2ನೇ ವರ್ಷದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣಾಂಜಲಿ 2024 ಉದ್ಘಾಟಿಸಿದ ಸರೋಜಿನಿ ಶೆಟ್ಟಿ
ಬಂಟ್ವಾಳ: ವಿದ್ಯಾರ್ಥಿಗಳಲ್ಲಿ ಬೇರೆ ಬೇರೆ ಪ್ರತಿಭೆಗಳಿರುತ್ತದೆ, ವಿವಿಧ ಚಟುವಟಿಕೆಗಳಲ್ಲಿ ಆಸಕ್ತಿಯಿರುತ್ತದೆ. ಅವುಗಳನ್ನು ಪೋಷಕರು ಗುರುತಿಸಿ ಪ್ರೋತ್ಸಾಹ ನೀಡಿದಾಗ ವಿದ್ಯಾರ್ಥಿಗಳು ಪ್ರತಿಭಾವಂತರಾಗುತ್ತಾರೆ ಎಂದು ಹಿರಿಯ ರಂಗ ಭೂಮಿ ಕಲಾವಿದೆ ಸರೋಜಿನಿ ಶೆಟ್ಟಿ ಹೇಳಿದರು. ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಏರ್ಯ ಆಳ್ವ ಫೌಂಡೇಶನ್ ಮೊಡಂಕಾಪು ಇದರ ಸಹಯೋಗದೊಂದಿಗೆ ಏರ್ಯ ಲಕ್ಷಿನಾರಾಯಣ ಆಳ್ವರವರ ಸ್ಮರಣಾರ್ಥ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆದ 2ನೇ ವರ್ಷದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣಾಂಜಲಿ 2024ನ್ನು ಉದ್ಘಾಟಿಸಿ ಮಾತನಾಡಿದರು.
ಸೇವಾಂ ಜಲಿ ಸಂಸ್ಥೆಯ ಮೂಲಕ ಕೃಷ್ಣಕುಮಾರ್ ಪೂಂಜ ಅವರು ಬಡವರಿಗೆ, ರೋಗಿಗಳಿಗೆ ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಸೇವೆ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು. ದೀಪಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಚಿತ್ರಕಲೆಯಂತಹ ಸಹಪಠ್ಯ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಂಡರೆ ಅವರ ಕಲಿಕೆಗೆ ಅಡ್ಡಿಯಾಗುವುದಿಲ್ಲ ಬದಲಾಗಿ ಕಲಿಕೆಗೆ ಪೂರಕವಾಗಲಿದೆ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು. ಶಿಕ್ಷಕ ದೇವದಾಸ್ ವಂದಿಸಿದರು, ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಖಂಡಿಗ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ೫೦೦ ಮಂದಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.