ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ “ಆಸ್ವಾದನಮ್ 2025” ಆಹಾರಮೇಳ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಂದಲೇ ಆಯೋಜಿಸಲಾದ “ಆಸ್ವಾದನಮ್ 2025” ಆಹಾರಮೇಳ ಗಮನಸೆಳೆಯಿತು. ಸ್ವತಃ ವಿದ್ಯಾರ್ಥಿಗಳೇ ಚಾಟ್ಸ್, ಗೋಬಿ ಮಂಚೂರಿ, ಬಿರಿಯಾನಿ, ಫ್ರುಟ್ ಸಲಾಡ್, ಬಗೆ ಬಗೆಯ ಪಾನೀಯಗಳು ಹೀಗೆ ವಿವಿಧ ತಿಂಡಿ ತಿನಿಸುಗಳನ್ನು ವ್ಯಾಪಾರ ಮಾಡಿ ವ್ಯಾಪಾರದ ಅನುಭವಗಳನ್ನು ಪಡೆದುಕೊಂಡರು. ಸುಮಾರು 200 ಮಂದಿ ವಿದ್ಯಾರ್ಥಿಗಳು ಒಟ್ಟು 21 ಸ್ಟಾಲ್‌ಗಳಲ್ಲಿ ಆಹಾರ ತಯಾರಿಸಿ ಭರಪೂರ ವ್ಯಾಪರ ಮಾಡಿದ್ದಾರೆ.
ಕಲಿಕೆಯು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿರದೆ ಪ್ರಾಯೋಗಿಕ ಅನುಭವಗಳನ್ನು ಪಡೆದುಕೊಳ್ಳಲು ಈ ಕಾರ್ಯಕ್ರಮವು ಸಹಕಾರಿಯಾಯಿತು.
ಮೊಸರು ಕಡೆಯುವ ಮೂಲಕ ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆಯನ್ನು ನೆರವೇರಿಸಿದಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವಾವಲಂಬಿಯಾಗಿ ಜೀವನವನ್ನು ಧೈರ್ಯದಿಂದ ಎದುರಿಸಲು ಇಂತಹ ಯೋಜನೆಗಳು ಮಹತ್ವಪೂರ್ಣವಾಗಿವೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಲ್ಲಡ್ಕದ ಕುದ್ರೆಬೆಟ್ಟಿನ ಹೋಟೆಲ್ ಸಮುದ್ರ ಇದರ ಮಾಲಕರಾದ ಕರುಣಾಕರ ಶೆಟ್ಟಿ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜು ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರಕಟ್ಟೆ ಪ್ರಸ್ತಾವನೆಗೈದರು. ಉಪ ಪ್ರಾಂಶುಪಾಲರಾದ ಯತಿರಾಜ್ ಪೆರಾಜೆ ಹಾಗೂ ಸುಕನ್ಯಾ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳಾದ ಕು. ಧನುಶ್ರೀ ಸ್ವಾಗತಿಸಿ, ವಿಸ್ಮಿತಾ ವಂದಿಸಿದರು, ಕು. ಪುನೀತಾ ಕಾರ್ಯಕ್ರಮ ನಿರ್ವಹಿಸಿದರು.