ಶಾಲೆಗೆ ಮರುಜೀವ ನೀಡಿದ ದೈಹಿಕ ಶಿಕ್ಷಕ ಗೋಪಾಲ್
ತಿರುವೈಲು ಸರ್ಕಾರಿ ಶಾಲಾ ಶತಮಾನೋತ್ಸವಕ್ಕೆ ಸಕಲ ಸಿದ್ಧತೆ
ಕೈಕಂಬ : ವಾಮಂಜೂರು ತಿರುವೈಲಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ಈಗ ೧೦೦ರ ಸಂಭ್ರಮ. ಶಾಲಾಭಿವೃದ್ಧಿಯೊಂದಿಗೆ ಮಕ್ಕಳ ಶಿಕ್ಷಣದ ಬಗ್ಗೆ ಅತೀವ ಕಾಳಜಿ ವಹಿಸಿ, ಕಳೆದ ೩೨ ವರ್ಷಗಳಿಂದ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಗೋಪಾಲ ಯು. ಅವರು ಶಾಲಾ ಶತಮಾನೋತ್ಸವ ಸಂಭ್ರಮದ ಹಿಂದಿನ ಶಕ್ತಿಯಾಗಿ ಮೂಡಿ ಬಂದಿದ್ದಾರೆ.

ಗೋಪಾಲ ಸರ್ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿಯಾದ ಅವರ ದೈಹಿಕ ಶಿಕ್ಷಣದಡಿ ಪಳಗಿದ ಪುಟ್ಟ ಮಕ್ಕಳು ಶಿಸ್ತಿಗೆ ಹೆಸರಾಗಿದ್ದಾರೆ ಎಂಬುದು ಶಾಲೆಗೊಮ್ಮೆ ಭೇಟಿ ಕೊಟ್ಟರೆ ತಿಳಿಯುವುದು. ಶಾಲೆಯಲ್ಲಿ ಮುಖ್ಯ ಶಿಕ್ಷಕರಿಲ್ಲದ ಅವಧಿಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಶಿಕ್ಷಕ ವೃಂದದಿAದ ಅಪಾರ ಪ್ರೀತಿ ಗಳಿಸಿರುವ ಅವರು ಶಾಲೆಯಲ್ಲಿ ದಿನದ ೧೨ ತಾಸು ಕೆಲಸ ಮಾಡುತ್ತಿದ್ದಾರೆ. ರಜಾ ದಿನಗಳಲ್ಲಿ ಶಾಲೆಗೆ ಬಂದು ಶಾಲಾ ಉದ್ಯಾನದ ಗಿಡಗಳಿಗೆ ನೀರೆರೆಯುತ್ತ ಕಾಲ ಕಳೆಯುತ್ತಾರೆ. ಬರುವ ಸಂಬಳದಲ್ಲಿ ಒಂದಷ್ಟು ಮೊತ್ತ ಶಾಲಾಭಿವೃದ್ಧಿಗೆ ಮುಡಿಪಾಡಿ ಇಟ್ಟಿರುವ ಸದಹೃದಯಿ ಶಿಕ್ಷಕ ಇವರು. ಮಕ್ಕಳಿರಲಿ, ಹಿರಿಯರಿರಲಿ ಅತ್ಯಂತ ಮುಗ್ಧತೆಯಿಂದ ಬರಮಾಡಿಕೊಂಡು ಮಾತನಾಡುವ ಇವರು, ಮಾತಿನ ಮಧ್ಯೆ ಪ್ರತಿ ಬಾರಿಯೂ ತಾನಿರುವ ಶಾಲೆಯ ಬಗ್ಗೆ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಾರೆ.

ಮಕ್ಕಳೇ ತನಗೆ ಪ್ರಶಸ್ತಿ :
ಕಳೆದ ೩೩ ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಣದೊಂದಿಗೆ ಶಾಲೆಯಲ್ಲಿ ಗಣಿತ ಮತ್ತು ಇಂಗ್ಲಿಷ್ ಪಾಠ ಬೋಧಿಸುತ್ತಿರುವ ಗೋಪಾಲ್ ಮಕ್ಕಳ ನೈತಿಕ ಶಿಕ್ಷಣ, ಶೈಕ್ಷಣಿಕ ಸಂಸ್ಕಾರಗಳ ಬಗ್ಗೆ ಅತೀವ ಕಾಳಜಿ ವಹಿಸುತ್ತಾರೆ. ಕುಂದಾಪುರದ ತೆಕ್ಕಟ್ಟೆಯ ಹಿಂದುಳಿದ ಕುಟುಂಬದಿAದ ಬಂದಿರುವ ಇವರು ಬಡ ಮಕ್ಕಳ ಶಿಕ್ಷಣದ ಆಳವರಿತು ಕೆಲಸ ಮಾಡುತ್ತಿದ್ದಾರೆ. ಸ್ಥಳೀಯವಾಗಿ ಹಲವು ಸಂಘ-ಸAಸ್ಥೆಗಳು ಗುರುತಿಸಿದ್ದರೂ, ಜಿಲ್ಲಾ ಅಥವಾ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿಲ್ಲ. ಆ ಬಗ್ಗೆ ಅವರು ಚಿಂತಿಸಿಲ್ಲ. ಪ್ರಶಸ್ತಿಗಾಗಿ ಯಾವತ್ತೂ ದುಂಬಾಲು ಬೀಳದ ಇವರು ಶಾಲಾ ಮಕ್ಕಳೇ ನನ್ನ ಆಸ್ತಿ-ಪ್ರಶಸ್ತಿ ಎನ್ನುತ್ತಾರೆ. ಇನ್ನೂ ೩ ವರ್ಷ ಸೇವೆ ಬಾಕಿ ಉಳಿದಿದ್ದು, ಸದ್ಯ ದೈಹಿಕವಾಗಿ ಬಳಲಿರುವ ಇವರು ಸ್ವಯಂ ನಿವೃತ್ತಿ(ವಿಆರ್‌ಎಸ್) ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಿವೃತ್ತಿ ಬಳಿಕವೂ ಇಲ್ಲೇ ಹತ್ತಿರದಲ್ಲಿ ಮನೆ ಮಾಡಿಕೊಂಡು ಜೀವಿತಾವಧಿಯ ಕೊನೆಯವರೆಗೂ ಈ ಶಾಲೆ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಕಾಣಬೇಕೆನ್ನುವ ಇಂಗಿತ ಇವರದ್ದಾಗಿದೆ.

“ಮಕ್ಕಳ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದ ಈ ಶಾಲೆ ದೈಹಿಕ ಶಿಕ್ಷಕ ಗೋಪಾಲ್ ಸರ್ ಅವರ ಛಲ, ಊರವರ ಬಲ ಹಾಗೂ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್‌ರ ಇಚ್ಛಾಶಕ್ತಿಯಿಂದ ಮತ್ತೆ ಪುನಶ್ಚೇತನಗೊಂಡಿದೆ. ಶಾಲೆಯ ಏಳಿಗೆ ಬಯಸಿರುವ ಎಲ್ಲರೂ ಧನ್ಯರು” ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಆಚಾರ್ಯ ಹೇಳಿದರು.

“ಹಲವು ಎಡರುತೊಡರು ದಾಟಿ ಮುನ್ನಡೆಯುತ್ತಿರುವ ತಿರುವೈಲು ಶಾಲೆಯ ಶತಮಾನೋತ್ಸವ ಸಂಭ್ರಮದ ಹಿಂದೆ ಹಲವರ ಶ್ರಮವಿದೆ. ಮುಖ್ಯವಾಗಿ ಶಾಲೆಗಾಗಿ ತನ್ನ ಸರ್ವಸ್ವವನ್ನೂ ಮುಡಿಪಾಗಿಟ್ಟಿರುವ ದೈಹಿಕ ಶಿಕ್ಷಕ ಗೋಪಾಲ್ ಅವರು ಧನ್ಯರು. ಅವರ ತ್ಯಾಗ, ಎಲ್ಲರನ್ನೂ ಒಗ್ಗೂಡಿಸುವ ಮನೋಬಲದಿಂದ ಶಾಲೆ ಮತ್ತೊಂದು ಬಾರಿ ಏಳಿಗೆಯ ಪಥದತ್ತ ಮುನ್ನಡೆಯುವಂತಾಗಿದೆ” ಎಂದು ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ತಿಳಿಸಿದರು.

“ಶತಮಾನೋತ್ಸವ ಆಚರಿಸುತ್ತಿರುವ, ನಾನು ಕಲಿತ ತಿರುವೈಲು ಶಾಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ತುಂಬ ಸಂತೋಷವಾಗುತ್ತಿದೆ. ತನ್ನಿಂದಾದ ನೆರವು ನೀಡುವೆ. ಮದ್ರಾಸಿನಲ್ಲಿ ಹುಟ್ಟಿ, ಪ್ರಸಕ್ತ ಕಾರ್ಕಳದಲ್ಲಿ ವಾಸ್ತವ್ಯ ಹೂಡಿದ್ದರೂ, ಕುಟುಂಬವು ವಾಮಂಜೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾಗ ಈ ಶಾಲೆಯಲ್ಲಿ ೫ನೇ ತರಗತಿಯವರೆಗೆ ಕಲಿತ್ತಿದ್ದೆ. ಕಲಿತ ಶಾಲೆಯ ಮೇಲಿನ ವ್ಯಾಮೋಹ ನನ್ನನ್ನು ಅನಿರೀಕ್ಷಿತವಾಗಿ ಇಲ್ಲಿಗೆ ಎಳೆದು ತಂದಿದೆ” ಎಂದು ಕಾರ್ಕಳದ ಶಿಲ್ಪಿ ಪಿ. ವೇಲುಸ್ವಾಮಿ ಹೇಳಿದರು.

“ನಾವು ಕಲಿತ ಶಾಲೆಗೆ ಈಗ ೧೦೦ರ ಸಂಭ್ರಮ. ಕೆಲವು ವರ್ಷಗಳ ಹಿಂದೆ ಮುಚ್ಚುವ ಹಂತ ತಲುಪಿದ್ದ ಈ ಶಾಲೆಯು ಸಮಾನ ಮನಸ್ಕರ ಸಕಾರಾತ್ಮಕ ಪ್ರಯತ್ನದಿಂದ ಪುನಾ ಉಸಿರಾಡುವಂತಾಗಿದೆ. ಶಾಲೆಯ ದೈಹಿಕ ಶಿಕ್ಷಕ ಗೋಪಾಲ ಅವರ ಅವಿರತ ಶ್ರಮ, ತ್ಯಾಗ ಮನೋಭಾಗ ಮರೆಯಲಾಗದು. ಅವರು ಈ ಶಾಲೆಯ ಬೆನ್ನೆಲುಬು ಎಂದರೂ ತಪ್ಪಾಗಲಾರದು” ಎಂಬುದು ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರತೋಷ್ ಮಲ್ಲಿಯವರ ಅಭಿಪ್ರಾಯವಾಗಿದೆ.
ಶಾಲೆ ನಡೆದು ಬಂದ ದಾರಿ :
೧೯೨೫ರಲ್ಲಿ ತಿರುವೈಲಿನ ತಂತ್ರಿಬೆಟ್ಟಿವಿನಲ್ಲಿ ೧-೫ನೇ ತರಗತಿಯವರೆಗೆ ಮುಳಿಹುಲ್ಲಿನ ಮೇಲ್ಛಾವಣಿಯ ಕಟ್ಟಡದಲ್ಲಿ ಶಾಲೆ ಆರಂಭಗೊAಡಿತ್ತು. ೧೯೬೫ರಲ್ಲಿ ಕೆಲರೈ ನಾರಾಯಣ ಮಲ್ಲಿ, ಐಕಳ ಪದ್ಮನಾಭ ಶೆಟ್ಟಿ ಮತ್ತಿತರ ಸಮಾನ ಮನಸ್ಕರ ಪ್ರಯತ್ನದಿಂದ ಈಗಿರುವಲ್ಲಿಗೆ ಶಾಲಾ ಕಟ್ಟಡ ಸ್ಥಳಾಂತರಗೊAಡಿತ್ತು. ಆಗ ಶಾಲೆಯಲ್ಲಿ ಸುಮಾರು ೭೦೦ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಖಾಸಗಿ ಶಾಲೆಗಳ ಹಾವಳಿಯಿಂದ ೨೦೧೭ರ ಹೊತ್ತಿಗೆ ತಿರುವೈಲು ಶಾಲೆಯಲ್ಲಿ ಮಕ್ಕಳ ಸಂಖ್ಯೆ ೫೦-೬೦ಕ್ಕೆ ಕ್ಷೀಣಿಸಿತು. ಇನ್ನೇನು ಶಾಲೆ ಮುಚ್ಚುತ್ತದೆ ಎನ್ನುವಾಗ `ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್(ರಿ)’ ಸ್ಥಾಪಿಸಿದ ಶಾಲಾಭಿಮಾನಿ ಹಳೆ ವಿದ್ಯಾರ್ಥಿಗಳ ಗುಂಪು, ಶಾಲೆ ಉಳಿಸುವ ನಿಟ್ಟಿನಲ್ಲಿ ಹಲವು ಯೋಜನೆ ಹಾಕಿಕೊಂಡಿತು. ಎಲ್‌ಕೆಜಿ, ಯುಕೆಜಿ ಜೊತೆಗೆ ೭ನೇ ತರಗತಿವರೆಗಿನ ಶಾಲೆಯಲ್ಲಿ ೧-೫ನೇ ವರೆಗೆ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲಾಯಿತು. ಎಂಆರ್‌ಪಿಎಲ್, ಎನ್‌ಎಂಪಿಟಿಯAತಹ ಕಾರ್ಪೊರೆಟ್ ಕಂಪೆನಿಗಳು ಹಾಗೂ ದಾನಿಗಳ ನೆರವಿನಿಂದ ಹೊಸ ಕಟ್ಟಡ, ಶಾಲಾ ಬಸ್ ಆರಂಭಿಸುತ್ತಲೇ ಶಾಲೆಯಲ್ಲಿ ಮಕ್ಕಳ ಸಂಖ್ಯೆ ತನ್ನಿಂದತಾನೇ ಹೆಚ್ಚಾಯಿತು. ಈಗ ೩೨೦ ಮೇಲ್ಪಟ್ಟು ಮಕ್ಕಳು ಕಲಿಯುತ್ತಿದ್ದಾರೆ.
ಎಪ್ರಿಲ್ ೫ ಮತ್ತು ೬ರಂದು ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಇಂಗ್ಲಿಷ್-ಕನ್ನಡ ಮಾಧ್ಯಮ ಶಾಲೆಯಾಗಿ ಪರಿವರ್ತನೆಗೊಂಡಿರುವ ತಿರುವೈಲು ಶಾಲೆಯಲ್ಲಿ ಶತಮಾನೋತ್ಸವ ಸಂಭ್ರಮದ ಸವಿನೆನಪಿಗಾಗಿ ನೂತನ ಕಟ್ಟಡ ನಿರ್ಮಿಸಲಾಗಿದೆ. ತರಗತಿ ಕೊಠಡಿಗಳು, ಶಾಲಾ ಕಚೇರಿ ಒಳಗೊಂಡಿರುವ ಮೂರಂತಸ್ತಿನ ಈ ಕಟ್ಟಡದ ಮೇಲ್ಗಡೆ ವಿಶಾಲ ಸಭಾಗೃಹವಿದೆ. ಶಾಲಾ ಹಿತದೃಷ್ಟಿಯಿಂದ ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್, ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ(ಎಸ್‌ಡಿಎಂಸಿ), ದಕ್ಷ ಶಿಕ್ಷಕ ವೃಂದ ಕೆಲಸ ಮಾಡುತ್ತಿದೆ. ಶಾಲೆಯಲ್ಲಿ ೮ ಸರ್ಕಾರಿ ನಿಯೋಜಿತ ಶಿಕ್ಷಕರು, ೨ ಸರ್ಕಾರಿ ನಿಯೋಜಿತ ಅತಿಥಿ ಶಿಕ್ಷಕರು ಹಾಗೂ ವಿದ್ಯಾಬೋಧಿನಿ ನಿಯೋಜಿತ ೫ ಮಂದಿ ಶಿಕ್ಷಕರು(ಒಟ್ಟು ೧೫ ಮಂದಿ) ಕಾರ್ಯತತ್ಪರರಾಗಿದ್ದಾರೆ. ಅಕ್ಷರ ದಾಸೋಹದೊಂದಿಗೆ ಅನ್ನದಾಸೋಹವೂ ನಡೆಯುತ್ತಿದೆ. ಶಾಲೆಯ ಏಳಿಗೆಗೆ ಶ್ರಮಿಸಿದ್ದ ಹಿರಿಯ ಜೀವಗಳ ನೆನಪಿಸುತ್ತ ಸೀತಾರಾಮ ಜಾಣು ಶೆಟ್ಟಿ, ಗಿಲ್ಬರ್ಟ್ ಅರನ್ನಾ ದುಬೈ, ಟಿ. ಇಬ್ರಾಹಿಂ ವಾಮಂಜೂರು, ಜಗದೀಶ ಶೇಣವ, ವೇಲುಸ್ವಾಮಿ, ಪ್ರತೋಷ್ ಮಲ್ಲಿ, ಜಯಪ್ರಕಾಶ್(ಜೆಪಿ), ಓಂಪ್ರಕಾಶ್ ಶೆಟ್ಟಿ, ಮೋಹನದಾಸ್ ಬಂಗೇರ, ರಾಕೇಶ್ ಶೆಟ್ಟಿ, ರಘು ಸಾಲ್ಯಾನ್, ಗಿರೀಶ್ ಆಚಾರ್ಯ, ಪುಷ್ಪಾವತಿ(ಮುಖ್ಯ ಶಿಕ್ಷಕಿ), ಗೋಪಾಲ್ ಯು.(ದೈಹಿಕ ಶಿಕ್ಷಣ ಶಿಕ್ಷಕ), ಹಳೆ ವಿದ್ಯಾರ್ಥಿಗಳು, ಶಾಲಾ ಹಿತೈಷಿಗಳು, ಮಕ್ಕಳ ಪಾಲಕರು ಪ್ರಸಕ್ತ ಶಾಲಾಭಿವೃದ್ಧಿಯ ಬೆಂಗಾವಲಾಗಿ ನಿಂತಿದ್ದಾರೆ ಎಂದರೆ ಅತಿಶಯೋಕ್ತಿಯಾಗದು.