ಬಂಟ್ವಾಳ: ಕಳೆದ 23 ವರ್ಷಗಳಿಂದ ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಾವೀಣ್ಯತೆ ಪಡೆದು, ಜಾತಿ-ಮತ ಭೇದವಿಲ್ಲದೆ ಸಮಾಜದ ಎಲ್ಲಾ ವರ್ಗದ ಜನರಿಗೆ ಸೇವಾ ಭಾವನೆಯಿಂದ ಸಲಹೆ ಹಾಗೂ ಪರಿಹಾರ ನೀಡುತ್ತಿರುವ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಮಾರ್ಗದರ್ಶಕರಾದ ಅನಿಲ್ ಪಂಡಿತ್ ರವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸಿ ಇರುವುದನ್ನು ಖಂಡಿಸಿರುವ ಹಿಂದೂ ಜನ ಜಾಗೃತಿ ಸಮಿತಿಯು ದುಷ್ಕರ್ಮಿಗಳ ವಿರುದ್ದ ಸೂಕ್ತ ಕಾನೂನುಕ್ರಮ ಕೈಗೊಲ್ಳುವಂತೆ ಬಂಟ್ವಾಳ ನಗರ ಠಾಣೆಯಲ್ಲಿದೂರು ದಾಖಲಿಸಿದೆ.

ಕೆಲವು ಸಮಾಜಘಾತಕ ಶಕ್ತಿಗಳು, ಸಮಾಜದಲ್ಲಿ ಸಾಮರಸ್ಯವನ್ನು ಕದಡುವ ಹುನ್ನಾರದಿಂದ ಅವರ ಭಾವಚಿತ್ರವನ್ನು ಬಳಸಿ ಅವಹೇಳನಕಾರಿ ಮತ್ತು ನಿಂದನೀಯ ಸಂದೇಶಗಳನ್ನು ಹರಡಿದ್ದು, ಇದರಿಂದಾಗಿ ಅನಿಲ್ ಪಂಡಿತ್ ಅವರಿಗೆ ತೀವ್ರ ಮಾನಹಾನಿಯಾಗಿದ್ದಲ್ಲದೆ ಸಮಾಜದ ಧಾರ್ಮಿಕ ನಂಬಿಕೆಗಳಿಗೂ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದೇ ರೀತಿ ಸಂವಿಧಾನದ ಚೌಕಟ್ಟಿನಲ್ಲಿ ಆಯೋಜಿಸಿದ್ದ ಪವಿತ್ರ ‘ಗುರುಪೂರ್ಣಿಮಾ ಮಹೋತ್ಸವ’ವನ್ನು ದೇಶದ್ರೋಹಿ ಕಾರ್ಯಕ್ರಮವೆಂದು ಬಿಂಬಿಸಿ, ಆಯೋಜಕರ ವಿರುದ್ಧ ಎಸ್ ಡಿಪಿಐ ಸಂಘಟನೆಯು ದೂರು ದಾಖಲಿಸಿರುವುದನ್ನು ಸಮಿತಿಯು ತೀವ್ರವಾಗಿ ಖಂಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅನಿಲ್ ಪಂಡಿತ್ ಅವರ ವಿರುದ್ಧ ಅಪಪ್ರಚಾರ ನಡೆಸಿ ಕೋಮು ಸೌಹಾರ್ದತೆ ಕೆಡಿಸಲು ಯತ್ನಿಸಿವರನ್ನು ತಕ್ಷಣವೇ ಪತ್ತೆಹಚ್ಚಿ ಬಂಧಿಸಬೇಕು ಹಾಗೂ ಪವಿತ್ರ ಗುರುಪೂರ್ಣಿಮಾ ಮಹೋತ್ಸವದ ವಿರುದ್ಧ ಸುಳ್ಳು ದೂರು ನೀಡಿ ದ್ವೇಷ ಭಾಷಣಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.ಈ ಸಂದರ್ಭ ಯಕ್ಷಗಾನ ಕಲಾವಿದರಾದ ಸರಪಾಡಿ ಅಶೋಕ್ ಶೆಟ್ಟಿ, ಹಿಂದೂ ಮುಖಂಡರಾದ ಸುಕುಮಾರ್ ಶೆಟ್ಟಿ, ಶೇಖರ್ ಕೊಟ್ಟಾರಿ, ಜ್ಯೋತಿಷ್ಯರಾದ ಅನಿಲ್ ಪಂಡಿತ್, ಸುರೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.
ಕಾನೂನು ಕ್ರಮಕ್ಕೆಪ್ರಭು ಆಗ್ರಹ
ಜೋತಿಷ್ಯ ಅನಿಲ್ ಪಂಡಿತ್ ಗೆ ಸಾಮಾಜಿಕ ಜಾಲತಾಣ ಮೂಲಕ ಅವಹೇಳನ ಗೈದವರಿಗೆ ಕಾನೂನು ಕ್ರಮಕೈಗೊಳ್ಳುವಂತೆ ಒ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಈ ಮೂಲಕ ಒತ್ತಾಯಿಸಿದ್ದಾರೆ.
ಬ್ರಹ್ಮರಕೂಟ್ಲುನಲ್ಲಿರುವ ಜೋತಿಷ್ಯ ಅನಿಲ್ ಪಂಡಿತ್ ರವರು ಬಿ.ಸಿ.ರೋಡ್ ನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಜರಗಿದ ಗುರು ಪೂರ್ಣಿಮಾ ಕಾರ್ಯಕ್ರಮದ ಪ್ರಚಾರ ಬ್ಯಾನರ್ ಅಳವಡಿಸಿದ್ದಾರೆ ಎಂಬ ಕ್ಷುಲ್ಲಕ ಕಾರಣದಿಂದ ಅವರ ಸೇವಾ ಮನೋಭಾವನೆಯನ್ನು ಸಹಿಸದ ಕೆಲವೊಂದು ಕಿಡಿಗೇಡಿಗಳು ಜೋತಿಷ್ಯರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಅವಹೇಳನ ಪದಗಳ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಿ ತೇಜೋವಧೆಗೆ ಪ್ರಯತ್ನ ಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
