ಸುದ್ದಿ9 ಗಂಜಿಮಠ: ಜ.27ನೇ ಮಂಗಳವಾರದಂದು ತೆಂಕ ಎಡಪದವು ಗ್ರಾಮದ ಬ್ರಿಂಡೇಲು ಪದವಿನ ಶ್ರೀ ಮಾತೆ ಅಂಬಾ ಭವಾನಿ ದೇವಸ್ಥಾನದ ವಾರ್ಷಿಕ ಜಾತ್ರೆಯು ಬಹಳ ವಿಜೃಂಭಣೆಯಿಂದ ಜರಗಿತು. ಈ ಶುಭ ದಿನದಂದು ದ.ಕ.ಜಿ.ಪಂ.ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಮಂಗಳೂರು ಈ ಯೋಜನೆಯಡಿ ಸರಕಾರದ ವತಿಯಿಂದ ಬಿಡುಗಡೆಯಾದ 10 ಲಕ್ಷ ರೂ. ಅನುದಾನದಿಂದ ನಿರ್ಮಾಣವಾದ ಸಮುದಾಯ ಭವನವನ್ನು ಬ್ರಿಂಡೇಲು ಪದವಿನಲ್ಲಿ ಮಾನ್ಯ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಶ್ರೀಯುತ ಕೃಷ್ಣ ಜೆ. ಪಾಲೆಮಾರ್ ರವರು ಗಣ್ಯರ ಉಪಸ್ಥಿಯಲ್ಲಿ ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟಿಸಿದರು.
“ಸಮುದಾಯಭವನ”ವನ್ನು ಉದ್ಘಾಟಿಸಿ ಪಾಲೆಮಾರ್ರವರು ಮಾತನಾಡುತ್ತಾ, ಮರಾಟಿ ಸಮುದಾಯದವರು ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಪ್ರತಿಯೊಬ್ಬರಿಂದಲೂ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕ್ರತಿಕ ಪ್ರಗತಿಯಲ್ಲಿ ಮರಾಟಿ ಸಮುದಾಯದ ಕೊಡುಗೆ ಅನನ್ಯ; ಮರಾಟಿ ಸಮುದಾಯದಲ್ಲಿ ಉತ್ತಮ ಪ್ರತಭೆಗಳಿದ್ದು ಅವರನ್ನು ಸಂಘಟಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸಿದಾಗ ಈ ಮರಾಟಿ ಸಮಾಜವು ಬಲಿಷ್ಠ ಸಮಾಜ ನಿರ್ಮಾಣಕ್ಕೆ ನಾಂದಿಯಾಗಬಲ್ಲದು ಎಂದರು.ಬಹಳ ಅನಾದಿ ಕಾಲದಿಂದಲೂ ತುಳಿತಕ್ಕೊಳಗಾದ ಈ ಸಮಾಜವನ್ನು ಸಂಘಟಿಸಿ, ಬಲಗೊಳಿಸಿ, ಉತ್ತಮ ಸ್ಥಾನಮಾನಗಳಿಸಿ ಸಮಾಜವನ್ನು ಸದೃಢಗೊಳಿಸುವ ಕಾರ್ಯಮಾಡಬೇಕೆಂದು ಪಾಲೆಮಾರ್ ಕರೆಯಿತ್ತರು. ಇಂತಹ ಅಭಿವೃದ್ಧಿ ಕೆಲಸಗಳಲ್ಲಿ ಗ್ರಾಮಸ್ಥರು ಕೈ ಜೋಡಿಸಿದರೆ ಊರಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಈ ಸಮುದಾಯ ಭವನಕ್ಕೆ ಹಣ ಮಂಜೂರಾತಿಗೆ ಶ್ರಮಪಟ್ಟ ಮರಾಟಿ ಸಮಾಜ ಸೇವಾ ಸಂಘ ಮಂಗಳೂರು ತಾಲೂಕು ಇದರ ಗೌರವಾಧ್ಯಕ್ಷರಾದಂತಹ ಶ್ರೀಯುತ ರುಕ್ಮಯ ನಾಯ್ಕ ಒಡ್ಡೂರು ಇವರನ್ನು ಗಣ್ಯರ ಉಪಸ್ಥಿಯಲ್ಲಿ ಪಾಲೆಮಾರ್ ರವರು ಸನ್ಮಾನಿಸಿದರು.ಗಿರಿಜನ ಸಮುದಾಯದ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು . ಕಾರ್ಯಕ್ರಮದ ಮೊದಲಿಗೆ ವಿ.ಶಿವರಾಯ ಪ್ರಭು ಗಂಜಿಮಠ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
