ಬಂಟ್ವಾಳ :ಬಂಟ್ವಾಳ ಇಲ್ಲಿನ ಪುರಸಭೆಯ ಆಡಳಿತ ಪಕ್ಷದಲ್ಲಿ ಯಾವುದೂ ಸರಿ ಇಲ್ಲ ಎಂಬುದು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮತ್ತೆ ಬಯಲಿಗೆ ಬಂದಿದೆ. ಆಡಳಿತ ಪಕ್ಷದ ಸದಸ್ಯರೇ ಆಡಳಿತದ ಕಾರ್ಯವೈಖರಿಯನ್ನು ಟೀಕಿಸಿದ ಪ್ರಸಂಗವೂ ನಡೆಯಿತು. ಸದಸ್ಯೆ ಚಂಚಲಾಕ್ಷಿಯವರು ಇಡೀ ಪಾಣೆಮಂಗಳೂರು ವ್ಯಾಪ್ತಿಯನ್ನೇ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ, ತನ್ನ ವಾರ್ಡ್‍ನ ವಿದ್ಯಾರ್ಥಿನಿಲಯ ದುರಸ್ತಿ, ಪಾಣೆಮಂಗಳೂರು ಜೈನರ ಪೇಟೆ ಪರಿಸರದಲ್ಲಿ ನೀರು ಪೂರೈಕೆಯಾಗದಿರುವುದು ಸೇರಿದಂತೆ ಗಂಭೀರ ಸಮಸ್ಯೆಗಳ ಬಗ್ಗೆ ಗಮನಸೆಳೆದಿದ್ದರೂ, ಈ ವರೆಗೂ ಅಧಿಕಾರಿಗಳು ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಒಂದು ರುಪಾಯಿಗೆ ಅಕ್ಕಿ ಕೊಡುತ್ತಿದೆ, ಆದರೆ ಅದನ್ನು ಬೇಯಿಸಲು ಪುರಸಭೆಯಿಂದ ನೀರು ಕೊಡುವ ಯೋಗ್ಯತೆಯೂ ಇಲ್ಲವೇ ಎಂದು ಟೀಕಿಸಿದರು. ಇದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿದರು. ಮತ್ತೊಂದೆಡೆ ಸದಸ್ಯ ಸದಾಶಿವ ಬಂಗೇರ ರವರು,ಅಧಿಕಾರಿಗಳು ಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಉಡಾಫೆಯಿಂದ ಉತ್ತರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುರಸಭಾಧ್ಯಕ್ಷೆ ವಸಂತಿಚಂದಪ್ಪ ರವರು ಈ ಪ್ರಶ್ನೆಗಳಿಗೆ ನೀಡಿದ ಹಾರಿಕೆಯ ಉತ್ತರಗಳಿಗೂ ಸದಸ್ಯರು ಆಕ್ರೋಶವ್ಯಕ್ತಪಡಿಸಿದರು.

ಸ್ಥಾಯಿಸಮಿತಿ ಮತ್ತೆ ಮುಂದೂಡಿಕೆ
ಕಳೆದ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರ ಗೈರುಹಾಜರಾತಿ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ಸ್ಥಾಯಿಸಮಿತಿ ರಚನೆ, ಈ ಬಾರಿಯ ಸಾಮಾನ್ಯ ಸಭೆಯಲ್ಲೂ ಸದಸ್ಯರಿಬ್ಬರು ಗೈರುಹಾಜರಾದ ಹಿನ್ನೆಲೆಯಲ್ಲಿ ಮತ್ತೆ ಮುಂದೂಡಲ್ಪಟ್ಟಿತು. ಆಡಳಿತ ಪಕ್ಷದ ಸದಸ್ಯರಲ್ಲೇ ಒಮ್ಮತವಿಲ್ಲದಿರುವುದರಿಂದ ಇಂತಹಾ ಪ್ರಸಂಗ ನಡೆಯುತ್ತಿದೆ, ಇದು ನಾಚಿಕೆಗೇಡಿನ ಸಂಗತಿ ಎಂದು ಗೋವಿಂದ ಪ್ರಭು ಛೇಡಿಸಿದರು. ಇನ್ನೂ ಮೂರುವರ್ಷ ಅಧಿಕಾರವಿದ್ದು, ಮುಂದೆ ಸ್ಥಾಯಿಸಮಿತಿ ರಚಿಸುತ್ತೇವೆ ಎಂದು ಅಧ್ಯಕ್ಷ ವಸಂತಿಚಂದಪ್ಪ ರವರು ಪ್ರತ್ಯುತ್ತರ ನೀಡಿದರು. ಈ ಹಂತದಲ್ಲಿ ಸದಸ್ಯ ದೇವದಾಸ ಶೆಟ್ಟಿಯವರು ಮಧ್ಯೆಪ್ರವೇಶಿಸಿ, ಕಳೆದ ಬಾರಿಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿಸಮಿತಿ ರಚನೆ ಸಂಬಂಧಿಸಿದಂತೆ ಕಾನೂನು ಬಾಹಿರವಾಘಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಭೆಯ ಗಮನಕ್ಕೆ ತಂದು, ಈ ಬಗ್ಗೆ ನಿರ್ಣಯ ದಾಖಲಿಸುವಂತೆ ಆಗ್ರಹಿಸಿದರು.
ಬಡ್ಡಕಟ್ಟೆ ಪುರಸಭಾ ವಾಜಪೇಯಿ ವಾಣಿಜ್ಯ ಸಂಕೀರ್ಣಕ್ಕೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸದ ಮೆಸ್ಕಾಂ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿರಿಯ ಸದಸ್ಯ ಗೋವಿಂದ ಪ್ರಭುರವರು, ಮೆಸ್ಕಾಂ ವಿರುದ್ದ ನ್ಯಾಯಾಲಯದ ಮೊರೆ ಹೋಗಲು ಸಲಹೆ ನೀಡಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರೂ ಕೂಡ ಸಹಮತ ವ್ಯಕ್ತಪಡಿಸಿದರು.
ಹಾಗೆಯೇ ಬಂಟ್ವಾಳ ನಗರದ ರಸ್ತೆ ಅಗಲೀಕರಣದ ಕುರಿತಾಗಿಯೂ ಲೋಕೋಪಯೋಗಿ ಇಲಾಖೆಗೆ ಇನ್ನೂ ಕೂಡ ಪುರಸಭೆಯಿಂದ ಪತ್ರ ಬರೆಯದಿರುವ ಬಗ್ಗೆ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.
ಪುರಸಭಾ ವ್ಯಾಪ್ತಿಯ ಕಸದ ಸಮಸ್ಯೆ ಸೋಮವಾರ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಮತ್ತೆ ಗದ್ದಲ ಮಾಡಿದೆ. ಸುದೀರ್ಘ ಚರ್ಚೆ ನಡೆಸಿ ಕಸ ವಿಲೇವಾರಿ ಸಮಸ್ಯೆಗೆ ಜಿಲ್ಲಾಧಿಕಾರಿಯೇ ನೇರ ಕಾರಣ ಎನ್ನುವ ಆರೋಪ ಹೊರಿಸಿದ ಸರ್ವ ಸದಸ್ಯರು ಜಿಲ್ಲಾಧಿಕಾರಿಯ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು. ಸಮಸ್ಯೆಯನ್ನು ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿಶೇಷ ಸಭೆ ಕರೆಯಲು ನಿರ್ಣಯಿಸಲಾಯಿತು.
ಬಂಟ್ವಾಳ ಪುರಸಭೆಯನ್ನು ಸೀಮೆಎಣ್ಣೆ ಮುಕ್ತ ನಗರವನ್ನಾಗಿ ಮಾಡಬೇಕು ಎನ್ನುವ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆಯೆ ಅದನ್ನು ಆಕ್ಷೇಪಿಸಿದ ಸದಸ್ಯ ಸದಾಶಿವ ಬಂಗೇರ ಸೀಮೆ ಎಣ್ಣೆ ರಹಿತ ಬಂಟ್ವಾಳಕ್ಕಿಂತ ಕಸ ಮುಕ್ತ ಬಂಟ್ವಾಳ ನಿರ್ಮಾಣ ಆಗುವ ಅನಿವಾರ್ಯತೆ ಇದೆ. ಸೀಮೆ ಎಣ್ಣೆಗಿಂತ ಪ್ಲಾಸ್ಟಿಕ್ ಅಪಾಯಕಾರಿಯಾದುದು, ಇಲ್ಲಿ ಕಸ ವಿಲೇವಾರಿಯಾಗದೇ ಉಳಿದಿರುವುದರಿಂದ ಪ್ಲಾಸ್ಟಿಕ್‍ಗೇ ಬೆಂಕಿ ಹಾಕಲಾಗುತ್ತಿದೆ. ಇದು ತುಂಬಾ ಅಪಾಯಕಾರಿಯಾಗಿದ್ದು ಇದರ ಬಗ್ಗೆ ಜಿಲ್ಲಾಧಿಕಾರಿ ಯಾಕೆ ಮಾತನಾಡುವುದಿಲ್ಲ ಎಂದು ಆಕ್ರೋಶ ಭರಿತರಾಗಿ ನುಡಿದರು. ಸೀಮೆ ಎಣ್ಣೆ ಮುಕ್ತ ಬಂಟ್ವಾಳ ನಿರ್ಮಿಸಲು ಹೊರಟಿರುವ ಜಿಲ್ಲಾಧಿಕಾರಿಗೆ ಇಲ್ಲಿನ ಕಸದ ಸಮಸ್ಯೆ ಕಾಣುವುದಿಲ್ಲವೇ. ವಿಲೇವಾರಿಯಾಗದೇ ಉಳಿದ ಕಸವನ್ನು ಜಿಲ್ಲಾಧಿಕಾರಿ ಮನೆಯಂಗಳದಲ್ಲಿ ಹಾಕಬೇಕೇ? ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಬಂಟ್ವಾಳ ಪುರಸಭೆಯಿಂದ ನಿರ್ಣಯ ಮಾಡಿ ಜಿಲ್ಲಾಧಿಕಾರಿಗೆ ಕಳುಹಿಸಿದ ಯಾವುದೇ ಬೇಡಿಕೆಗಳು ಅದೇ ವರ್ಷ ಅನುಮೋದನೆಗೊಂಡು ಮಂಜುರಾತಿಯಾದ ದಾಖಲೆ ಇಲ್ಲ. ಟೆಂಡರ್‍ಗೆ ಜಿಲ್ಲಾಧಿಕಾರಿಯಿಂದ ಅನುಮೋದನೆ ಸಿಗುವವರೆಗೂ ಇಲ್ಲಿನ ಕಸದ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. ಅದಕ್ಕೆ ಜಿಲ್ಲಾಧಿಕಾರಿಯೇ ನೇರ ಹೊಣೆ ಎಂದು ವಿಪಕ್ಷ ಸದಸ್ಯ ದೇವದಾಸ ಶೆಟ್ಟಿ ಧ್ವನಿ ಗೂಡಿಸಿದರು. ಕಂಚಿನಡ್ಕ ಪದವು ತಾಜ್ಯ ಸಂಸ್ಕರಣ ಘಟಕ ನಿಮಾಣಕ್ಕಿದ್ದ ಎಲ್ಲಾ ಅಡೆತಡೆಗಳನ್ನು ನ್ಯಾಯಲಯ ಹಾಗೂ ಸರ್ಕಾರವೇ ತೆರವುಗೊಳಿಸಿತ್ತು. ಅಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಸಮಸ್ಯೆ ಸೃಷ್ಟಿಸಿದ್ದೇ ಜಿಲ್ಲಾಧಿಕಾರಿ ಎನ್ನುವ ಆರೋಪ ಸದಸ್ಯರಿಂದ ಕೇಳಿ ಬಂತು. ತ್ಯಾಜ್ಯ ಘಟಕ ನಿರ್ಮಾಣದ ಬಗ್ಗೆ ಗ್ರಾ.ಪಂ.ಸದಸ್ಯರನ್ನು ಕರೆದು ಸಭೆ ಮಾಡುತ್ತಾರೆ, ಪುರಸಭೆ ಸದಸ್ಯರಿಗೆ ಅಷ್ಟೂ ಗೌರವ ಇಲ್ಲವೇ, ಪುರಸಭೆ ಸದಸ್ಯರನ್ನೂ ಕರೆದು ಯಾಕೆ ಸಭೆ ಮಾಡುವುದಿಲ್ಲ ? ಎಂದು ಪ್ರಶ್ನಿಸಿದ ಸದಾಶಿವ ಬಂಗೇರಾ ಐದು ವರ್ಷದ ಅವಧಿ ಮುಗಿಯುವರೆಗೂ ಕಸದ ಸಮಸ್ಯೆಯೇ ಮುಗಿಯುವುದಿಲ್ಲ ಎಂದು ಅಸಮದಾನ ವ್ಯಕ್ತ ಪಡಿಸಿದರು. ಅಂತಿಮವಾಗಿ ಜಿಲ್ಲಾಧಿಕಾರಿಯ ಉಪಸ್ಥಿತಿಯಲ್ಲಿ ವಿಶೇಷ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ನಿರ್ಧರಿಸಲಾಯಿತು.
ಅಧಿಕಾರ ದುರುಪಯೋಗದ ಆರೋಪ..
ಶೇ.7.25 ರ ಅನುದಾನದಲ್ಲಿ ಶಿಕ್ಷಣದ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್ ಶಿಪ್ ಹಂಚಿಕೆಯಲ್ಲಿ ಅಧ್ಯಕ್ಷರು ಅಧಿಕಾರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವಿಪಕ್ಷ ಸದಸ್ಯ ಗೋವಿಂದಪ್ರಭು ಆರೋಪಿಸಿದರು. 3 ಲಕ್ಷ ಅನುದಾನದಲ್ಲಿ ಬಂದ ಅರ್ಜಿಗಳಿಗೆ ಸ್ಕಾಲರ್ ಶಿಪ್ ಹಂಚಿಕೆ ಮಾಡುವುದು ಎಂದು ಕಳೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಅಧ್ಯಕ್ಷರು ಅಧಕಕಾರ ದುರುಪಯೋಗಪಡಿಸಿಕೊಂಡು 16 ಸಾವಿರ ಹೆಚ್ಚುವರಿ ವಿತರಣೆಗೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದು ಇದು ಸರಿಯಲ್ಲ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ದೇವದಾಸ ಶೆಟ್ಟಿಯವರು, ಆಯ್ಕೆ ಪಟ್ಟಿಯೇ ಗೊಂದಲದಿಂದ ಕೂಡಿದ್ದು, 33 ವಿದ್ಯಾರ್ಥಿಗಳನ್ನು ವಿನಾಕಾರಣ ಪಟ್ಟಿಯಿಂದ ಕೈಬಿಡಲಾಗಿದ್ದು, ಅವರಿಗೆ ನ್ಯಾಯ ಕೊಡಿಸುವಂತೆ ಪಟ್ಟು ಹಿಡಿದರು. ಇದೇ ವಿಚಾರಕ್ಕೆ ಸಂಬಂಧಿಸಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ತಲಾ 2 ಸಾವಿರದಂತೆ ವಿದ್ಯಾರ್ಥಿವೇತನ ನೀಡುವುದು, ಹೆಚ್ಚುವರಿ ಮೊತ್ತವನ್ನು ಪುರಸಭಾ ನಿಧಿಯಿಂದ ಬಳಸುವುದೆಂದು ಸಬೆ ನಿರ್ಣಯಿಸುವುದರೊಂದಿಗೆ ಚರ್ಚೆಗೆ ತೆರೆಬಿತ್ತು.
ಉಪಾಧ್ಯಕ್ಷೆ ಯಾಸ್ಮೀನ್, ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ವೇದಿಕೆಯಲ್ಲಿದ್ದರು. ಸದಸ್ಯರಾದ ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಶರೀಫ್, ಪ್ರವೀಣ್, ಬಿ.ಮೋಹನ್,ಗಂಗಾಧರ್, ಜಗದೀಶ್ ಕುಂದರ್, ಭಾಸ್ಕರ್ ಟೈಲರ್, ಸುಗುಣಾ ಕಿಣಿ, ಮೊನಿಷ್ ಆಲಿ, ಇಕ್ಬಾಲ್ ಗೂಡಿನಬಳಿ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *