ನ್ಯೂಯಾರ್ಕ್: ಮಂಗಳ ಗ್ರಹದಲ್ಲಿ ಮನುಷ್ಯರ ವಾಸಕ್ಕೆ ಕಾಲೋನಿಗಳನ್ನ ನಿರ್ಮಿಸುವ ಬಗ್ಗೆ ಸಿಕ್ಕಾಪಟ್ಟೆ ಮಾತುಗಳು ಕೇಳಿಬರುತ್ತಿವೆ. ಅದರೆ, ಶುಕ್ರ ಗ್ರಹ ಮಾನವನ ವಾಸಕ್ಕೆ ಹೆಚ್ಚು ಸಹಕಾರಿಯಾಗಿದ್ದು, ಅಲ್ಲಿ ವಸತಿ ನಿರ್ಮಾಣ ಮಾಡಬಹುದೆಂಬುದನ್ನ ಅನೇಕ ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ. ಶುಕ್ರನ ನೆಲದ ಮೇಲೆ ವಾಸಿಸುವಂಥ ಪೂರಕ ವಾತಾವರಣವಿಲ್ಲ. ಆದರೆ, ಆ ಗ್ರಹದ 30 ಕಿಮೀ ಎತ್ತರದಲ್ಲಿ ಕ್ಲೌಡ್ ಸಿಟಿ ನಿರ್ಮಿಸಲು ನಾಸಾ ಗಮನ ಹರಿಸುತ್ತಿದೆ.
ಅಷ್ಟು ಎತ್ತರದಲ್ಲಿರುವ ವಾತಾವರಣವು ಬಹುತೇಕ ಭೂಮಿಯಲ್ಲಿರುವ ವಾತಾವರಣದಂತೇ ಇದೆ. ವಾಯುಭಾರ ಮತ್ತು ಗುರುತ್ವಾಕರ್ಷಣ ಶಕ್ತಿ ಬಹುತೇಕ ಭೂಮಿಯಂತೇ ಇದೆ. ಆದರೆ, ಉಷ್ಣಾಂಶ ಮಾತ್ರ ವಿಪರೀತವಿದೆ. 75 ಡಿಗ್ರೀ ಸೆಲ್ಷಿಯಸ್’ವರೆಗೂ ಉಷ್ಣಾಂಶವಿದೆಯಂತೆ.
ಶುಕ್ರ ಗ್ರಹಕ್ಕೆ ಮೊದಲು ರೋಬೋವನ್ನ ಕಳುಹಿಸಿ ಪ್ರಾಥಮಿಕ ಪರಿಶೀಲನೆ ನಡೆಸಲಾಗುತ್ತದೆ. ಬದುಕಲು ಸೂಕ್ತ ವಾತಾವರಣದ ಸುಳಿವು ಸಿಕ್ಕ ಬಳಿಕ ಶುಕ್ರ ಗ್ರಹದಿಂದ 30 ಕಿಮೀ ಎತ್ತರದಲ್ಲಿ ಮನುಷ್ಯರಿರುವ ಬಾಹ್ಯಾಕಾಶ ನೌಕೆಯನ್ನ ಕಳುಹಿಸಲಾಗುತ್ತದೆ. ಅಲ್ಲಿ, ಗಗನಯಾತ್ರಿಗಳು ಒಂದು ತಿಂಗಳು ಕಾಲಕಳೆದು ಭೂಮಿಗೆ ಮರಳುತ್ತಾರೆ. ಇದಾದ ಬಳಿಕ ತಲಾ ಇಬ್ಬರು ಗಗನಯಾತ್ರಿಗಳಿರುವ ಎರಡು ತಂಡಗಳನ್ನ ಕಳುಹಿಸಿ ಒಂದು ವರ್ಷ ಬಿಡಲಾಗುತ್ತದೆ. ಎಲ್ಲವೂ ಸುಗಮವಾಗಿ ನಡೆದರೆ, ಶುಕ್ರ ಗ್ರಹದ ಮೇಲೆ ಖಾಯಂ ಆಗಿ ಮಾನವನ ಕಾಲೋನಿಗಳನ್ನ ನಿರ್ಮಿಸುವುದು ನಾಸಾದ ಬೃಹತ್ ಯೋಜನೆಯಾಗಿದೆ.
ಈಗಾಗಲೇ, ಶುಕ್ರ ಗ್ರಹದಂತೆಯೇ ಭೂಮಿಯಲ್ಲಿ ಕೃತಕ ವಾತಾವರಣ ನಿರ್ಮಿಸಿ ಪ್ರಯೋಗಗಳನ್ನ ನಡೆಸಲಾಗುತ್ತಿದೆ.

