ಬಂಟ್ವಾಳ: ಮೂಡಬಿದಿರೆಯ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಆ.7-8 ರಂದು ನಡೆಯಲಿರುವ ‘ಆಳ್ವಾಸ್ ಪ್ರಗತಿ–2026’ ಬೃಹತ್ ಉದ್ಯೋಗ ಮೇಳದ ಪೂರ್ವಭಾವಿ ಮಾಹಿತಿ ಕಾರ್ಯಾಗಾರವು ಶುಕ್ರವಾರ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಶಿಕ್ಷಣದ ಜೊತೆಗೆ ಉದ್ಯೋಗವೂ ಯುವಜನರ ಬದುಕಿನಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಅವಕಾಶ ದೊರಕಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.


ಆಳ್ವಾಸ್ ಸಂಸ್ಥೆ ಕಳೆದ ಸುಮಾರು ಎರಡು ದಶಕಗಳಿಂದ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳವನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದು, ಸಾವಿರಾರು ಯುವಕರಿಗೆ ಉದ್ಯೋಗ ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಬಾರಿಯ ಉದ್ಯೋಗ ಮೇಳದಲ್ಲಿ ಈಗಾಗಲೇ 350ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ನೋಂದಾಯಿಸಿಕೊಂಡಿದ್ದು, ಎಸ್‌ಎಸ್‌ಎಲ್‌ಸಿ ಉತ್ತೀರ್ಣರಿಂದ ಹಿಡಿದು ಪದವೀಧರರವರೆಗಿನ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದು ಅವರು ತಿಳಿಸಿದರು.


ಬಹುತೇಕ ವಿದ್ಯಾರ್ಥಿಗಳಿಗೆ ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸುವ ಬಗ್ಗೆ ಸಮರ್ಪಕ ಅರಿವು ಇರುವುದಿಲ್ಲ. ಆ ಕೊರತೆಯನ್ನು ನೀಗಿಸಿ, ಉದ್ಯೋಗ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಪೂರ್ವಭಾವಿ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರು ಹೇಳಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ  ಟ್ರಸ್ಟಿ ವಿವೇಕ್ ಅಳ್ವ ಮಾತನಾಡಿ, ಆಳ್ವಾಸ್ ಸಂಸ್ಥೆ ಹಲವು ವರ್ಷಗಳಿಂದ ಉದ್ಯೋಗ ಮೇಳವನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದು, ಇದು ಯುವಜನರ ಭವಿಷ್ಯ ರೂಪಿಸುವ ಮಹತ್ವದ ಸಾಮಾಜಿಕ ಕಾರ್ಯವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಪೂರ್ವಸಿದ್ಧತೆಯೊಂದಿಗೆ ಆತ್ಮವಿಶ್ವಾಸದಿಂದ ಸಂದರ್ಶನಗಳನ್ನು ಎದುರಿಸಬೇಕು. ಸಂವಹನ ಕೌಶಲ್ಯ, ವ್ಯಕ್ತಿತ್ವ ವಿಕಸನ ಹಾಗೂ ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡರೆ ಉತ್ತಮ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.


ಕಾರ್ಯಾಗಾರದಲ್ಲಿ ರೆಸ್ಯೂಮ್ ಸಿದ್ಧಪಡಿಸುವ ವಿಧಾನ, ಸಂದರ್ಶನಕ್ಕೆ ಅಗತ್ಯ ದಾಖಲೆಗಳು, ವಿವಿಧ ಕಂಪನಿಗಳ ಮಾಹಿತಿ, ನೋಂದಣಿ ಪ್ರಕ್ರಿಯೆ ಹಾಗೂ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.ಕಾಲೇಜಿನ ಉಪನ್ಯಾಸಕ ಯೋಗೀಶ್ ಕೈರೋಡಿ ಸ್ವಾಗತಿಸಿದರು. ಬೂಡ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ ವಂದಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಶಿವಪ್ರಸಾದ್ ಕರೋಪಾಡಿ, ಹಿರಿಯ ಮುಖಂಡ ರಾಮದಾಸ್ ಬಂಟ್ವಾಳ, ಅಜಿತ್ ಶೆಟ್ಟಿ, ವೆಂಕಟೇಶ್ ಭಟ್, ಚಂದ್ರಶೇಖರ ಬಂಗೇರ, ಸುಲೋಚನಾ ಜಿ.ಕೆ. ಭಟ್, ದಿನೇಶ್ ದಂಬೆದಾರ್, ಶ್ಯಾಮಪ್ರಸಾದ್ ಪೂಂಜಾ, ಚಂದ್ರಶೇಖರ ಶೆಟ್ಟಿ, ನಂದರಾಮ ರೈ, ಗಣೇಶ್ ರೈ ಮಾಣಿ, ಕಾರ್ತಿಕ್ ಬಳ್ಳಾಲ್, ಸಂತೋಷ್ ರೈ, ರಶ್ಮಿತ್ ಶೆಟ್ಟಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *