ಕೈಕಂಬ:ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ 169 ರ ಗಂಜಿಮಠ ಜಂಕ್ಷನ್‍ಗೆ ಹತ್ತಿರದಲ್ಲಿ ಸುಮಾರು 400 ವರ್ಷಗಳಿಗೂ ಹಿಂದಿನ ಇತಿಹಾಸವುಳ್ಳ ಶಿವ ಕ್ಷೇತ್ರವೊಂದರ ಪುನರ್ ನಿರ್ಮಾಣಕ್ಕಾಗಿ, ದೈವಜ್ಞರು ತಾಂಬೂಲ ಪ್ರಶ್ನೆ ಚಿಂತನೆಯಲ್ಲಿ ಸೂಚಿಸಿದಂತೆ ಹಿನ್ನೆಲೆಯಲ್ಲಿ ಮಾ. 14ರಂದು ಸಾನಿಧ್ಯದಲ್ಲಿ 108 ಕಾಯಿ ಗಣಯಾಗ ನಡೆಸಿ, 48 ದಿನಗಳವರೆಗೆ ನಿರಂತರ ನಡೆದ ಸಂಧ್ಯಾ ಭಜನೆಯ ಮಂಗಳದ ಅಂಗವಾಗಿ ಕ್ಷೇತ್ರದ ತಂತ್ರಿಗಳಾದ ಬಡಗ ಎಡಪದವು ಮುರಳೀಧರ ತಂತ್ರಿಗಳ ನೇತೃತ್ವದಲ್ಲಿ, ವಾಮಂಜೂರು ಹರಿ ಉಪಾಧ್ಯಾಯ ಮತ್ತು ಪುರೋಹಿತ ಬಳಗದವರ ಪೌರೋಹಿತ್ಯದಲ್ಲಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ದಂಪತಿಗಳ ಯಾಗ ದೀಕ್ಷೆಯೊಂದಿಗೆ ರುದ್ರ ಯಾಗ ಬುಧವಾರ ನಡೆಯಿತು.


ವಿವಿಧ ಧಾರ್ಮಿಕ ವಿಧಿಗಳಿಂದ ಬೆಳಿಗ್ಗೆ ಪ್ರಾರಂಭವಾದ ರುದ್ರಯಾಗ 11:30ಕ್ಕೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು.ಪ್ರಸಾದ ವಿತರಣೆ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.ಅಪರಾಹ್ನ 2 ಗಂಟೆಯಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯೊಂದಿಗೆ ಯಕ್ಷ ಗಾನ ಹಾಸ್ಯ ವೈಭವ ಮತ್ತು ಸಾಯಂಕಾಲ 5:30ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.


ಪೊಳಲಿ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಮಾಜಿ ಸಚಿವ, ಶಾಸಕ ಸುನೀಲ್ ಕುಮಾರ್, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಗುರುಪುರ ಗೋಳಿದಡಿ ಗುತ್ತಿನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಕೃಷ್ಣ ಅಮೀನ್, ಗಂಜಿಮಠ ಪಂಚಾಯತ್ ಅಧ್ಯಕ್ಷೆ ಮಾಲತಿ, ಪಂಚಾಯತ್ ಸದಸ್ಯರುಗಳು, ವಿವಿಧ ಕ್ಷೇತ್ರಗಳ ಮುಖಂಡರುಗಳು ಹಾಗೂ ಸ್ಥಳೀಯ ಗಣ್ಯರು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಇಲ್ಲಿ ಅನಾದಿ ಕಾಲದಲ್ಲಿ ಶಿವ ದೇವಾಲಯವೊಂದಿತ್ತು. ಇದರ ಜೀರ್ಣೋದ್ಧಾರ ಊರಿಗೆ ಸುಭಿಕ್ಷೆ ತರಲಿದೆ. ಆ ಕಾರ್ಯಕ್ಕೆ ಪೂರ್ವದಲ್ಲಿ 48 ದಿನಗಳ ಸಂಧ್ಯಾ ಭಜನೆ ನಡೆಸಿ ರುದ್ರಯಾಗ ನಡೆಸಬೇಕು ಎಂದು ಸೂಚನೆ ಕಂಡು ಬಂದ ಹಿನ್ನಲೆಯಲ್ಲಿ ಬುಧವಾರ ರುದ್ರಯಾಗದೊಂದಿಗೆ 48 ದಿನಗಳ ಸಂಧ್ಯಾ ಭಜನೆ ಮಂಗಳವಾಗಿದೆ.

ಮುಂದಿನ 8ನೇ ತಾರೀಖಿನಿಂದ ತಾಂಬೂಲ ಪ್ರಶ್ನೆ ಚಿಂತನೆ ನಡೆಯಲಿದ್ದು, ಸಾನಿಧ್ಯದ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ತದನಂತರ ಸಾನಿಧ್ಯ ಜೀರ್ಣೋದ್ಧಾರದ ಬಗ್ಗೆ ಸಮಾಲೋಚನೆ ನಡೆಯಲಿದೆ. ಸುತ್ತಲ 18 ಶಿವ ದೇವಾಲಯಗಳಿಗೆ ಪ್ರಮುಖವಾಗಿದ್ದ ಇಲ್ಲಿ ರಕ್ತೇಶ್ವರಿ ಮತ್ತು ಗುಳಿಗ ಪರಿವಾರ ದೈವಗಳು ಹಾಗೂ ಮಹಮ್ಮಾಯಿ ದೇವಿ ಇರುವುದು ಗೋಚರಿಸಿದೆ.

By suddi9

Leave a Reply

Your email address will not be published. Required fields are marked *