಾನ ಸಂಘಟಕ ವಿಜಯನಾಥ ವಿಠಲ ಶೆಟ್ಟಿ ಅವರು ಕಲ್ಪಿಸಿಕೊಟ್ಟಿದ್ದು ಅಂಕೋಲ ಹಳುವಳ್ಳಿಯ *ಸಿದ್ಧಿ ಗೆಳೆಯರ ಬಳಗ* ಸಿದ್ಧವಾಗಿದೆ.



