ಬಂಟ್ವಾಳ : ಪುಂಜಾಲಕಟ್ಟೆ ಸಮೀಪದ ಪುರಿಯ ಎಂಬಲ್ಲಿ ದನವೊಂದು ಬಾವಿಗೆ ಬಿದ್ದಿದ್ದು ಬಳಿಕ ಸ್ಥಳೀಯರು ಅಗ್ನಿಶಾಮಕ ದಳದ ಸಹಕಾರದಲ್ಲಿ ಮೇಲಕ್ಕೆತ್ತಿದ ಘಟನೆ ಸೋಮವಾರ ಸಂಭವಿಸಿದೆ.


ಇಲ್ಲಿನ ವ್ಯಕ್ತಿಯೋರ್ವರ ದನ ಸಮೀಪದ ಪೀಟರ್ ಡಿಸೋಜ ಎಂಬವರ ತೋಟದ ಬಾವಿಗೆ ಬೆಳಗ್ಗೆ ಹೊತ್ತು ಬಿದ್ದಿದ್ದು ಮಧ್ಯಾಹ್ನ ಅವರ ಗಮನಕ್ಕೆ ಬಂದಿತ್ತು. ತೋಟದಲ್ಲಿ ಅವರು ಸುತ್ತಾಡುತ್ತಿರುವಾಗ ದನ ಹಾಗೂ ಕರು ಬಾವಿಯ ಒಳಗೆ ಇಣುಕಿ ನೋಡುತ್ತಿರುವುದು ಕಂಡುಬಂದಿತ್ತು. ಸಮೀಪಕ್ಕೆ ಬಂದಾಗ ಬಾವಿಯೊಳಗಿಂದ ಶಬ್ದ ಕೇಳಿ ಬಂದು ದನ ಕಂಡಿತ್ತು. ತಕ್ಷಣ ಅವರು ಸ್ಥಳೀಯರಿಗೆ ಸುದ್ಧಿ ಮುಟ್ಟಿಸಿದ್ದರು.
ಬಾವಿ ಸುಮಾರು 30 ಅಡಿ ಆಳವಿದ್ದು 10 ಅಡಿ ನೀರಿತ್ತು. ತೋಟದ ಬಾವಿಯಾದುದರಿಂದ ಆವರಣವಿರಲಿಲ್ಲ . ದನ ಅಷ್ಟು ಹೊತ್ತು ನೀರಿನಲ್ಲಿ ಈಜುತ್ತಿತ್ತು. ಸ್ಥಳದಲ್ಲಿ ಸೇರಿದ ಸ್ಥಳೀಯರು ಬಾವಿಗೆ ಹಗ್ಗ ಇಳಿಸಿ ದನವನ್ನು ಎತ್ತುವ ಪ್ರಯತ್ನ ನಡೆಸಿದ್ದರು. ಬಳಿಕ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಸುಮಾರು 3 ಗಂಟೆ ಹೊತ್ತಿಗೆ ದನವನ್ನು ಮೇಲಕ್ಕೆತ್ತಲಾಯಿತು. ಸ್ಥಳೀಯರಾದ ರಮಾನಂದ ಮತ್ತಿತರರು ಬಾವಿಗಿಳಿದು ಹಗ್ಗ ಕಟ್ಟಿ ದನವನ್ನು ಮೇಲಕ್ಕೆತ್ತುವಲ್ಲಿ ಶ್ರಮಿಸಿದ್ದು ಸಾರ್ವತ್ರಿಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.
