ಸುದ್ದಿ9 ಬಂಟ್ವಾಳ: ಕರ್ನಾಟಕ ರಾಜ್ಯದಾದ್ಯಂತ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆ ಮಾಡುವುದರ ಮುಖಾಂತರ ಹೊಸ ಆಯಾಮವನ್ನೇ ಸೃಷ್ಟಿಸಿರುವುದು ಸಂತೋಷದ ವಿಚಾರವಾಗಿರುತ್ತದೆ. ತದನಂತರ ಅದೆಷ್ಟೋ ಬಡಕುಟುಂಬಗಳಿಗೆ ಬಿ.ಪಿ.ಎಲ್ ಪಡಿತರ ಚೀಟಿ ವಿತರಿಸಿ ಬಡವರಿಗೆ ತುಂಬಾ ಅನುಕೂಲವಾಗಿರುತ್ತದೆ. ಆದರೆ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಸಿಬ್ಬಂಧಿಗಳ ಕೊರತೆಯಿಂದಾಗಿ ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬವಾಗುತ್ತಿರುವಾಗ ನೈಜ ಫಲಾನುಭವಿಗಳಿಗೆ ಸರಕಾರದ ಬಿ.ಪಿ.ಎಲ್ ಮಾನದಂಡ ಯೋಜನೆಗಳಿರುವ ಪಡಿತರ ಚೀಟಿ ಸಿಗದೆ ವಂಚಿತರಾಗಿರುವುದು ಕಂಡುಬಂದಿರುತ್ತದೆ. ಬಿ.ಪಿ.ಎಲ್ ಪಡಿತರ ಚೀಟಿ ನಿರಂತರವಾಗಿ ಇರುತ್ತದೆ ಎಂಬ ಇಲಾಖೆಯ ಮಾಹಿತಿಯಂತೆ ಎ.ಪಿ.ಎಲ್‍ನಿಂದ ಬಿ.ಪಿ.ಎಲ್‍ಗೆ ಅರ್ಜಿ ಸಲ್ಲಿಸಲು ಬೆರಳೆಣಿಕೆಯ ಅರ್ಹ ಫಲಾನುಭವಿಗಳು ಬಾಕಿಯಾಗಿದ್ದಾರೆ. ಸದ್ರಿಯವರಿಗೆ ಪ್ರಸ್ತುತ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ವಾಜಪೇಯಿ ಆರೋಗ್ಯ ಶ್ರೀ ಯೋಜನೆ, ಅನ್ನಭಾಗ್ಯ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆ, ರಾಜೀವಗಾಂಧಿ ವಿದ್ಯುತ್ತೀಕರಣ ಮುಂತಾದ ಯೋಜನೆಗಳಿಂದ ವಂಚಿತರಾಗಿರುವುದು ಕಂಡುಬಂದಿರುತ್ತದೆ.
ಆದುದರಿಂದ ಅತೀ ಶೀಘ್ರವಾಗಿ ರಾಜ್ಯದಾದ್ಯಂತ ಎ.ಪಿ.ಎಲ್‍ನಿಂದ ಬಿ.ಪಿ.ಎಲ್ ಹಾಗೂ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಲು ಆನ್‍ಲೈನ್‍ನಲ್ಲಿ ಅವಕಾಶ ಮಾಡಿಕೊಡಬೇಕೆಂದು ಸಚಿವರಾದ ತಮ್ಮಲ್ಲಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಆಯುಕ್ತರಿಗೆ ಈ ಮೂಲಕ ವಿನಂತಿಸಲಾಗಿದೆ.
