ಗಂಜಿಮಠ ನಶಿಸಿಹೋದ ಶಿವ ಸಾನಿಧ್ಯ ವೃದ್ಧಿಗಾಗಿ 48 ದಿನಗಳವರೆಗೆ ನಿರಂತರ ಸಂಧ್ಯಾಭಜನೆ: ಏ.30 ರಂದು ರುದ್ರಾಯಾಗ
ಗಂಜಿಮಠ: ಮಂಗಳೂರು ವ್ಯಾಪ್ತಿಯ ಗಂಜಿಮಠ ಮಾರುಕಟ್ಟೆ ಸಮೀಪ ನಶಿಸಿ ಹೋದ ಪುರಾತನ ಗಂಜಿಮಠ ಶಿವಾಲಯ ಪುನರುತ್ಥಾನ ಹಿನ್ನೆಲೆ ಪೂರ್ವಭಾವಿಯಾಗಿ 48 ದಿನಗಳ ನಿರಂತರ ಭಜನೆ ನಡೆಯುತ್ತಿದ್ದು, ಭಜನೆಯ ಅಂತಿಮ ದಿನವಾದ ಎಪ್ರಿಲದ 30 ರಂದು ರುದ್ರಯಾಗ ಬಂಟ್ವಾಳ ಶಾಸಕ, ಗಂಜಿಮಠ ಸಮೀಪದ ಒಡ್ಡೂರಿನ ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ನೇತೃತ್ವದಲ್ಲಿ ನಡೆಯಲಿದೆ.ದೇವಸ್ಥಾನದ ಕುರುಹುಗಳು ಕಂಡು ಬಂದ ಸ್ಥಳದಲ್ಲಿ ಪ್ರಸಿದ್ಧ ಜ್ಯೋತಿಷಿ ಸಿ.ವಿ. ಪೊದುವಾಳ್ ಅವರಿಂದ ಇತ್ತೀಚೆಗೆ ತಾಂಬೂಲ ಪ್ರಶ್ನಾ ಚಿಂತನೆ ನಡೆಸಲಾಗಿತ್ತು.

ಈ ವೇಳೆ, ಇದೊಂದು ಶೈವಾರದಕಾರದ ಸನ್ಯಾಸಿಗಳು ಪೂಜಿಸುತ್ತಿದ್ದ ದೇವಸ್ಥಾನವಾಗಿದ್ದು, ಇಲ್ಲಿ ಶಿವ, ದೇವಿ, ಗಣಪತಿ ಇಷ್ಟ ಸಾನಿಧ್ಯಗಳಿದ್ದವು ಎನ್ನವುದು ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಿದೆ. ಅಲ್ಲದೆ ಈ ಸ್ಥಳ ಪೂರ್ವ ಕಾಲದಲ್ಲಿ ಶೈವಾರಕರಾದ ಸನ್ಯಾಸಿಗಳಿಂದ ಪೂಜಿಸಲ್ಪಡುತ್ತಿದ್ದ ಶಿವ, ದೇವಿ, ಗಣಪತಿ ಇಷ್ಟ ಸಾನಿಧ್ಯಗಳಿದ್ದವು. ಆರಾಧನೆ ಮಾಡುವ ಸ್ಥಳ ಹಾಗೂ ಹೊರಗಿನಿಂದ ನಾಗ, ರಕ್ತೇಶ್ವರಿ ಗುಳಿಗ ಸಾನಿಧ್ಯಗಳಿದ್ದು ಇದರ ಅರಾಧನೆಯೂ ನಡೆಯುತ್ತಿತ್ತು. ಮುಂದಿನ ವಿಚಾರ ವಿಮರ್ಷೆ ನಡೆಸಲು ಅಷ್ಠಮಂಗಳ ಪ್ರಶ್ನೆ ಇಡಬೇಕು ಎನ್ನುವುದು ಕಂಡು ಬಂದಿತ್ತು.

ಸುಮಾರು 400 ವರ್ಷಗಳ ಮುಂಚೆ ಶತ್ರುಗಳಿಂದ ಹಾಗೂ ಅಗ್ನಿಯಿಂದ ಈ ದೇಗುಲ ನಾಶವಾಗಿತ್ತು. ದೇವಸ್ಥಾನದ ಹೆಸರಲ್ಲಿ ಸಮಿತಿ ರಚನೆ ಮಾಡಿ, ಕ್ಷೇತ್ರ ಇದ್ದ ಜಾಗದಲ್ಲಿ ದೇವರಿಗೆ ದೀಪ ಇಡಬೇಕು. ಮೊದಲಾಗಿ ೧೦೮ ನಾರಿಕೇಳ ಗಣಹೋಮ ಇಟ್ಟು ೪೮ ದಿನಗಳ ಕಾಲ ನಿರಂತರ ಭಜನೆ ನಡೆಸಬೇಕು. ಅಂತಿಮವಾಗಿ ರುದ್ರ ಹೋಮ ನಡೆಸಿ ದೇವಸ್ಥಾನಕ್ಕಾಗಿ ಅಷ್ಠಮಂಗಳ ಪ್ರಶ್ನೆ ನಡೆಸಿ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪನೆ ನಡೆಸಬೇಕು ಎಂದು ಸಿ.ವಿ. ಪೊದುವಾಳರ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿತ್ತು.
ಈ ಹಿನ್ನೆಲೆಯಲ್ಲಿ ಮಾರ್ಚ್ 14 ರಿಂದಲೇ ಇಲ್ಲಿ ನಿರಂತರ ಭಜನೆ ನಡೆಯುತ್ತಿದ್ದು, ಪ್ರತೀನ ಮೂರರಿಂದ ಆರು ಭಜನಾ ತಂಡಗಳು ಸಾಮೂಹಿಕ ಭಜನೆ ನಡೆಸುತ್ತಿದ್ದು, ಹೊಸ ದಾಖಲೆ ನಿರ್ಮಿಸಿದೆ.
ಇದೊಂದು ಭೋಜನ ಪೂಜೆ ನಡೆಯುತ್ತಿದ್ದ ಎರಡು ಸಾನಿಧ್ಯಗಳಿದ್ದ ಅತ್ಯಂತ ಪುರಾತನ ಆರಾಧನಾ ಕೇಂದ್ರಗಳಾಗಿತ್ತು ಎಂದು ಚಿಂತನೆಯಲ್ಲಿ ಕಂಡುಬಂದ ಸೂಚಕವಾಗಿ ಭಜನೆಯಲ್ಲಿ ಪಾಲ್ಗೊಂಡ ಭಕ್ತರಿಂದ ಗಂಜಿ ಪ್ರಸಾದವಾಗಿ ನೀಡಲಾಗುತ್ತಿದೆ.
ಅಲ್ಲದೆ ಇಲ್ಲಿ ಸಾನಿಧ್ಯದಲ್ಲಿ ರಕ್ತೇಶ್ವರಿ ಹಾಗೂ ಗುಳಿಗನ ಸಾನಿಧ್ಯವಿದ್ದು, ದೇವಸ್ಥಾನ ಜೊತೆ ಈ ಪರಿವಾರ ದೈವಗಳಿಗೂ ಗುಡಿಗಳು ನಿರ್ಮಾಣ ವಾಗಲಿದೆ.
ಗಂಜಿಮಠ ಮಠಕ್ಕೆ ಸಂಬಂಧಿಸುದ ಸಾನಿಧ್ಯವಾಗಿದ್ದು, ಸುಮಾರು ೪೦೦ ವರ್ಷಗಳ ಮುಂಚೆ ಪರಕೀಯರು ದಾಳಿ ನಡೆಸಿ ಬೆಂಕಿಯಿಂದ ನಾಶಪಡಿಸಿ ಇಲ್ಲಿನ ಸಂಪತ್ತನ್ನು ದೋಚಿದ್ದಾರೆ. ದೇಗುಲಕ್ಕೆ ಸಂಬಧಿಸಿದ ವಸ್ತುಗಳನ್ನು ಇಲ್ಲಿರುವ ಕೆರೆಗೆ ಹಾಕಿರುವ ಬಗ್ಗೆ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಿತ್ತು.
ಪುರಾತನ ಕಾಲದಲ್ಲಿ ಗಂಜಿಮಠ ದೇವಸ್ಥಾನ ಅತ್ಯಂತ ಪ್ರಸಿದ್ಧ ದೇಗುಲವಾಗಿ ಗುರುತಿಸಲ್ಪಟ್ಟಿದ್ದು, ನೈವೇದ್ಯವಾಗಿ ಭಕ್ತರಿಗೆ ಗಂಜಿ ನೀಡಲಾಗುತ್ತಿತ್ತು. ಗಂಜಿ ದೇವಿಗೆ ಸಂಬಂಧಿಸಿದ ಪ್ರಸಾದವಾಗಿದೆ. ಮಠದವರಿಗೆ ಸಂಬಂಧಪಟ್ಟಿರುವುದರಿಂದ ಮಹಮ್ಮಾಯಿ ದೇವಿಯ ಆರಾಧನೆಯೂ ಆಗಿರಬಹುದು. ಅಥವಾ ಚೌಡೇಶ್ವರಿ ಅಥವಾ ವಿರಕ್ತ ಪರಂಪರೆಯ ಕೊಟ್ಟೂರಮ್ಮ ದೇವಿಯೂ ಆಗಿರುವ ಸಾಧ್ಯತೆ ಇದೆ. ಮೂಲತಃ ಇಲ್ಲಿ ಯಾವ ದೇವಿಯ ಆರಾಧನೆ ನಡೆಯುತ್ತಿತ್ತು ಎನ್ನುವುದನ್ನು ಅಷ್ಠಮಂಗಲ ಪ್ರಶ್ನೆಯಲ್ಲಿಯೇ ಕಂಡುಕೊಳ್ಳಬೇಕಾಗಿದೆ ಎಂದು ಪೊದುವಾಳ್ ತಿಳಿಸಿದ್ದರು.
ಕೆರೆ, ತೀರ್ಥಬಾವಿ
ಗಂಜಿಮಠದಲ್ಲಿ ಕೆರೆ ಹಾಗೂ ಪಾಳುಬಿದ್ದ ಬಾವಿ ಇದೆ. ಇದೇ ಜಾಗದಲ್ಲಿ ಶಿವನ ದೇಗುಲವಿದ್ದ ಸಾಧ್ಯತೆ ಇದ್ದು ಪೊದೆಗಳಿಂದ ಮುಚ್ಚಿಹೋಗಿರುವ ಸಾಧ್ಯತೆ ಇದೆ.
ಗಿರೀಶ್ ಮಳಲಿ