ಗುರುಪುರ : ಮಂಗಳೂರು ತಾಲೂಕು ಮರಾಠಿ ಸಮಾಜ ಸೇವಾ ಸಂಘ(ರಿ) ಗಂಜಿಮಠ ಇದರ ೬ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಶಾಸಕರ ಅನುದಾನ ಮತ್ತು ಕರಾವಳಿ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ನಿರ್ಮಾಣಗೊಂಡ ಸಂಘದ ವಿಸ್ತರಿತ ಕಟ್ಟಡದ ಉದ್ಘಾಟನೆ, ಮಹಾಸಭೆ, ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮ ಜೂ. ೧೪ರಂದು ಸಂಘದ ಗಂಜಿಮಠ ಸಭಾಭವನದಲ್ಲಿ ನಡೆಯಿತು.

ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮರಾಠಿ ಸಮಾಜದ ಮಕ್ಕಳನ್ನು ಸನ್ಮಾನಿಸಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಮರಾಠಿ ಸಮಾಜದ ಜನರಲ್ಲಿ ಸದಾ ಮುಗ್ಧತೆ ಕಂಡು ಬರುತ್ತದೆ. ಸುಸಂಸ್ಕೃತ ಸಮಾಜ ಕಟ್ಟುವ ಜವಾಬ್ದಾರಿ ನಮ್ಮೆಲ್ಲರಲ್ಲಿ ಇದೆ. ಸ್ಪಷ್ಟ ಗುರಿಯೊಂದಿಗೆ ಮಕ್ಕಳಲ್ಲಿ ಛಲ ಮತ್ತು ಹಟ ಇರಬೇಕು. ಹಾಗಿದ್ದಾಗ ಮಾತ್ರ ಸಾಧನೆಯ ಯಶಸ್ಸು ನಮ್ಮದಾಗುತ್ತದೆ ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಎ. ಗಫೂರ್ ಮಾತನಾಡಿ, ಮರಾಠಿ ಸಮಾಜ ಸಾಂಸ್ಕೃತಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಒಂದು ಸಮುದಾಯದ ಅಭಿವೃದ್ಧಿಗೆ ಹಣ ನೀಡುತ್ತಿದ್ದೇವೆ. ಅದು ನಿಮ್ಮದೇ ಹಣವಾಗಿದ್ದು, ಸಮಾಜಮುಖಿ ಕೆಲಸಗಳ ಮೂಲಕ ಸದ್ಬಳಕೆಯಾಗುತ್ತಿದೆ. ಸರ್ಕಾರಗಳು ಎಲ್ಲ ಸಮುದಾಯಗಳ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಬೇಕು. ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಸಲ್ಲದು ಎಂದರು.

ಸಿAಡಿಕೇಟ್-ಕೆನರಾ ಬ್ಯಾಂಕ್‌ನ ನಿವೃತ್ತ ಮಹಾಪ್ರಬಂಧಕ ರಾಮ ನಾಯ್ಕ್ ಮಾತನಾಡಿ, ನಮ್ಮ ಸಮಾಜದಲ್ಲಿ ಉದ್ಯಮಿಶೀಲತೆ ಇನ್ನೂ ಬೆಳೆದಿಲ್ಲ. ಉದ್ಯಮಿಗಳ ಸಂಖ್ಯೆ ವಿರಳವಾಗಿದೆ. ಸ್ವಂತ ಉದ್ಯಮಕ್ಕೆ ನಮ್ಮ ಮಕ್ಕಳು ಪ್ರಯತ್ನಿಸಬೇಕು. ಸಂಘದಲ್ಲಿ ಗ್ರಾಮೀಣ ಮಕ್ಕಳಿಗೆ ಉದ್ಯಮಶೀಲತೆ ಬಗ್ಗೆ ಕಾರ್ಯಗಾರ ನಡೆಸುವ ಅಗತ್ಯವಿದೆ ಎಂದರು.

ಸAಘದ ಅಧ್ಯಕ್ಷ ಗುಣಪಾಲ ನಾಯ್ಕ್ ಅವರು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ. ಭರತ್ ಶೆಟ್ಟಿ, ಎಂ. ಎ. ಗಫೂರ್, ಸಿಂಡಿಕೇಟ್-ಕೆನರಾ ಬ್ಯಾಂಕ್‌ನ ನಿವೃತ್ತ ಹಿರಿಯ ಅಧಿಕಾರಿ ರಾಮ ನಾಯ್ಕ್ ಹಾಗೂ ಮರಾಠಿ ಸಮಾಜದ ಹಲವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಂಘದ ಗೌರವಾಧ್ಯಕ್ಷ ವಿ. ಪಿ. ನಾಯ್ಕ್ ಸ್ವಾಗತಿಸಿದರು. ಸಂಚಾಲಕ ಶೇಖರ ಕಡ್ತಲ ಅವರು ಪ್ರಸ್ತಾವಿಸಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಪ್ರದೀಪ್ ಡಿ’ಸೋಜ, ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ, ತಾ.ಪಂ ಮಾಜಿ ಸದಸ್ಯ ಸುನಿಲ್ ಗಂಜಿಮಠ, ಮಂಜೇಶ್ವರ ಮಂಜುನಾಥ ಕಾಮತ್, ಶಾರದಾ ಡಿ. ನಾಯ್ಕ್, ತಾಲೂಕು ಮರಾಠಿ ಸಂಘದ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಮರಾಠಿ ಸಂಘಗಳ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಹಿರಿಯರು ಇದ್ದರು. ಶಿಕ್ಷಕಿ ನಿವೇದಿತಾ ನಿರೂಪಿಸಿದರು. ಸಂಘದ ಉಪಾಧ್ಯಕ್ಷೆ ಪದ್ಮಾ ಎಸ್. ವಂದಿಸಿದರು.

By Suddi9

Leave a Reply

Your email address will not be published. Required fields are marked *