ಪಿಎಂ ಆವಾಸ್ ಯೋಜನೆ ಲಾಭ ಸಿಕ್ಕಿಲ್ಲ | ತೆರಿಗೆಗೆ ಲಗಾಮಿಲ್ಲ | ಹೆಚ್ಚಿದ ಗುಡ್ಡ ಕುಸಿತ ಭೀತಿ
ಗುರುಪುರ : ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ನ ೨೦೨೬-೨೭ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಜು. ೧ರಂದು ಪಂಚಾಯತ್‌ನ ಫಲ್ಗುಣಿ ಸಭಾಭವನದಲ್ಲಿ ನಡೆಯಿತು.ಉಳಾಯಿಬೆಟ್ಟು ಪಂಚಾಯತ್ ಆಡಳಿತಾಧಿಕಾರಿಯೂ ಆಗಿರುವ ಮಂಗಳೂರು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ಕೆ. ಅವರು ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಪಂಚಾಯತ್‌ನ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಕಮಲಾಕ್ಷ ಎನ್. ಅವರು ಗತ ಗ್ರಾಮಸಭೆಯ ಅನುಪಾಲನಾ ವರದಿ ಮಂಡಿಸಿದರು.

ಗ್ರಾಮಸ್ಥ ರಾಜೀವ ಶೆಟ್ಟಿ ಸಲ್ಲಾಜೆ ಮಾತನಾಡಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಉಳಾಯಿಬೆಟ್ಟು ಪಂಚಾಯತ್‌ಗೆ ಒಂದೇ ಒಂದು ಮನೆ ಸಿಕ್ಕಿಲ್ಲ. ಹಾಗಾದರೆ ಕೇಂದ್ರ ಸುಳ್ಳು ಜಾಹೀರಾತು ನೀಡುತ್ತಿದೆಯೇ ? ಅರ್ಜಿ ನೀಡಿದವರ(ಬಡವರ) ಗತಿ ಏನು ? ಕಳೆದ ಒಂದೆರಡು ವರ್ಷದಿಂದ ಆಸ್ತಿ ತೆರಿಗೆ ಪರಿಷ್ಕರಣೆಯಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಮನೆಮಂದಿಗೆ ತೆರಿಗೆ ಹೊರೆ ತಪ್ಪಿಲ್ಲ ಎಂದು ದೂರಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅನಿತಾ ಕ್ಯಾಥರಿನ್ ಉತ್ತರಿಸುತ್ತ, ಜಾಗದ ಮೌಲ್ಯವಾಧರಿಸಿ ತೆರಿಗೆ ಹೆಚ್ಚುತ್ತದೆ. ಪ್ರಧಾನಿ ಆವಾಸ್ ಯೋಜನೆಯಡಿ ಉಳಾಯಿಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲೂ ಮನೆ ಕಲ್ಪಿಸುವ ಪ್ರಯತ್ನ ನಡೆಸಲಾಗುವುದು. ತೆರಿಗೆ ನಿರ್ಣಯ ವಿಷಯದಲ್ಲಿ ಪಂಚಾಯತ್‌ನಲ್ಲೇ ತೀರ್ಮಾನಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಭರವಸೆ ನೀಡಿದರು.
ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷ ಹರಿಕೇಶ್ ಶೆಟ್ಟಿ ಮಾತನಾಡಿ, ಕುಸಿಯುವ ಹಂತ ತಲುಪಿರುವ ಆಚೆಬೈಲು ಪ್ರದೇಶದ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ಭೂಕುಸಿತ ಉಂಟಾಗಿರುವ ಕೈಗುರಿಯಲ್ಲಿ ಇನ್ನೂ ರಸ್ತೆ ದುರಸ್ತಿ ನಡೆದಿಲ್ಲ. ಅಲ್ಲಿಗೆ ಮಂಜೂರಾಗಿರುವ ೫೫ ಲಕ್ಷ ರೂ. ಅನುದಾನ ನಿರ್ಮಿತಿ ಕೇಂದ್ರಕ್ಕೆ ಹೋಗಿದೆ. ಡೀಸಿಯವರೊಂದಿಗೆ ಚರ್ಚಿಸಿ, ಆ ಅನುದಾನದಲ್ಲಿ ಕೈಗುರಿ ರಸ್ತೆ ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿದರು.
ಕೆಲವೆಡೆ ದಿನದಲ್ಲೂ ದಾರಿದೀಪಗಳು ಉರಿಯುತ್ತವೆ. ರಾತ್ರಿ ವೇಳೆ ಪೊಲೀಸ್ ಬೀಟ್ ಇಲ್ಲದ ಇಲ್ಲಿನ ನಾಗರಿಕರಲ್ಲಿ ಭೀತಿ ವಾತಾವರಣ ಹೆಚ್ಚಿದೆ. ರಸ್ತೆಗೆ ಅಗತ್ಯ ಸೀಸಿ ಕ್ಯಾಮರಾ ಅಳವಡಿಸಿಲ್ಲ. ಕಸ ವಿಲೇವಾರಿಯತ್ತ ಸೂಕ್ತ ಗಮನಹರಿಸಬೇಕು. ಮಂಗಳೂರು ನಗರ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಉಳಾಯಿಬೆಟ್ಟು ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆ ಬದಿಯಲ್ಲಿ ಶಾಶ್ವತ ಚರಂಡಿ ನಿರ್ಮಿಸಬೇಕು. ಹೆದ್ದಾರಿಯಿಂದ ಉಳಾಯಿಬೆಟ್ಟು ಸಂಪರ್ಕಕ್ಕೆ ಅಂಡರ್‌ಪಾಸ್ ಕಲ್ಪಿಸಲು ಎನ್‌ಎಚ್‌ನೊಂದಿಗೆ ಮಾತುಕತೆ ನಡೆಸಬೇಕು ಎಂಬಿತ್ಯಾದಿ ಬೇಡಿಕೆಗಳು ಗ್ರಾಮಸ್ಥರಿಂದ ಕೇಳಿ ಬಂತು.
ಗ್ರಾಮಸ್ಥರ ಬೇಡಿಕೆಗಳ ಮೇಲೆ ನಿರ್ಣಯ ಬರೆಸಿಕೊಂಡ ನೋಡೆಲ್ ಅಧಿಕಾರಿ ಪ್ರವೀಣ್ ಅವರು, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಬೆಳೆ ವಿಮೆ, ಬೆಳೆ ಸಮೀಕ್ಷೆ ಮತ್ತಿತರ ಮಹತ್ವ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮಕ್ಕಳು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಮಂಗಳೂರು(ಗ್ರಾಮಾಂತರ) ಮೇಲ್ವಿಚಾರಕಿ ಸೀತಾ, ಜಿಪಂ ಇಂಜಿನಿಯರ್ ಸುಜಿತ್, ಉಳಾಯಿಬೆಟ್ಟು ಸರ್ಕಾರಿ ಹಿ. ಪ್ರಾ. ಶಾಲಾ ಶಿಕ್ಷಕ ಚೇತನ್ ಕೊಪ್ಪ, ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರಿ ವೈದ್ಯಾಧಿಕಾರಿ ಡಾ. ಚೈತನ್ಯಾ, ಪಂಚಾಯತ್ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.
