ತುಂಬೆ ಡ್ಯಾಮ್ ನಲ್ಲಿ ಜಲಮಟ್ಟ ಕಾಯ್ದುಕೊಳ್ಳುವಂತೆ ರೈತರಿಂದ ಶಾಸಕರಿಗೆ ಆಗ್ರಹ

ಬಂಟ್ವಾಳ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆಯ ಹಿನ್ನಲೆಯಲ್ಲಿ ತುಂಬೆಯಲ್ಲಿ ನೇತ್ರಾವತಿ ನದಿಗೆ ನಿರ್ಮಿಸಲಾದ ನೂತನ ವೆಂಟೆಡ್ ಡ್ಯಾಮ್ ನಲ್ಲಿ ಸ್ಥಳೀಯ ರೈತರಿಗೆ ಯಾವುದೇ ಪೂರ್ವಸೂಚನೆ ನೀಡದೆ 6.30 ಮೀ.ಗೂ ಅಧಿಕವಾಗಿ ನೀರು ಶೇಖರಿಸುತ್ತಿದ್ದು ,ರೈತರು ಆತಂಕಕ್ಕೀಡಾಗಿದ್ದಾರೆ.
ಈ ಮೊದಲು6 ಮೀ.ನೀರು ಶೇಖರಿಸುವುದಾಗಿ ಹೇಳಿಕೆಯನ್ನಿತ್ತು ಮುಳುಗಡೆ ಪ್ರದೇಶಕ್ಕೆ ಪರಿಹಾರ ನೀಡಿದ್ದು,ಇದೀಗ ಏಕಾಏಕಿ ಇದೀಗ ಡ್ಯಾಮ್ ನಲ್ಲಿ 6:30 ಮೀಟರ್ ಗೂ ಅಧಿಕವಾಗಿ ನೀರು ಸಂಗ್ರಹಿಸುತ್ತಿರುವ ಪರಿಣಾಮ ಸ್ಥಳೀಯ ರೈತರ ಗದ್ದೆ ,ತೋಟಗಳು ಮುಳುಗಡೆಅಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ನೇತೃತ್ವದ ನಿಯೋಗ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ತುಂಬೆ ಡ್ಯಾಮಿನಲ್ಲಿ ಜಲಮಟ್ಟ ಕಾಯ್ದು ಕೊಳ್ಳದಿರುವುದರಿಂದ ದಾರಿಹೋಕರು, ಜಾನುವಾರು ಸಹಿತ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರೈತರು ಬೆಳೆಸಿದ ಬೆಳೆ ನೀರುಪಾಲಾಗುತ್ತಿದೆ. ಆರು ಮೀಟರ್ ಗಿಂತ ಹೆಚ್ಚು ನೀರು ನಿಲ್ಲಿಸುವ ಇರಾದೆ ಜಿಲ್ಲಾಡಳಿತಕ್ಕೆ ಇದ್ದಲ್ಲಿ ಮುಂಚಿತವಾಗಿ ತಿಳಿಸಿ,ಸಂತ್ರಸ್ತ ರೈತರಿಗೆ ಕೇಂದ್ರ ಜಲ ಆಯೋಗ ಆದೇಶದನ್ವಯ ವರತೆ ಪ್ರದೇಶವನ್ನು ಸೇರಿಸಿಕೊಂಡು ಮುಳುಗಡೆ ಪ್ರದೇಶಕ್ಕೆ ಸೂಕ್ತ ಪರಿಹಾರ ನೀಡಿದ ಬಳಿಕ ನೀರು ಶೇಖರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.