ಸೋಷಿಯಲ್ ಮೀಡಿಯಾದ ಆ ಒಂದು ಪೋಸ್ಟ್, ಮೈಸೂರಿನಲ್ಲಿ ಕೋಲಾಹಲ, ಪೊಲೀಸ್ ಠಾಣೆ ಮೇಲೆ ದಾಳಿ

ಮೈಸೂರಿನಲ್ಲಿ ಕಲ್ಯಾಣಗಿರಿ ಬಡಾವಣೆಯ ಯುವಕನೊಬ್ಬ ಹಾಕಿದ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಇದೀಗ ದೊಡ್ಡ ಕಲಹವನ್ನೇ ಸೃಷ್ಟಿಸಿದೆ. ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆತ ಪೋಸ್ಟ್ ಮಾಡಿದ್ದ. ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರವನ್ನು ವ್ಯಂಗ್ಯವಾಗಿ ಹಾಕಲಾಗಿತ್ತು. ಆ ಪೋಸ್ಟ್‌ನಲ್ಲಿ ಒಂದು ಧರ್ಮಕ್ಕೆ ಅವಮಾನ ಮಾಡುವ ರೀತಿ ವಾಕ್ಯಗಳನ್ನು ಬರೆಯಲಾಗಿತ್ತು. ಇದು ದೊಡ್ಡ ಗದ್ದಲಕ್ಕೆ ಕಾರಣವಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಉದಯಗಿರಿ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆ ಪೋಸ್ಟ್ ಒಂದು ಸಮುದಾಯದ ಯುವಕರನ್ನು ರೊಚ್ಚಿಗೆಬ್ಬಿಸಿತ್ತು. ತಕ್ಷಣ ಅವರು ಉದಯಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಪೊಲೀಸರು, ಕೆಲ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಮುಖಂಡರು ಅಲ್ಲಿದ್ದ ಯುವಕರಿಗೆ ಶಾಂತಿ ಕಾಪಾಡುವಂತೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಗುಂಪು ಇದನ್ನು ಕೇಳಲು ಸಿದ್ಧರಿರಲಿಲ್ಲ. ಏಕಾಏಕಿ ಘೋಷಣೆ ಕೂಗುತ್ತಾ ಪೊಲೀಸರು ಹಾಗೂ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದರು. ಇದೀಗ ಮೈಸೂರು ಬೂದಿ ಮುಚ್ಚಿದ ಕೆಂಡದಂತಿದೆ.