ಹುಡುಗಿಯರಿಗೆ ಪೋಲಿ ಹುಡುಗನೇ ಇಷ್ಟವಾಗ್ತಾನೆ ಯಾಕೆ?
ಕೆಲವು ಹುಡುಗಿಯರಿಗೆ ಪೋಲಿ ಹುಡುಗನೇ ಯಾಕೆ ಇಷ್ಟವಾಗ್ತಾನೆ? ಡೀಸೆಂಟ್ ಹುಡುಗ ಅಂದ್ರೆ ಯಾಕೆ ಮುಖ ತಿರುಗಿಸ್ತಾರೆ? ಸಿಗರೇಟ್ ಸೇದುವ, ಸ್ವಲ್ಪ ಗಡ್ಡ ಬಿಟ್ಟು ಒರಟಾಗಿ ವರ್ತಿಸುವ ಸಮಾಜದಲ್ಲಿ ವಿರೋಧ ಕಟ್ಟಿಕೊಂಡು ಬೆಳೆಯುತ್ತಿರುವ ಹುಡುಗ ಯಾಕೆ ಇಷ್ಟವಾಗ್ತಾನೆ ಎಂಬುದು ಎಲ್ಲರಿಗೂ ಸಾಮಾನ್ಯವಾಗಿ ಕಾಡುವ ಪ್ರಶ್ನೆ.
ಕೆಲವು ಹುಡುಗರು ಹಾಗೆಯೇ…. ಸ್ವಲ್ಪ ರೆಬೆಲ್, ರಫ್ ಆಂಡ್ ಟಪ್ ವರ್ತನೆ. ಯಾವುದೋ ಬಾಲಿವುಡ್ನ ವಿಲನ್ ತರ ಸಿಗರೇಟ್ ಸೇದುತ್ತಾ ಪುಂಡರಾಗಿ ಇರುತ್ತಾರೆ. ಇಂಥಾ ಹುಡುಗನಿಗೆ ಊರಿನಲ್ಲಿ ಒಳ್ಳೆಯ ಹೆಸರಿಲ್ಲ. ಆತನಿಗೆ ಯಾವಾಗಲೂ ಊರಿನವರು ಬೈಯ್ಯುತ್ತಾ ಇರುತ್ತಾರೆ. ಎಲ್ಲರೊಂದಿಗೂ ವಿರೋಧ ಕಟ್ಟಿಕೊಳ್ಳುವುದು, ತರ್ಲೆ ಮಾಡುವುದು ಇತ್ಯಾದಿ ಮಾಡುವುದರಿಂದ ಆತನನ್ನು ಕಂಡರೆ ಯಾರಿಗೂ ಇಷ್ಟವಾಗುವುದಿಲ್ಲ.
ಆದರೂ ಇಂಥಾ ಹುಡುಗನನ್ನು ಇಷ್ಟ ಪಡುವವರು ಸಮಾಜದಲ್ಲಿರುತ್ತಾರೆ. ಮತ್ಯಾರೂ ಅಲ್ಲ. ಆತನ ಗುಣವನ್ನು ಕಂಡು ಆಕರ್ಷಣೆಗೊಳಗಾದ ಹುಡುಗಿ. ಆಕೆಗೆ ಆತ ಹುಚ್ಚುಹಿಡಿಸಿ ಬಿಟ್ಟಿದ್ದಾನೇನೋ ಎಂದು ನಾವು ಹೇಳಬಹುದು. ಅವರ ಸ್ವಭಾವದ ಬಗ್ಗೆ ಅವರು ಇಷ್ಟಪಡಲು ನೀಡುವ ಕಾರಣವೂ ಇಲ್ಲಿದೆ ನೋಡಿ.
`ಆಗಾಗ ಕೋಪಿಸ್ಕೊಳ್ಳುವುದು ಇತ್ಯಾದಿ ಮಾಡಿದರೂ ಆತನಲ್ಲಿರುವ ಒಳ್ಳೆಯ ಹೃದಯ ನನಗೆ ಅರ್ಥವಾಗಿದೆ. ಆದರೆ ಬೇರೆಯವರಿಗೆ ಅರ್ಥವಾಗಿಲ್ಲ ಅಷ್ಟೆ. ಎಲ್ಲವನ್ನೂ ನೇರವಾಗಿ ಹೇಳಿಬಿಡುವ ಗುಣ ಅವನದ್ದು. ಯಾವ ಕೆಲಸವನ್ನಾದರೂ ಸರಿ, ಮಾಡಿಯೇ ಮುಗಿಸುತ್ತಾನೆ. ನಾನಂತೂ ತುಂಬಾ ಮೃದು ಹುಡುಗಿ. ಯಾರಲ್ಲೂ ಜಗಳ ಕಾಯುವುದಿಲ್ಲ. ನನ್ನಷ್ಟಕ್ಕೇ ನಾನು ಇದ್ದುಬಿಡುತ್ತೇನೆ. ಯಾರಾದರೂ ಬೈದರೆ ಮನಸ್ಸಲ್ಲೇ ಅತ್ತು ಬಿಡುತ್ತೇನೆ. ನನ್ನ ಭಾವನೆಯನ್ನು ನಾನು ಆತನಲ್ಲಿ ಶೇರ್ ಮಾಡುತ್ತಾ ಇರುತ್ತೇನೆ. ಆತನಿಂದ ಸಿಗುವ ಸಾಂತ್ವಾನದ ನುಡಿಗಳು ಬೇರೆ ಯಾರಿಂದಲೂ ಸಿಗಲು ಸಾಧ್ಯವಿಲ್ಲ. ಆದರೆ ಇದ್ದಕ್ಕಿದ್ದಂತೆ ಕೋಪಿಸಿಕೊಳ್ಳುವ ಆತ ನನ್ನನ್ನು ಬೈಯ್ಯುತ್ತಾನೆ. ಕೊನೆಗೆ ಆತನೇ ಸರಿಯಾಗಿ ನನ್ನ ಬಳಿ ಸಾರಿ ಕೇಳುತ್ತಾನೆ. ಆತನಿಗೆ ಸಿಗರೇಟ್ ಸೇದುವ ಗುಣ ಒಂದು ಬಿಟ್ಟರೆ ಬೇರೆ ಯಾವ ದುರ್ಗುಣಗಳೂ ಇಲ್ಲ.(ಆತ ಕ್ವಾಟರ್ ಏರಿಸಿಸುವುದು, ಬೀರ್ ಕುಡಿಯುವುದು ಈಕೆಗೆ ಗೊತ್ತಿರುವುದಿಲ್ಲ ಪಾಪ) ಆತನ ಒರಟು ಸ್ವಭಾವವನ್ನು ಸರಿ ಮಾಡಿ ಆದರ್ಸ ಪುರುಷನನ್ನಾಗಿ ಮಾಡಿಬಿಡಬೇಕೆಂದು ಆಸೆ ಇದೆ. ನನಗೆ ಖಂಡಿತಾ ಆತ ಸರಿಯಾಗುತ್ತಾನೆ ಎಂಬ ಧೈರ್ಯವಿದೆ. ಮದುವೆಯಾದರೆ ನಾನು ಆತನನ್ನೇ ಎಂದು ನಿರ್ಧರಿಸಿಬಿಟ್ಟಿದ್ದೇನೆ…..’
ಕೆಲವು ಹುಡುಗಿಯರಲ್ಲಿ ಮಾತೃತ್ವ ಅಧಿಕವಾಗಿರುವುದರಿಂದ ಇಂಥಾ ವ್ಯಕ್ತಿಗಳು ನಿಮಗೆ ಇಷ್ಟವಾಗುವುದು ಸಹಜ. ಮನಶಾಸ್ತ್ರದ ಪ್ರಕಾರವೂ ಮಾತೃತ್ವ ಅಧಿಕ ಇರುವ ಹುಡುಗಿಯರಿಗೆ ಪೋಲಿಯಾಗಿ ಅಲೆದಾಡುವ ಸ್ವಲ್ಪ ರೆಬೆಲ್ ಹುಡುಗ ಇಷ್ಟವಾಗುತ್ತಾನೆ. ಇಂಥಾ ಹುಡುಗನನ್ನು ಸರಿದಾರಿಗೆ ತರಬೇಕೆಂಬ ಉದ್ದೇಶದಿಂದ ಹುಡುಗಿಯರು ಆತನನ್ನು ಪ್ರೀತಿಸುತ್ತಾರೆ.
ಹರೆಯದಲ್ಲಿ ಇದೇ ರೀತಿ ಹುಡುಗನನ್ನು ಸರಿದಾರಿಗೆ ತರಬೇಕೆಂದು ಪ್ರೀತಿಸಿದ ಅನೇಕ ಯುವತಿಯರು ಕೊನೆಗೆ ಆತನನ್ನು ಸರಿದಾರಿಗೆ ತರಲಾಗದೆ ಪ್ರೀತಿಯನ್ನೇ ಕಡಿದುಬಿಡುತ್ತಾರೆ. ಅಥವಾ ತಾನು ಹರೆಯದಲ್ಲಿ ಆಕರ್ಷಣೆಗೆ ಸಿಲುಕಿ ಪ್ರೀತಿ ಪ್ರೇಮ ಅಂತ ಹುಚ್ಚುಕುದುರೆ ಏರಿ ಲೈಫನ್ನು ಹಾಳು ಮಾಡುತ್ತಿದ್ದೇನೆ ಎಂದು ಭಾವಿಸಿ ಇನ್ನು ಈ ಹುಡುಗನನ್ನು ರಿಪೇರಿ ಮಾಡಲು ಸಾಧ್ಯವೇ ಇಲ್ಲ ಎಂದು ತಿಳಿದು ಆತನಿಗೆ ಕೈಕೊಟ್ಟು ಹಾಯಾಗಿ ಇದ್ದುಬಿಡಲು ನೋಡುತ್ತಾರೆ. ಹುಡುಗ ಒರಟಾಗಿದ್ದರೂ ಆತ ಭಾವಜೀವಿಯಾಗಿದ್ದರೆ ತನ್ನ ಹುಡುಗಿ ಕೈಕೊಟ್ಟಿದ್ದನ್ನೇ ದೊಡ್ಡ ಇಷ್ಯೂ ಮಾಡಿಕೊಂಡು ಆಕೆಯನ್ನು ಕಾಡಬಹುದು. ಆದರೆ ಇದರಿಂದ ಕೊನೆಗೆ ತೊಂದರೆ ಅನುಭವಿಸುವುದು ಮಾತ್ರ ಹುಡುಗಿಯರೇ.
ಆತನಿಗೆ ಸಿಗರೇಟ್ ಸೇದಬೇಡ, ಗುಟ್ಕಾ ಜಗಿಯಬೇಡ ಎಂದು ಹೇಳಿ ಹೇಳಿ ಸಾಕಾಗಿ ಹೋಗುತ್ತದೆ. ಆದರೆ ಆತ ಅದನ್ನು ಕದ್ದುಮುಚ್ಚಿ ಮಾಡಿಯೇ ಮಾಡುತ್ತಾನೆ. ಸಿಗರೇಟ್ ಕಮಟು ವಾಸನೆಯಿಂದಾಗಿ ತಾನು ಮನಸಾರೆ ಪ್ರೀತಿಸಿದ ಹುಡುಗನೇ ಕೊನೆ `ಎಲವೋ ಪೀಡೆ’ ಎನ್ನುವಂತಹಾ ಭಾವನೆ ಬರುತ್ತದೆ.
ಹುಡುಗಿಯರು ಯಾವುದೋ ಆದರ್ಶಕ್ಕೆ ಕಟ್ಟುಬಿದ್ದು ಈ ರೀತಿ ಪ್ರೀತಿಯ ಬಲೆಗೆ ಬೀಳುತ್ತಾರೆ. ಆರಂಭದಲ್ಲಿ ಹುಡುಗನೂ ಸಹ ಪ್ರೀತಿಯ ತೀವ್ರತೆಯಿಂದ ಹುಡುಗಿ ಹೇಳಿದಂತೆ ಕೇಳುತ್ತಾನೆ. ಇದೇ ಸಮಯದಲ್ಲಿ ಹುಡುಗಿ ಆತನನ್ನು ತನ್ನ ಕಂಟ್ರೋಲಿಗೆ ತೆಗೆದುಕೊಂಡು ಬಿಟ್ಟಿರುತ್ತಾಳೆ. ತಾನು ಆಕೆಯ ಕಂಟ್ರೋಲಿಗೆ ಬಿದ್ದಿದ್ದೇನೆಂದು ಗೊತ್ತಾದ ಹುಡುಗ ಆಕೆಯ ಸಂಬಂಧವನ್ನು ಕಡಿದುಕೊಳ್ಳುತ್ತಾನೆ. ಹಾಗೆಮದು ರೆಬೆಲ್ ಹುಡುಗ ಕೆಟ್ಟವನೆಂದು ಅರ್ಥವಲ್ಲ. ಆತ ಭವಿಷ್ಯದಲ್ಲಿ ಸಾಧು ಹುಡುಗನಾಗುವ ಸಾಧ್ಯತೆಯೂ ಇದೆ. ಹುಡುಗಿಯ ಬುದ್ಧಮಾತಿನಿಂದ ಒಳ್ಳೆಯವನಾದ ಉದಾಹರಣೆಯೂ ಇದೆ.
-ಚೇಕಿತಾನ