ಬಂಟ್ವಾಳ: ರಾಷ್ಟ್ರ ರಕ್ಷಕರೊಂದಿಗೆ ರಕ್ಷಾಬಂಧನ ಕಾರ್ಯಕ್ರಮವು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು.
ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹಾಗೂ ಯೋಧರು ಶ್ರೀರಾಮನ ಮೂರ್ತಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಗಡಿ ಪ್ರದೇಶಗಳಲ್ಲಿ ಅನೇಕ ದಶಕಗಳಿಂದ ದೇಶ ರಕ್ಷಣೆ ಮಾಡಿದಂತಹ ಯೋಧರನ್ನು ಸ್ಮರಿಸುವ ಹಾಗೂ ತಮ್ಮ ಬದುಕನ್ನು ದೇಶಕ್ಕಾಗಿ ಸಮರ್ಪಿಸಿ , ದೇಶ ಸೇವೆ ಮಾಡಿ ನಮ್ಮ ಬದುಕಿಗೊಂದು ದಿಕ್ಕು ತೋರಿಸಿದಂತಹ ಯೋಧರೊಂದಿಗೆ ನಾವು ರಕ್ಷಾ ಬಂಧನವನ್ನು ಆಚರಿಸುತ್ತಿರುವುದು ಶುಭ ಸಂದರ್ಭವಾಗಿದೆ ಎಂದರು .
ನಮ್ಮ ಯೋಧರು ಮಾನ , ಪ್ರಾಣ ರಕ್ಷಣೆ ಮಾಡುವ ಎಲ್ಲರಲ್ಲೂ ಸಹೋದರ ಸಹೋದರಿಯರ ಭಾತೃತ್ವವನ್ನು ಭಾವನೆಯ ಜೊತೆಗೆ ನಾವೆಲ್ಲ ಒಂದಾಗಿ ದೇಶದ ರಕ್ಷಣೆ ಮಾಡುತ್ತೇವೆ ಎನ್ನುವುದೇ ಈ ರಕ್ಷಾಬಂಧನದ ಉದ್ದೇಶವಾಗಿದೆ. ಧರ್ಮ , ಸಂಸ್ಕೃತಿ, ದೇಶವನ್ನು ಉಳಿಸುವ ರಕ್ಷಣಾ ಕಾರ್ಯ ಆಗಬೇಕು ಎಂದರು.
ದೇಶ ಕಾಯುವ ಯೋಧ ಹಾಗೂ ಅನ್ನಕ್ಕಾಗಿ ದುಡಿಯುವ ರೈತ ದೇಶದ ಆಸ್ತಿ. ಇವರು ಸುಖಿಯಾಗಿದ್ದರೆ . ದೇಶಕ್ಕೆ ಯಾವ ಆಪತ್ತು ಇಲ್ಲ ಎಂದ ಅವರು ವಿದ್ಯಾರ್ಥಿಗಳು ಕೂಡ ತಮ್ಮ ಕೆಲಸವನ್ನು ಶ್ರಮಪಟ್ಟು ಮಾಡಿದಾಗ ಯಶಸ್ಸು ಖಂಡಿತ ಸಿಗುತ್ತದೆ. ದೇಶದ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳುವುದರ ಜತೆಗೆ ಅವಕಾಶಗಳು ಬಂದಾಗ ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದ ಮೊದಲಿಗೆ ಯೋಧರನ್ನು ವಿದ್ಯಾರ್ಥಿಗಳು ಸೈನಿಕರ ವೇಷ ಭೂಷಣ ತೊಟ್ಟು , ವೇದ ಘೋಷ, ಪೂರ್ಣ ಕುಂಭ ಸ್ವಾಗತದೊಂದಿಗೆ ಕರೆತರಲಾಯಿತು. ಅತಿಥಿಗಳು ದೀಪ ಪ್ರಜ್ವಲನೆಗೈದು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು.
ಸಂಸ್ಥೆಯ ಹಿರಿಯರಾದ ಡಾ.ಪ್ರಭಾಕರ್ ಭಟ್ ಮತ್ತು ಡಾ ಕಮಲಾ ಪ್ರಭಾಕರ್ ಭಟ್ ದಂಪತಿ ಯೋಧರಿಗೆ ಶಾಲು ಹೊದಿಸಿ, ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಅಧ್ಯಾಪಕರು ಯೋಧರಿಗೆ ಆರತಿ ಬೆಳಗಿ, ತಿಲಕವನಿಟ್ಟು ಬಾಗಿನ ನೀಡಿದರೆ, ಯೋಧರಿಗೆ ವಿದ್ಯಾರ್ಥಿಗಳಿಂದ ರಕ್ಷಾಧಾರಣೆ ನಡೆಯಿತು. ವಿದ್ಯಾರ್ಥಿಗಳು ಪರಸ್ಪರ ರಕ್ಷಾಧಾರಣೆಯನ್ನು ಮಾಡಿಕೊಂಡರು.ವಿದ್ಯಾರ್ಥಿನಿಯಾದ ಭೂಮಿಕ ರಕ್ಷಾ ಗೀತೆಯನ್ನು ಹಾಡಿದಳು.
ನಿವೃತ್ತ ಯೋಧರಾದ ಮೋನಪ್ಪ ದಂಪತಿ ಮೊಗರ್ನಾಡು , ಕರಿಬಸಪ್ಪ ದಂಪತಿ ಕೈಕುಂಜೆ, ಎ ವಿ ವೆಂಕಪ್ಪ ಗೌಡ ದಂಪತಿ ಪುಣಚ , ಬಾಲಕೃಷ್ಣ ರೈ ದಂಪತಿ ಒಕ್ಕೆತ್ತೂರು, ಮೋಹನ ಗೌಡ ದಂಪತಿ ಮಿತ್ತೂರು, ಪೂನಾ ಎಚ್ ದಂಪತಿ ಕೊಡಾಜೆ, ರಮನಾಥ ಶೆಣೈ ದಂಪತಿ, ವೆಂಕಪ್ಪ ಪೂಜಾರಿ ನರಿಕೊಂಬು , ಕುಶಾಲಪ್ಪ ನಾಯ್ತೊಟ್ಟು, ದಾಸಪ್ಪ ನೆಕ್ಕಿಲಾರ್, ಧನಂಜಯ ಗೌಡ ನಾಯ್ತೊಟ್ಟು, ಜಯಕುಮಾರ್ ಕೆದಿಲ, ಡಿಕೇಶ್ ಪೂಜಾರಿ ಕಳ್ಳಿಗೆ ಮುಂಡಾಜೆ, ಬಾಲಕೃಷ್ಣ ಗೌಡ ಮಂಗಳಪದವು, ರಮೇಶ್ ರಾವ್ ಮಂಚಿ, ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ್ ಭಟ್, ಕಾರ್ಯ ನಿರ್ವಹಣಾಧಿಕಾರಿ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ, ಸಹ ಕಾರ್ಯ ನಿರ್ವಹಣಾಧಿಕಾರಿ ರವಿರಾಜ್ ಕಣಂತೂರು , ಸಹ ಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಭೂಮಿಕಾ ಸ್ವಾಗತಿಸಿ,ಗೌರಿ ನಂದಿನಿ ವಂದಿಸಿದರು.
