ಶ್ರದ್ದಾನಂದ ಮಠದಲ್ಲಿ ಕೋಟಿ ಜಪಯಜ್ಞ ಕಾರ್ಯಕ್ರಮ
ಗುಳೇದಗುಡ್ಡ ಸಮೀಪದ ಹಾನಾಪೂರ ಎಸ್.ಪಿ. ಗ್ರಾಮದ ಶ್ರೀ ಜ.ಪೂರ್ಣಾನಂದ ಮಹಾಮುನಿಗಳ ಆಶ್ರಮ, ಶ್ರದ್ದಾನಂದ ಮಠದಲ್ಲಿ ವಿಶ್ವಶಾಂತಿಗಾಗಿ 15ನೇ ವರ್ಷದ ಕೋಟಿ ಜಪಯಜ್ಞ ಹಾಗೂ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ನ.13ರಿಂದ ಅಂದರೆ ಇಂದಿನಿಂದ ನವೆಂಬರ್ 15ರ ವರೆಗೆ ಸೋಮನಕೊಪ್ಪ ಶ್ರೀ.ಜ. ಶ್ರದ್ಧಾನಂದ ಮಹಾಸ್ವಾಮಿಗಳ ಸಂಕಲ್ಪದಂತೆ ಮಠದಲ್ಲಿ ಕೋಟಿ ಜಪಯಜ್ಞ ಕಾರ್ಯಕ್ರಮ ನಡೆಯಲಿದೆ.
ನ.13 ಅಂದರೆ ಇಂದು ಬೆಳಿಗ್ಗೆ ರುದ್ರಾಭಿಷೇಕ, ಜಪಯಜ್ಞ ಬಳಿಕ ಪ್ರವಚನ ಕಾರ್ಯಕ್ರಮ ಮತ್ತು ಮಹಾಪ್ರಸಾದ ವಿತರಣೆ ಕಾರ್ಯ ನಡೆದಿದೆ. ಸಂಜೆ 7ಗಂಟೆಯಿಂದ ಕೂಡಾ ಪ್ರವಚನ ಮತ್ತು ಮಹಾಪ್ರಸಾದ ನಡೆಯುವುದು. ನ.14ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ನ. 15ರಂದು ರುದ್ರಾಭಿಷೇಕದ ಬಳಿಕ ಸುಮಂಗಲೆಯ ಆರತಿಯೊಂದಿಗೆ ಶ್ರೀಗಳ ಭಾವಚಿತ್ರದ ಮೆರವಣಿಗೆ ಕುಂಭಮೇಳ, ಗ್ರಾಮದಲ್ಲಿ ನಡೆಯಲಿದೆ. ಬಳಿಕ ಮಹಾಪ್ರಸಾದ ನಡೆಯಲಿದ್ದು, ನಂತರ ಗ್ರಾಮದಲ್ಲಿ ಸಂಜೆ 5 ಗಂಟೆಗೆ ವಿಜೃಂಭಣೆಯಿಂದ ರಥೋತ್ಸವ ನಡೆಯಲಿದೆ. ನಿತ್ಯ ಜ್ಞಾನಸಿಂಧು ಸಾಂಸ್ಕೃತಿಕ ಸಂಘದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸೋಮನಕೊಪ್ಪದ ಶ್ರೀ ಶಿವಲೋಹಿತ ಸ್ವಾಮಿಗಳು, ಅಂತಾಪೂರದ ಶ್ರೀ ಅಭಿನವ ಶ್ರದ್ಧಾನಂದ ಸ್ವಾಮಿಗಳು, ಶ್ರೀ ನೀಲಕಂಠ ಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದು, ಶ್ರೀ ಕಾಶೀನಾಥ ಸ್ವಾಮಿಗಳು, ಶ್ರೀ ಹೊಳೆಹುಚ್ಚೇಶ್ವರ ಸ್ವಾಮಿಗಳು, ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು, ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು, ಶ್ರೀ.ಜ. ಬಸವರಾಜ ಪಟ್ಟದಾರ್ಯಸ್ವಾಮಿಗಳು, ಹಂಸನೂರಿನ ಅಭಿನವ ಬಸವರಾಜ ಸ್ವಾಮಿಗಳು, ಚಿಕ್ಕಲಗೇರಿಯ ಶ್ರೀ ಜನಾರ್ಧನ ಸ್ವಾಮಿಗಳು, ತುಳಸಿಗೇರಿಯ ಓಂಕಾರೇಶ್ವರ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಶ್ರೀಗಳು, ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ, ಎಚ್.ವೈ. ಮೇಟಿ,ಸಂಸದ ಪಿ.ಸಿ. ಗದ್ದಿಗೌಡರ, ಮಾಜಿಶಾಸಕರಾದ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಎಸ್.ಜಿ. ನಂಜಯ್ಯನಮಠ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.