ಸುದ್ದಿ9 ಮೂಡಬಿದರೆ: ಮೂಡುಬಿದಿರೆಯಲ್ಲಿ ಇನ್ನು ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲದಲ್ಲಿ ನ್ಯಾಯ ಕೇಳಲು ಬರುವುದು ಸುಗಮ. ಪಶು ವೈದ್ಯಕೀಯ ಆಸ್ಪತ್ರೆಯ ಪಕ್ಕದಲ್ಲೇ 6.60ಕೋಟಿ ವೆಚ್ಚದ ನ್ಯಾಯಾಲಯ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು, ರಾಜ್ಯದ ಹೋಬಳಿ ಕೇಂದ್ರಗಳಲ್ಲೇ ಸುಸಜ್ಜಿತ ಕಟ್ಟಡವನ್ನು ಹೊಂದಿರುವ ಏಕೈಕ ನ್ಯಾಯಾಲಯ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.
ಹಲವಾರು ವಿಶೇಷತೆಗಳೊಂದಿಗೆ ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣಗೊಂಡಿರುವ ನ್ಯಾಯಾಲಯ ಕಟ್ಟಡದ ನಿರ್ಮಾಣದಿಂದ ದಶಕಗಳಿಂದ ನ್ಯಾಯ ಕೇಳಲು ಬರುತ್ತಿದ್ದ ನಾಗರಿಕ ಹಲವಾರು ಸಮಸ್ಯೆಗಳನ್ನು ನಿವಾರಿಸಲಿದೆ. 2014ರಲ್ಲಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲವನ್ನು ಮೂಡುಬಿದರೆ ವಕೀಲ ಸಂಘದ ಸಹಯೋಗದೊಂದಿಗೆ 2004 ಅಕ್ಟೋಬರ್ 14ರಂದು ರಾಜ್ಯ ಹೈಕೋರ್ಟ್‍ನ ಅಂದಿನ ನ್ಯಾಯಾದೀಶ ಎನ್.ಕೆ.ಜೈನ್ ಉದ್ಘಾಟಿಸಿದ್ದರು. ಬಾಹುಬಲಿ ಪ್ರಸಾದ್ ಅಂದು ವಕೀಲರ ಸಂಘದ ಅಧ್ಯಕ್ಷರಾಗಿದ್ದರು. ಅಂದಿನಿಂದ ಹತ್ತುವರ್ಷಗಳ ಕಾಲ ಮಹಾವೀರ ಕಾಲೇಜು ರಸ್ತೆಯ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ನ್ಯಾಯಾಲಕ್ಕೆ ಬರುವ ನಾಗರಿಕರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಬಿಸಿಲು-ಮಳೆಗೆ ತೊಂದರೆಯನ್ನು ಅನುಭವಿಸುವಂತಾಯಿತು. ಶೌಚಾಲಯದ ವ್ಯವಸ್ಥೆಯೂ ಸರಿಯಾಗಿಲ್ಲದ ಕಾರಣ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದರು. ಆದರೆ ಹೊಸ ಕಟ್ಟಡ ನಿರ್ಮಾಣದಿಂದ ಮೂಲಭೂತ ಸಮಸ್ಯೆಗಳು ದೂರವಾದಂತಾಗಿದೆ.
ಲೊಕೋಪಯೋಗಿ ಇಲಾಖೆಯ ಬಜೆಟ್ ಅನುದಾನದಲ್ಲಿ 2010-11 ಸಾಲಿನಲ್ಲಿ ನ್ಯಾಯಾಂಗ ಇಲಾಖೆಗೆ 4 ಕೋಟಿ ರೂ. ಮಂಜೂರಾಗಿತ್ತು. ನೆಲ ಅಂತಸ್ತು, ಪ್ರಥಮ ಮಹಡಿ ವಿದ್ಯುತ್ ಸಂಪರ್ಕ ಹಾಗೂ 25 ಲಕ್ಷ ವೆಚ್ಚದ ಪಿಠೋಪಕರಣಗಳು ಈ ಅನುದಾನದಲ್ಲಿತ್ತು. 2ನೇ ಹಂತವಾಗಿ 2012-13ರಲ್ಲಿ ಮತ್ತೆ ಎರಡು ಕೋಟಿ ಅನುದಾನ ಮಂಜೂರಾಗಿದ್ದು, ಎರಡನೇ ಮಹಡಿ, ಆವರಣಗೋಡೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. ಮೂರನೇ ಹಂತವಾಗಿ 2013-14ರಲ್ಲಿ 60 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ನೆಲ ಸಮತಟ್ಟು, ಇಂಟರ್‍ಲಾಕ್ ಸಹಿತ ಇತರ ಅಭಿವೃದ್ಧಿ ಕೆಲಸವನ್ನು ಮಾಡಲಾಗಿತು.
ಸ್ವರಾಜ್ಯ ಮೈದಾನದ ಬಳಿಯಿರುವ ಪಶುವೈದ್ಯಕೀಯ ಆಸ್ಪತ್ರೆ ಪಕ್ಕದಲ್ಲಿ 1.95 ಎಕರೆ ಜಾಗದಲ್ಲಿ 29,052 ಚದರ ಅಡಿ ವಿಸ್ತೀರ್ಣದ ನೆಲ ಅಂತಸ್ತು ಸಹಿತ 2 ಮಹಡಿ ಕಟ್ಟಡ ನಿರ್ಮಾಣಗೊಂಡಿದೆ. ನೆಲ ಅಂತಸ್ತಿನಲ್ಲಿ ಪಾರ್ಕಿಂಗ್‍ಗೆ ವಿಶಾಲವಾದ ಜಾಗವಿದೆ. ನೆಲ ಅಂತಸ್ತು ಲೋಕ್ ಅದಾಲತ್ ಹಾಲ್, ವಕೀಲರಿಗೆ ಹಾಲ್, ಕಾನ್ಫೆರನ್ಸ್ ಹಾಲ್, ಸ್ಟೋರ್ ರೂಮ್ ಅಡುಗೆ ಕೋಣೆ ಸಹಿತ ಕ್ಯಾಂಟೀನ್, ಮಹಿಳೆಯರು ಹಾಗೂ ಪುರುಷರ ಶೌಚಾಲಯವನ್ನು ಒಳಗೊಂಡಿದೆ.
ಮೊದಲ ಮಹಡಿಯಲ್ಲಿ ನ್ಯಾಯಾಲಯದ ಬಹುತೇಕ ಕಾರ್ಯವೈಖರಿ ನಡೆಯುತ್ತದೆ. ಕೋರ್ಟ್‍ನ ಮುಖ್ಯ ಹಾಲ್, ನ್ಯಾಯಾಲದ ಕಚೇರಿ, ನ್ಯಾಯಾದೀಶರ ಚೇಂಬರ್, ರೆಕಾರ್ಡ್ ರೂಮ್, ಮಹಿಳಾ ಹಾಗೂ ಪುರುಷರ ಲಾಕಪ್ ಸಹಿತ ಪೊಲೀಸ್ ರೂಮ್, ಎಜಿಪಿ, ಎಪಿಪಿ ಕೋಣೆ, ವಕೀಲ ಸಂಘದ ಪದಾಧಿಕಾರಿಗಳಿಗೆ ಕೋಣೆಯಿದೆ. ಸದ್ಯದಲ್ಲೇ ಪ್ರಾರಂಭಗೊಳ್ಳಲಿರುವ ಈ ಬ್ಯುಸಿನೆಸ್ ವ್ಯವಸ್ಥೆಯ ಕೋಣೆಯೂ ಇಲ್ಲಿದೆ. ಸಲಕರಣೆ ಕೋಣೆ, ಸಾಕ್ಷಿದಾರರು ಕಾಯಲು ಕೋಣೆಗಳಿವೆ. ಭವಿಷತ್‍ನಲ್ಲಿ ನ್ಯಾಯಾಲಯ ಮೇಲ್ದರ್ಜೆಗೆ ಏರಿದಾಗ ಆಡಳಿತಾತ್ಮಕ ವ್ಯವಸ್ಥೆಗೆ ತೊಂದರೆಯಾಗಬಾರದೆಂಬ ದೂರದೃಷ್ಟಿಯಿಂದ ಎರಡನೇ ಮಹಡಿಯನ್ನು ಸ್ಥಾಪಿಸಲಾಗಿದೆ. ನ್ಯಾಯಾಲಯದಲ್ಲಿ ಒಟ್ಟು 45 ಕೋಣೆಗಳಿವೆ.



