ಬಂಟ್ವಾಳ:ಬ್ಯಾರಿ ಜನಾಂಗದ ಅಭಿವೃದ್ಧಿ ನಿಗಮ ಸ್ಥಾಪನೆ ಆಗಬೇಕು: ಬಿ.ಎಚ್.ಖಾದರ್ ಆಗ್ರಹ
ಬಂಟ್ವಾಳ : ಸುಮಾರು 25 ಲಕ್ಷಕ್ಕಿಂತಲೂ ಅಧಿಕವಾಗಿರುವ ಬ್ಯಾರಿ ಜನಾಂಗದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ದೃಷ್ಟಿಯಿಂದ ಸರಕಾರ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಬೇಕು ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್ ಬಂಟ್ವಾಳ ಅವರು ಆಗ್ರಹಿಸಿದ್ದಾರೆ.ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ಜ.08 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಬ್ಯಾರಿ ಪ್ರತಿನಿಧಿಗಳ ಜಿಲ್ಲಾ ಸಮಾವೇಶದ ಬಿತ್ತಿ ಪತ್ರವನ್ನು ಬಂಟ್ವಾಳದ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಕಛೇರಿಯಲ್ಲಿ ಮಂಗಳವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ನಿಗಮಗಳು ಈಗಾಗಲೇ ಕಾರ್ಯಾಚರಿಸುತ್ತಿದ್ದು ಬ್ಯಾರಿ ಅಭಿವೃದ್ಧಿ ನಿಗಮವು ಸ್ಥಾಪನೆಯಾಗಲೇಬೇಕು, ಈ ನಿಟ್ಟಿನಲ್ಲಿ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಸವಲತ್ತುಗಳನ್ನು ಪಡೆಯಲು ನಮ್ಮ ಪ್ರಯತ್ನ ನಿರಂತರವಾಗಿರಬೇಕು, ಬ್ಯಾರಿ ಪ್ರತಿನಿಧಿಗಳ ಜಿಲ್ಲಾ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.ಬಂಟ್ವಾಳ ಜುಮಾ ಮಸೀದಿ ಖತೀಬ್ ಉಮ್ಮರ್ ದಾರಿಮಿ ದು:ಹಾ ನೆರವೇರಿಸಿದರು. ಬ್ಯಾರಿ ಮಹಾಸಭಾ ಅಧ್ಯಕ್ಷ ಅಝೀಝ್ ಬೈಕಂಪಾಡಿ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ರಹಿಮಾನ್ ಕೋಡಿಜಾಲ್ ಮಾತನಾಡಿದರು.
ಬಂಟ್ವಾಳ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಅರಬಿ, ಉಪಾಧ್ಯಕ್ಷ ಇಸ್ಮಾಯಿಲ್, ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಇಫಾಝತುಲ್ಲಾ ಬಿ.ಎಚ್.ಬಿ, ಬಂಟ್ವಾಳ ಪುರಸಭಾ ನಾಮ ನಿರ್ದೇಶಿತ ಸದಸ್ಯ ರಿಯಾಝ್, ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಇಬ್ರಾಹಿಂ ಸಲೀಂ, ಮುಸ್ಲಿಂ ಸಮಾಜ ಬಂಟ್ವಾಳ ಅದ್ಯಕ್ಷ ಕೆ.ಎಚ್.ಅಬೂಬಕ್ಕರ್, ಪ್ರಮುಖರಾದ ಝಕರಿಯಾ ಮಲಾರ್, ಹನೀಫ್ ಬೆಂಗ್ರೆ, ಬಶೀರ್ ಜೋಕಟ್ಟೆ, ಇಬ್ರಾಹಿಂ ಬಾವಾಕ, ಅಶ್ರಫ್ ಬದ್ರಿಯಾ, ಜಲೀಲ್ ಕೃಷ್ಣಾಪುರ, ಖಾದರ್ ಮಾಸ್ಟರ್ ಬಂಟ್ವಾಳ, ಹುಸೈನ್ ಕೂಳೂರು ಮೊದಲಾದವರು ಭಾಗವಹಿಸಿದ್ದರು.
ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಸ್ವಾಗತಿಸಿ, ಹಾರೂನ್ ರಶೀದ್ ಬಂಟ್ವಾಳ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.