ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮುಳಿಯ ಶಂಕರ ಭಟ್ ಆಯ್ಕೆ

ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ‘ಎಳೆಯರ ಗೆಳೆಯ ಮುಳಿಯ’ ಎಂದೇ ಪ್ರಸಿದ್ಧರಾಗಿರುವ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ಮಂಚಿ-ಕೊಳ್ನಾಡು ಸರಕಾರಿ ನಡೆಸಲು ಉದ್ದೇಶಿಸಿರುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಂಕರ ಭಟ್ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಹಾಗೂ ಬಂಟ್ವಾಳ ತಾ.ಕಸಾಪ ಅಧ್ಯಕ್ಷ ಬಿ.ವಿಶ್ವನಾಥ್ ಜಂಟಿಯಲ್ಲಿ ತಿಳಿಸಿದ್ದಾರೆ. ಬಂಟ್ವಾಳ ತಾಲೂಕಿನ ಅಳಿಕೆ ಸಮೀಪ ಮುಳಿಯದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ 72ರ ಹರೆಯದ ನಿವೃತ್ತ ಅಧ್ಯಾಪಕ ಮುಳಿಯ ಶಂಕರ ಭಟ್ ಅವರು ಮಕ್ಕಳ ಸಾಹಿತ್ಯದಿಂದ ತೊಡಗಿ ಆಧ್ಯಾತ್ಮ, ಧಾರ್ಮಿಕ ಸಹಿತ ವೈವಿಧ್ಯಮಯ ಸಾಹಿತ್ಯ ರಚನೆಗಳನ್ನು ಮಾಡಿದ್ದು, ಸುಮಾರು 19ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.
ಪತ್ರಕರ್ತರಾಗಿ, ಗಮಕಿಯಾಗಿಯೂ ತೊಡಗಿಸಿಕೊಂಡಿದ್ದ ಅವರ ಕೃತಿ ಕೇರಳ ಶಾಲಾ ಪಠ್ಯದಲ್ಲಿ ಸೇರ್ಪಡೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.2002ರಲ್ಲಿ ಪುತ್ತೂರಿನಲ್ಲಿ ನಡೆದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಅವರು, ಒಡಿಯೂರಿನಲ್ಲಿ 2006ರಲ್ಲಿ ನಡೆದ ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. 2021ರಲ್ಲಿ ಮಂಚಿಯಲ್ಲಿ ನಡೆದ ತಾಲೂಕು ಗಮಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರಿಗೆ ಆಳ್ವಾಸ್ ನುಡಿಸಿರಿ ಸಹಿತ ಹಲವೆಡೆ ಸನ್ಮಾನಗಳು ಸಂದಿವೆ ಎಂದು ಹೇಳಿದ್ದಾರೆ.
ಮಕ್ಕಳ ಕವನಗಳಿಂದ ತೊಡಗಿ, ಕವನ ಸಂಕಲನ, ಆಧ್ಯಾತ್ಮ, ಧಾರ್ಮಿಕ ಸಹಿತ 19 ಕೃತಿಗಳು ಪ್ರಕಟವಾಗಿವೆ. ಗುರೂಜಿ ಮತ್ತು ಶ್ಯಾಮಲಾ ದಂಡಕ ಅನುವಾದಿತ ಕೃತಿಗಳು. ಸಾಹಸಿ –ಸಾಧಕ ಮತ್ತು ಪುನರೂರು ಯಶೋಗಾನ ವ್ಯಕ್ತಿಚಿತ್ರಗಳು ಕೃತಿಗಳಾಗಿವೆ.ಯಕ್ಷಶಾಂತಲಾ, ಯಕ್ಷವಲ್ಲರಿ, ಬಣ್ಣ ಬಣ್ಣದ ಹೂವುಗಳು ಇವರ ಸಂಪಾದಿತ ಕೃತಿಗಳು.ಮುಳಿಯ ಶಂಕರ ಭಟ್ಟರು ಈಗಲೂ ಕೃತಿರಚನೆಯಲ್ಲಿ ತೊಡಗಿಸಿಕೊಂಡಿದ್ದು,6 ಪೌರಾಣಿಕ, 4 ತುಳು ನಾಟಕಗಳು, 12 ನೃತ್ಯರೂಪಕಗಳು , 4 ಕಿರುಕಾವ್ಯ ಕೃತಿಗಳು ಪ್ರಕಟಣೆಗೆ ಬಾಕಿ ಉಳಿದಿವೆ ಎಂದು ಹೇಳಲಾಗಿದೆ.