ಸುದ್ದಿ9 ಮೂಡುಬಿದಿರೆ: ಬೆಳುವಾಯಿ ಪೇಟೆಯ ಹೊಮಲ್ಕೆ ಎಂಬಲ್ಲಿ ಮನೆಯೊಂದರಲ್ಲಿ ರವಿವಾರ ಬೆಳಿಗ್ಗೆ 8 ರವೇಳೆಗೆ ಸ್ಫೋಟ ಸಂಭವಿಸಿದ ಆತಂಕದ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಮನೆ ಭಾಗಶಃ ಧ್ವಂಸಗೊಂಡಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ. ಮನೆಯ ಬಚ್ಚಲು ಕೋಣೆಯ ಗೀಸರ್‍ನಲ್ಲಿ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಅಪರೂಪದ ಈ ಸ್ಫೋಟ ಪ್ರಕರಣದ ಹೆಚ್ಚಿನ ವಿವರಗಳು ಹೆಚ್ಚಿನ ತನಿಖೆಯ ಬಳಿಕವೇ ಸ್ಪಷ್ಟತೆ ಪಡೆಯಬೇಕಾಗಿವೆ.
ಬೆಳುವಾಯಿಯಲ್ಲಿ ಆಟೋ ಇಲೆಕ್ಟ್ರಿಕಲ್ ಆಗಿರುವ ಮೂಲತಃ ತೀರ್ಥಹಳ್ಳಿಯ ನೂರ್ ಜಹಾನ್ ಸಯ್ಯದ್ ಬೆಳುವಾಯಿ ಅನ್ವರ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ರವಿವಾರ ಸ್ಪೋಟ ಸಂಭವಿಸಿದಾಗ ಮನೆಯೊಳಗಿದ್ದವರು ಹೊರಗೆ ಓಡಿ ಬಂದಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಘಟನೆಯಲ್ಲಿ ನೂರ್ ಜಹಾನ್ ಸಯ್ಯದ್(27), ಅವರ ಪತ್ನ ನಜೀಮ(22) ಹಾಗೂ ಪುತ್ರಿ ಜೋಯಾ(3) ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಬಿಡುಗಡೆಗೊಂಡಿದ್ದಾರೆ.
ಬೆಳುವಾಯಿ ಅನ್ವರ್ ಎಂಬವರು ತನ್ನ ಮನೆಯ ಮುಂದುಗಡೆ ಕಟ್ಟಡವನ್ನು ನಿರ್ಮಿಸಿದ್ದು, ಕೆಳಭಾಗದಲ್ಲಿ ನಾಲ್ಕು ಅಂಗಡಿಕೋಣೆಗಳು ಹಾಗೂ ಮೊದಲ ಮಹಡಿಯಲ್ಲಿ ನಾಲ್ಕು ಮನೆಗಳನ್ನು ಬಾಡಿಗೆ ನೀಡಿದ್ದರು. ಈ ಪೈಕಿ ಒಂದು ಕೋಣೆಯಲ್ಲಿ ನೂರ್ ಜಹಾನ್ ಸಯ್ಯದ್ ಕುಟುಂಬ ವಾಸವಾಗಿತ್ತು. ಸ್ಪೋಟದ ತೀವ್ರತೆಗೆ ಮನೆಯೊಳಗಿನ ಎಲ್ಲ ಗೋಡೆಗಳು ಕುಸಿದು ಬಿದ್ದಿದ್ದು ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದು ಕಟ್ಟಡ ಸಂಪೂರ್ಣ ಬಿರುಕುಬಿಟ್ಟಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವವಿಸಿದೆ. ಸ್ಫೋಟದ ತೀವ್ರತೆಗೆ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲೂ ಕಂಪನದ ಅನುಭವವಾಗಿದ್ದು ಈ ಸಂದರ್ಭದಲ್ಲಿ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬರು ನಿಯಂತ್ರಣ ತಪ್ಪಿ ಬಿದ್ದಿದ್ದಾರೆ ಎಂದು ಪತ್ರಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಪೋಟ ಸಂಭವಿಸುವ ವೇಳೆ ಕಟ್ಟಡದೊಳಗೆ ಮೂರು ಸಿಲಿಂಡರ್‍ಗಳಿದ್ದರೂ ಅವುಗಳಿಗೆ ಹಾನಿಯಾಗಿಲ್ಲ, ಸಿಲಿಂಡರ್‍ನ ರೆಗ್ಯುಲೇಟರ್, ವಯರ್ ಸುಟ್ಟಿಲ್ಲ.ಸಿಲಿಂಡರ್‍ನಲ್ಲಿದ್ದ ಗ್ಯಾಸ್ ಕೂಡ ಸೋರಿಕೆಯಾಗಿಲ್ಲವೆಂದು ಸ್ಥಳ ಪರಿಶೀಲನೆ ನಡೆಸಿದ ಎಚ್‍ಪಿ ಗ್ಯಾಸ್‍ನ ವಿತರಕ ಅಭಿಜಿತ್ ಎಂ. ಪತ್ರಕರ್ತರಿಗೆ ತಿಳಿಸಿದರು. ಮನೆಯೊಳಗೆ ಗ್ಯಾಸ್ ಫಿಲಿಂಗ್ ಯಂತ್ರ ಹಾಗೂ ಕಿಟಕಿಗೆ ಜೋಡಿಸಿದ ಬ್ಯಾಟರಿಯೊಂದು ಪತ್ತೆಯಾಗಿದ್ದು, ಸಂಶಯಕ್ಕೆ ಎಡೆ ಮಾಡಿದೆ. ಮನೆಯೊಳಗಿದ್ದ ಗೀಸರ್‍ನಲ್ಲಿ ಗ್ಯಾಸ್ ಸೋರಿಕೆಯಾಗಿದ್ದು ಮನೆಯೊಳಗಿನ ಕಿಟಕಿ ಬಾಗಿಲುಗಳನ್ನು ಮುಚ್ಚಿರುವುದರಿಂದ ಒತ್ತಡಕ್ಕೆ ಒಳಗಾಗಿ ಈ ಸ್ಪೋಟ ಸಂಭವಿಸಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.




