ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ
ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
ಕೈಕಂಬ: ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟ ನ. ೨೮ರಂದು ಜರುಗಿತು.ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು ಅವರು ದೀಪ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಶಾಲಾ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳು ಮುಂದೆ ನಡೆಯುವ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ತಳಪಾಯವಾಗಿದ್ದು, ಇದರಲ್ಲಿ ಹೆಚ್ಚು ವಿದ್ಯಾರ್ಥಿಗಳು ಪಾಲು ಪಡೆಯಬೇಕು. ಇದು ಸಾಧನೆಗೆ ಹಾದಿಯಾಗಿದ್ದು, ಪ್ರತಿಭೆಗಳ ಅನಾವರಣ ಇಲ್ಲಿಂದಲೇ ಆಗಬೇಕು. ಸ್ಪರ್ಧೆಗಳಲ್ಲಿ ಸೋಲು-ಗೆಲುವು ಇರುವುದು ಸಹಜವಾಗಿದ್ದು, ಅವೆರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ನಮ್ಮದಾದಾಗ ಜೀವನ ಸುಗಮವಾಗುತ್ತದೆ ಎಂದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ರಮೇಶ್ ಆಚಾರ್ಯ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪಾಠ ಮತ್ತು ಪಠ್ಯೇತರ ಚಟುವಟಿಕೆ ಅವಶ್ಯ. ಅದರಿಂದ ಜೀವನಾನುಭವ ಹೆಚ್ಚುತ್ತದೆ. ಮನಸ್ಸು ಮತ್ತು ಬದುಕು ಅರಳುವಂತೆ ಮಾಡಬೇಕೇ ವಿನಾ, ಅದು ಯಾವತ್ತೂ ಮುದುಡಿ ಹೋಗಬಾರದು. ವಿದ್ಯಾರ್ಥಿ ಜೀವನದಿಂದಲೇ ಶಿಸ್ತು ಇದ್ದಲ್ಲಿ, ಜೀವನದಲ್ಲಿ ಯಶಸ್ಸು ಕಾಣಬಹುದು ಎಂದರು.
ವಿದ್ಯಾರ್ಥಿ ನಾಯಕಿ ಭವಿತಾ ಹಾಗೂ ಶಿಕ್ಷಕ ವೃಂದವು ಕ್ರೀಡಾಕೂಟ ನಡೆಸಿಕೊಟ್ಟರು. ಕ್ರೀಡಾ ನಾಯಕ ನಮನ್ ಕ್ರೀಡಾ ಪ್ರತಿಜ್ಞೆಗೈದರು. ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ನಿರೂಪಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ವಂದಿಸಿದರು.