ಮಂಗಳೂರು: ವಾಲೆಂಟೈನ್ ಡೇ ಅಂಗವಾಗಿ ಮಂಗಳೂರಿನ ಕದ್ರಿ ಪಾರ್ಕ್‍ನಲ್ಲಿ ಲಲ್ಲೆಗರೆಯುತ್ತಿದ್ದ ಅಪ್ರಾಪ್ತ ಜೋಡಿ ಹಿಂದೂ ಮಹಾಸಭಾದ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದು, ಅವರು ಅವರಿಗೆ ಮದುವೆ ಮಾಡಿಸಲು ಮುಂದಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಈ ಸಂಬಂಧ ಮೂರು ಮಂದಿ ಹಿಂದೂ ಮಹಾ ಸಭಾದ ಕಾರ್ಯಕರ್ತರನ್ನು ಕದ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ರಾಜೇಶ್ ಪೂಜಾರಿ, ನವೀನ್ ಮತ್ತು ಸುರೇಶ್ ಬಂಧಿತ ಹಿಂದೂ ಮಹಾಸಭದ ಕಾರ್ಯಕರ್ತರು.

ಘಟನೆಯ ವಿವರ: ಫೆ.14 ವಾಲೆಂಟೈನ್ ದಿನದ ಅಪಚಾರವನ್ನು ತಡೆಯುವ ಸಲುವಾಗಿ ಹಿಂದೂ ಮಹಾಸಭಾದ ಕಾರ್ಯಕರ್ತರು ಈ ಮೊದಲೇ ಜೋಡಿ ಕಂಡು ಬಂದರೆ ಅವರಿಗೆ ಮದುವೆ ಮಾಡಿಸುವುದಾಗಿ ಹೇಳಿಕೊಂಡಿದ್ದರು. ಅದರಂತೆ ಬೆಳಗ್ಗಿನಿಂದಲೇ ಗಸ್ತು ತಿರುಗುತ್ತಿದ್ದ ಸಭಾ ಕಾರ್ಯಕರ್ತರಿಗೆ ಕದ್ರಿ ಪಾರ್ಕ್‍ನಲ್ಲಿ ಅಪ್ರಾಪ್ತ ಜೋಡಿಯೊಂದು ಲಲ್ಲಗರೆಯುತ್ತಿರುವುದು ಗಮನಕ್ಕೆ ಬಂದಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಕಾರ್ಯಕರ್ತರು ಜೋಡಿಯನ್ನು ಬಲವಂವಾಗಿ ದೇವಸ್ಥಾನಕ್ಕೆ ಕರೆದೊಯ್ದು ಮದುವೆ ಮಾಡಿಸಲು ಮೂದಾದರು ಎನ್ನಲಾಗಿದೆ. ಆದರೆ ಜೋಡಿ ಅಪ್ರಾಪ್ತ ವಯಸ್ಸಿನವರಾದ ಕಾರಣ ಮದುವೆ ಮಾಡಿಸಲು ವಯಸ್ಸು ಅಡ್ಡ ಬಂದಿತ್ತು ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಕದ್ರಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮೂವರು ಕಾರ್ಯಕರ್ತರನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ವಾಲೈಂಟೈನ್ ದಿನ ಭಾರತೀಯ ಸಂಸ್ಕøತಿಗೆ ವಿರುದ್ಧವಾಗಿದ್ದು, ಈ ದಿನ ನಾವು ಬೀಚ್, ಪಾರ್ಕ್‍ನಂಥಾ ಪ್ರದೇಶದಲ್ಲಿ ಗಸ್ತು ತಿರುಗುತ್ತೇವೆ. ಒಂದು ವೇಳೆ ಜೋಡಿ ಏನಾದರೂ ಕಂಡುಬಂದರೆ ಅವರಿಗೆ ವಿವಾಹ ಮಾಡಿಸುವುದಾಗಿ ಈ ಮೊದಲೇ ಹಿಂದೂ ಸಭಾ ಎಚ್ಚರಿಕೆ ನೀಡಿತ್ತು. ಅದರ ಪ್ರಮುಖರಾದ ಪ್ರಣವಾನಂದ ಸ್ವಾಮೀಜಿ ಸಹ ಇದೇ ಮಾತನ್ನು ಹೇಳಿದ್ದರು.
