ಬಂಟ್ವಾಳ: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್ ) ಸಂಯೋಜಿತ ಬಂಟ್ವಾಳ ತಾಲೂಕು ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ಬಂಟ್ವಾಳ ರೈಲ್ವೆ ನಿಲ್ದಾಣದ ಆಟೋ ರಿಕ್ಷಾ ಅಂಕಣದಲ್ಲಿ ಸಂಘದ ಸದಸ್ಯರಿಗೆ ಆಟೋ ರಿಕ್ಷಾಗಳನ್ನು ನಿಲುಗಡೆಗೊಳಿಸುವ ಮೂಲಕ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಿಗೆ ಮನವಿ ಸಲ್ಲಿಸಿದ

ಬಂಟ್ವಾಳ ರೈಲ್ವೆ ನಿಲ್ದಾಣವು ಈ ಭಾಗದ ಪ್ರಮುಖ ರೈಲ್ವೆ ನಿಲ್ದಾಣವಾಗಿದ್ದು, ಪ್ರತಿದಿನ ಸಾವಿರಾರು ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಿದ್ದಾರೆ. ಆದರೆ ಪ್ರಸ್ತುತ ಆಟೋ ರಿಕ್ಷಾ ಅಂಕಣದಲ್ಲಿ ಬಿಎಂಎಸ್ ಸಂಯೋಜಿತ ಬಂಟ್ವಾಳ ತಾಲೂಕು ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಸದಸ್ಯರಿಗೆ ಸೇವೆ ಸಲ್ಲಿಸಲು ಅವಕಾಶವಿಲ್ಲದಿರುವುದರಿಂದ ಚಾಲಕರ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆಯಲ್ಲದೆ, ಪ್ರಯಾಣಿಕರಿಗೂ ಸಮಯೋಚಿತ ಹಾಗೂ ಸುಲಭ ಆಟೋ ಸೇವೆ ದೊರೆಯುವಲ್ಲಿ ಅಡಚಣೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ರೈಲ್ವೆ ಇಲಾಖಾಧಿಕಾರೊಗಳೊಂದಿಗೆ ಸಮನ್ವಯ ಸಾಧಿಸಿ, ಬಂಟ್ವಾಳ ರೈಲ್ವೆ ನಿಲ್ದಾಣದ ಆಟೋ ರಿಕ್ಷಾ ಅಂಕಣದಲ್ಲಿ ಸಂಘದ ಸದಸ್ಯರಿಗೆ ಕಾನೂನುಬದ್ಧವಾಗಿ ಆಟೋ ರಿಕ್ಷಾಗಳನ್ನು ನಿಲುಗಡೆ ಮಾಡಿ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಅಗತ್ಯ ಅನುಮತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಅಧ್ಯಕ್ಷರು, ವಕೀಲರಾದ ಅನಿಲ್ ಕುಮಾರ್ ಯು. ಅವರ ನೇತೃತ್ವದ ಚಾಲಕ,ಮಾಲಕರ ನಿಯೋಗ ಸಂಸದರ ಕಚೇರಿಗೆ ಭೇಟಿ ನೀಡಿ, ಅವರ ಆಪ್ತ ಸಹಾಯಕರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಗೋಪಾಲ ಕೃಷ್ಣ, ಬಂಟ್ವಾಳ ತಾಲೂಕು ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷರಾದ *ವಸಂತಕುಮಾರ್ ಮಣಿಹಳ್ಳ,ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್,ಮೋಟಾರ್ ಮತ್ತು ಜನರಲ್ ಮಜ್ದೂರ್ ಸಂಘದ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಪೂಜಾರಿ ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
