ಮಂಗಳೂರು: ಕಾಂಗ್ರೆಸ್-ಬಿಜೆಪಿ ನಡುವೆ “KSRTC” ಬಸ್ ಕ್ರೆಡಿಟ್ ವಾರ್ ಶುರು
ಮಂಗಳೂರಿನಲ್ಲಿ ಶುರುವಾಯಿತು ಪೊಲಿಟಿಕಲ್ ಬಸ್ ಕ್ರೆಡಿಟ್ ವಾರ್, ಕಾಂಗ್ರೆಸ್-ಬಿಜೆಪಿ ನಡುವೆ “KSRTC” ಬಸ್ ಕ್ರೆಡಿಟ್ ವಾರ್ ಶುರುವಾಗಿದೆ.ಒಂದೇ ಬಸ್ಸಿಗೆ ಮೂರೂ ಕಡೆಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಮಂಗಳೂರು-ಮೂಡಬಿದಿರೆ-ಕಾರ್ಕಳ ರೂಟ್ KSRTC ಬಸ್ ಸಂಚಾರವಿರಲಿಲ್ಲ. ಇಲ್ಲಿ ಖಾಸಗಿ ಬಸ್ ಹಾವಳಿಯಿಂದ ಈವರೆಗೆ KSRTC ಬಸ್ ಸಂಚಾರ ಅಸಾಧ್ಯವಾಗಿತ್ತು. ಹಲವು ವರ್ಷಗಳ ಹೋರಾಟದ ನಂತರ ಈ ಮಾರ್ಗಕ್ಕೆ ಸರಕಾರಿ ಬಸ್ ಭಾಗ್ಯ ಸಿಕ್ಕಿದೆ. ಇದೀಗ ಈ ಕ್ರೆಡಿಟ್ ಯಾರಿಗೆ ಸಿಗಬೇಕು? ಎಂಬ ಪ್ರಶ್ನೆಯ ಜತೆಗೆ ಕ್ರೆಡಿಟ್ ವಾರ್ ಶುರುವಾಗಿದೆ. ಬಸ್ ತರಿಸಿದ್ದು ನಾವೇ..ನಾವೇ ಕೈ -ಕಮಲ ನಾಯಕರ ನಡುವೆ ವಾರ್ ಶುರುವಾಗಿದೆ.
ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಹಾಗು ಕೈ ಮುಖಂಡರ ನಡುವೆ ಕ್ರೆಡಿಟ್ ವಾರ್ ನಡೆದಿದೆ. ಮಂಗಳೂರು ಹಾಗು ಮೂಡಬಿದಿರೆಯಲ್ಲಿ ಕಾಂಗ್ರೆಸ್ ಬಸ್ ಸ್ವಾಗತಿಸಿದ್ದಾರೆ. ಇನ್ನೊಂದು ಕಡೆ ಬಿಜೆಪಿ ಶಾಸಕ ಹಾಗು ಕಾರ್ಯಕರ್ತರಿಂದ ಸ್ವಾಗತ ನಿಂತಿದ್ದರು. ಬಸ್ಸು ತರಿಸಿದ್ದು ನಾವು ಎಂದು ಕೈ ನಾಯಕರು ಸಂಭ್ರಮಿಸಿದ್ದಾರೆ. ಯಾರೋ ಹುಟ್ಟಿಸಿದ ಮಗುವಿಗೆ ತಂದೆಯಾಗಬಾರದು ಎಂದು ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಟಾಂಗ್ ನೀಡಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕಾರಣ ಮಾಡೋದಿಲ್ಲ. ಬೇರೆ ಬೇರೆ ಜನರು ನಾವು ಮಾಡಿದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ಗಳನ್ನ ಹರಿಬಿಟ್ಟಿದ್ದಾರೆ. ಕೆಲವರಿಗೆ ಯಾರೋ ಹುಟ್ಟಿಸಿದ ಮಗುವಿಗೆ ನಾನು ಅಪ್ಪ ಅನ್ನೋ ಖುಷಿ. ತಾಲೂಕಿನಲ್ಲಿ ಕುಳಿತುಕೊಂಡು ನಾನು ಮಾಡಿದ್ದೇನೆ ಎಂದರೆ ಜನ ನಂಬೋದಿಲ್ಲ. ಜನರ ಮಾತನ್ನ ಉಳಿಸಿದ್ದೇವೆ ಅನ್ನೋ ತೃಪ್ತಿ ನಮ್ಮಲ್ಲಿದೆ . ಸರಕಾರಿ ಬಸ್ಸು ಬೇಕು ಅನ್ನೋದು ಮೂಡಬಿದಿರೆ ಜನತೆಯ ಹಲವು ವರ್ಷದ ಆಶಯವಾಗಿತ್ತು. ಖಾಸಗಿ ಬಸ್ಸುಗಳ ಟೈಮ್ ಲಿಮಿಟ್ ನಿಂದ ಎಷ್ಟೋ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ನಾನು 5 ವರ್ಷದ ಹಿಂದೆಯೇ ಭರವಸೆ ನೀಡಿದ್ದೆ, KSRTC ಬಸ್ಸು ಸಂಚಾರದ ಬೇಡಿಕೆ ಬಾಕಿ ಉಳಿದಿತ್ತು. ನಮ್ಮ ಒತ್ತಡಕ್ಕೆ ಮಣಿದು ತಾತ್ಕಾಲಿಕ ಪರವಾನಿಗೆ ಮೂಲಕ ಸರಕಾರಿ ಬಸ್ ಸಂಚಾರ ಆರಂಭವಾಗಿದೆ ಎಂದು ಶಾಸಕರು ಹೇಳಿದ್ದಾರೆ.