ಪ್ರಭಾ ಎನ್.ಪಿ ಸುವರ್ಣ ದಂಪತಿಗೆ ಅಭಿಮಾನಿ ಬಳಗದ ಅಭಿನಂದನಾ ಸನ್ಮಾನ

ಮುಂಬಯಿ, ಜ.16: ಬೃಹನ್ಮುಂಬಯಿಯಲ್ಲಿನ ಪ್ರಸಿದ್ಧ ಸಮಾಜ ಸೇವಕರಾದ ಎನ್.ಪಿ ಸುವರ್ಣ ಮತ್ತು ಪ್ರಭಾ ಸುವರ್ಣ ಅಭಿಮಾನಿ ಬಳಗವು ಕಳೆದ ಶನಿವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿನ ಗುರು ನಾರಾಯಣ ಸಭಾಗೃಹದಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬೃಹನ್ಮುಂಬಯಿಯ ಪ್ರಸಿದ್ಧ ಹೃದ್ರೋಗತಜ್ಞ , ಔಟ್ ಲುಕ್ ಪ್ರಸ್ತುತಿಯ ಬೆಸ್ಟ್ ಡಾಕ್ಟರ್ಸ್ ಪ್ರಶಸ್ತಿ ಪುರಸ್ಕೃತ ವೈದ್ಯಾಧಿಕಾರಿ ಡಾ| ಸದಾನಂದ ಆರ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಅಭಿನಂದನಾ ಸಮಾರಂಭದಲ್ಲಿ ಪ್ರಸಿದ್ಧ ಜಾನಪದ ಗಾಯಕ ಗೋ.ನಾ ಸ್ವಾಮಿ ಬೆಂಗಳೂರು, ಮಹೇಶ್ ಹೊಟೇಲು ಸಮೂಹದ ನಿರ್ದೇಶಕಿ ಶಾರದ ಎಸ್.ಕರ್ಕೇರ, ಯಶೋಧ ಎನ್.ಟಿ ಪೂಜಾರಿ, ವೃಂದಾ ಗೋಕರ್ಣ, ಕರ್ನಾಟಕ ಸಂಘ ಅಂಧೇರಿ ಅಧ್ಯಕ್ಷ ಭಾಸ್ಕರ್ ಸುವರ್ಣ ಸಸಿಹಿತ್ಲು ಮತ್ತಿತರ ಗಣ್ಯರು ಪಾಲ್ಗೊಂಡು ಶುಭಾರೈಸಿದರು.
ಕಠಿಣ ಪರಿಶ್ರಮಕ್ಕೆ ದೇವರ ಅನುಗ್ರಹ ಇದ್ದೇಇದೆ. ಎಪ್ಪತ್ತರ ಮೇಲ್ಪಟ್ಟ ಹರೆಯದಲ್ಲೂ ಅಪಾರ ಪರಿಶ್ರಮದಿಂದ ದಾಂಪತ್ಯ ಬಾಳನ್ನು ಕಳೆಯುತ್ತಾ ಸೇವೆಯೊಂದಿಗೆ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ ಸುವರ್ಣ ದಂಪತಿ ಯುವ ಪೀಳಿಗೆಯವರಿಗೆ ಸ್ಫೂರ್ತಿ ಆಗಿದ್ದಾರೆ ಎಂದು ಡಾ| ಸದಾನಂದ ಶೆಟ್ಟಿ ತಿಳಿಸಿದರು.

ಅಂಧೇರಿ ಕನ್ನಡ ಸಂಘದ ಸದಸ್ಯರು, ಅಭಿಮಾನಿ ಬಳಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುವರ್ಣ ದಂಪತಿಯನ್ನು ರಥದಲ್ಲಿ ಬಿಲ್ಲವ ಭವನದೊಳಗೆ ಬರಮಾಡಿಕೊಂಡು ಬ್ಯಾಂಡು, ವಾದ್ಯಗಳ ನೀನಾದದೊಂದಿ ಗೆ ವೇದಿಕೆಗೆ ಬರಮಾಡಿಕೊಂಡ ಶಾಲು ಹೊದಿಸಿ, ಪೇಟ, ಸೌಂದರ್ಯ ಕಿರೀಟ ತೊಡಿಸಿ, ಫಲಪುಷ್ಪ ಸ್ಮರಣಿಕೆಯನ್ನೀಡಿ ಅಭಿನಂದನಾ ಗೌರವ ಸಲ್ಲಿಸಿ ಅಭಿನಂದಿಸಿತು.
ಕಾರ್ಯಕ್ರಮ ನಿಮಿತ್ತ ಭಕ್ತಿ ಸಮೂಹ ಗಾಯನ ಸ್ಪರ್ಧೆ ಏರ್ಪಾಡಿಸಲಾಗಿದ್ದು ದಶ ತಂಡಗಳು ಭಾಗವಹಿಸಿದ್ದವು. ಶಿವಪ್ರಿಯ ಭಜನಾ ಮಂಡಳ ವಿರಾರೋಡ್ (ಪ್ರಥಮ), ನವೋದಯ ಕನ್ನಡ ಸೇವಾ ಸಂಘ ಥಾಣೆ (ದ್ವಿತೀಯ) ಮತ್ತು ದಹಣೂರ್ಕರ್‌ವಾಡಿ ಕನ್ನಡ ಸಂಘ ಕಾಂದಿವಲಿ (ತೃತೀಯ ಸ್ಥಾನ) ಪಡೆಯಿತು. ವಿಜೇತ ಮತ್ತು ಪಾಲ್ಗೊಂಡ ತಂಡಗಳಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಾಸ್ತುತಜ್ಞ ಪಂ| ನವೀನ್‌ಚಂದ್ರ ಸನಿಲ್, ಮಲ್ಲಿಕಾರ್ಜುನ ಬಡಿಗೇರ, ಸುವರ್ಣ ದಂಪತಿ ಪರಿವಾರದ ರಾಜೇಶ್ ಗೋಕರ್ಣ, ಶಶಿಕಾಂತ್ ಕರ್ಕೇರ, ಮಾ| ಆರ್ಯಮಾನ್ ಗೋಕರ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಸಾದ್ ಮತ್ತು ತಂಡ ಬೆಂಗಳೂರು ನಾದಸ್ವರ ಸಂಗೀತ ಕಚೇರಿ ಪ್ರಸ್ತುತ ಪಡಿಸಿತು. ಗಾಯಕ ಗೋ. ನಾ. ಸ್ವಾಮಿ ಜಾನಪದ ಹಾಡುಗಳನ್ನಾಡಿದರು. ಕಳ್ಳಿಗೆ ದಯಾಸಾಗರ್ ಚೌಟ ಹಾಗೂ ದೀಪಾ ಪರೀಶ್ ಶೆಟ್ಟಿ ಡೊಂಬಿವಲಿ ಕಾರ್ಯಕ್ರಮ ನಿರೂಪಿಸಿದರು. ಪ್ರಭಾ ಸುವರ್ಣ ಅಭಿವಂದಿಸಿದರು.